ಕೇಶವಮೂರ್ತಿ ವಿ.ಬಿ ಹಾವೇರಿ
ರಾಣೆಬೆನ್ನೂರ ಆಡಳಿತ ಸೌಧ (ತಹಸೀಲ್ದಾರ್) ಕಚೇರಿಗೆ ಅಲ್ಲಿನ ಅಧಿಕಾರಿ, ಸಿಬ್ಬಂದಿ ಸ್ವಂತ ಖರ್ಚಿನಲ್ಲಿ ಬಣ್ಣ ಹೊಡೆಸುವ ಮೂಲಕ ಗಮನ ಸೆಳೆದಿದ್ದರು. ಇದರಿಂದ ಪ್ರೇರೇಪಣೆಗೊಂಡ ಹಾವೇರಿಯ ಉಪವಿಭಾಗಾಧಿಕಾರಿ ಎಚ್.ಬಿ.ಚನ್ನಪ್ಪ ಹಾಗೂ ನೂತನ ತಹಸೀಲ್ದಾರ್ ಶರಣಮ್ಮ ಇಲ್ಲಿನ ಅಧಿಕಾರಿ, ಸಿಬ್ಬಂದಿ ಸೇರಿ ಕಚೇರಿಗೆ ಬಣ್ಣ ಹೊಡೆಸುತ್ತಿದ್ದಾರೆ. ಇದರಿಂದ ಸೊರಗಿ ಹೋಗಿದ್ದ ಕಟ್ಟಡಕ್ಕೆ ಹೊಸಕಳೆ ಬಂದಂತಾಗಿದೆ.
ಹಾವೇರಿ ಉಪವಿಭಾಗಾಧಿಕಾರಿ, ತಹಸೀಲ್ದಾರ್, ಗ್ರೇಡ್ 2 ತಹಸೀಲ್ದಾರ್, ಉಪನೋಂದಣಾಧಿಕಾರಿ ಕಚೇರಿ, ಭೂಮಾಪನ ಕಚೇರಿ, ಆಹಾರ ಇಲಾಖೆ, ಇತರ ಇಲಾಖೆಗಳ ಅಧಿಕಾರಿ ಹಾಗೂ ಸಿಬ್ಬಂದಿ ಹಣ ಸಂಗ್ರಹಿಸಿ ಸುಮಾರು 3 ಲಕ್ಷ ರೂ. ವೆಚ್ಚದಲ್ಲಿ ಕಟ್ಟಡಕ್ಕೆ ಬಣ್ಣ ಬಳಿಯಲಾಗುತ್ತಿದೆ.
ಇಲ್ಲಿನ ರೈಲು ನಿಲ್ದಾಣದ ಎದುರಿನ ಎಸಿ, ತಹಸೀಲ್ದಾರ್ ಕಚೇರಿ ಕಟ್ಟಡ ಸಣ್ಣ ಮಳೆಗೂ ಸಂಪೂರ್ಣವಾಗಿ ಸೋರುತ್ತಿತ್ತು. ಕಚೇರಿ ಗಬ್ಬೆದ್ದು ನಾರುತ್ತಿತ್ತು. ಎಲ್ಲೆಂದರಲ್ಲಿ ಕಸ ಹಾಗೂ ಗುಟಕಾ ತಿಂದು ಉಗುಳಿದ ಕಲೆಗಳು, ಬಣ್ಣ ಕಾಣದೇ ಕಟ್ಟಡ ಕಳೆಗುಂದಿತ್ತು. ಶೌಚಗೃಹಗಳು ಸ್ವಚ್ಛತೆ ಹಾಗೂ ನಿರ್ವಹಣೆ ಇಲ್ಲದೇ ಗಬ್ಬು ನಾರುತ್ತಿದ್ದವು. ಇದರಿಂದ ಸಿಬ್ಬಂದಿ ಹಾಗೂ ಕಚೇರಿಗೆ ಭೇಟಿ ನೀಡುವ ಸಾರ್ವಜನಿಕರು ಬೇಸತ್ತು ಹೋಗಿದ್ದರು.
ಕಟ್ಟಡದ ಮೇಲ್ಛಾವಣಿ ಮೇಲೆ ಜಿಲ್ಲಾಧಿಕಾರಿ ಹಾಗೂ ಸ್ಥಳೀಯ ಶಾಸಕರ ಆದೇಶದಂತೆ ತಗಡಿನ ಶೀಟ್ ಅಳವಡಿಸಲಾಗಿದ್ದು, ಸೋರಿಕೆಗೆ ಮುಕ್ತಿ ದೊರೆತಿದೆ. ಕಟ್ಟಡಕ್ಕೆ ಬಣ್ಣ ಬಳಿಯಲಾಗುತ್ತಿದ್ದು, ಕಟ್ಟಡ ಹಾಗೂ ಆವರಣವನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವ ಜವಾಬ್ದಾರಿ ಇಲ್ಲಿನ ಅಧಿಕಾರಿ, ಸಿಬ್ಬಂದಿಯ ಹೆಗಲ ಮೇಲಿದೆ. ಗುಟಕಾ, ಎಲೆ ಅಡಕೆ ತಿಂದು ಎಲ್ಲೆಂದರಲ್ಲಿ ಉಗುಳುವುದನ್ನು ಮೊದಲು ನಿಷೇಧಿಸಬೇಕಿದೆ.
ಇದಕ್ಕಾಗಿ ಪ್ರತ್ಯೇಕ ಭದ್ರತಾ ಸಿಬ್ಬಂದಿ ನೇಮಿಸಿ, ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕಿದೆ. ಈ ಬಗ್ಗೆ ಸಾರ್ವಜನಿಕರೂ ಸಹಕಾರ ನೀಡಬೇಕಿದೆ. ತಹಸೀಲ್ದಾರ್ ಕಚೇರಿ ಗೇಟ್ ಎದುರಿನ ಚರಂಡಿ ಕಸ ಕಡ್ಡಿಯಿಂದ ತುಂಬಿದ್ದು, ರಸ್ತೆಮೇಲೆ ಗಲೀಜು ನೀರು ಹರಿಯುತ್ತದೆ. ಇದನ್ನು ಅಧಿಕಾರಿಗಳು ಸರಿಪಡಿಸಬೇಕಿದೆ.
ಚರ್ಚೆಯಲ್ಲಿದೆ ಸ್ಥಳಾಂತರ ವಿಷಯ
ತಹಸೀಲ್ದಾರ್ ಕಚೇರಿಯನ್ನು ಎಂಜಿ ರಸ್ತೆಯ ಹಳೆಯ ಎಸ್‌ಪಿ ಕಚೇರಿ ಕಟ್ಟಡಕ್ಕೆ ಸ್ಥಳಾಂತರಿಸುವ ವಿಚಾರ ಚರ್ಚೆಯಲ್ಲಿದೆ. ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ, ಶಾಸಕ ರುದ್ರಪ್ಪ ಲಮಾಣಿ ಅವರು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರ ಜತೆಗೆ ಮಾತುಕತೆ ನಡೆಸಿದ್ದು, ಆದಷ್ಟು ಬೇಗ ಈ ಕುರಿತು ಅಂತಿಮ ನಿರ್ಣಯ ಘೋಷಿಸಬೇಕು. ಇದರಿಂದ ಎಸಿ ಹಾಗೂ ತಹಸೀಲ್ದಾರ್ ಕಚೇರಿಯ ಒತ್ತಡ ಕಡಿಮೆಯಾಗಲಿದೆ. ಇದರಿಂದ ಜನರಿಗೂ ಅನುಕೂಲವಾಗಲಿದೆ.
ಗಮನ ಸೆಳೆದಿತ್ತು ‘ವಿಜಯವಾಣಿ’
‘ಸೋರುತಿಹುದು ತಹಸೀಲ್ದಾರ್ ಕಚೇರಿ ಮಾಳಿಗೆ’ ಎಂಬ ಶಿರ್ಷಿಕೆಯಡಿ ‘ವಿಜಯವಾಣಿ’ ಇತ್ತೀಚೆಗೆ ಸರಣಿ ವರದಿ ಪ್ರಕಟಿಸಿತ್ತು. ಕಚೇರಿ ಸಿಬ್ಬಂದಿ ಛತ್ರಿ ಹಿಡಿದು ಕೆಲಸ ಮಾಡುತ್ತಿದ್ದ ಫೋಟೋ ಸಹಿತ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿತ್ತು. ಸ್ಥಳಕ್ಕೆ ಶಾಸಕರು, ಡಿಸಿ ಭೇಟಿ ನೀಡಿ ಕ್ರಮ ಕೈಗೊಂಡಿದ್ದರು. ಪರಿಣಾಮ ಕಟ್ಟಡಕ್ಕೆ ಸಂಪೂರ್ಣ ತಗಡಿನ ಶೀಟ್ ಅಳವಡಿಸಲಾಗಿದ್ದು, ಸೋರಿಕೆಗೆ ಮುಕ್ತಿ ದೊರೆತಿದೆ.
ಸೋಲಾರ್ ಸಮಸ್ಯೆ ಬಗೆಹರಿಸಿ
ಏಳೆಂಟು ವರ್ಷಗಳ ಹಿಂದೆ ಕಟ್ಟಡದ ಮೇಲೆ ಹತ್ತಾರು ಲಕ್ಷ ರೂ. ಖರ್ಚು ಮಾಡಿ ಸೋಲಾರ್ ಪ್ಯಾನೆಲ್ ಅಳವಡಿಸಲಾಗಿತ್ತು. ಆದರೆ, ಸೂಕ್ತ ನಿರ್ವಹಣೆ ಇಲ್ಲದೇ ಆರಂಭದಲ್ಲೇ ಬಂದ್ ಆಗಿತ್ತು. ಸೋಲಾರ್ ಪ್ಯಾನಲ್ ಅಳವಡಿಕೆಯಿಂದಲೇ ಕಟ್ಟಡ ಸೋರಿಕೆ ಉಂಟಾಗಿತ್ತು. ಇದೀಗ ಎಲ್ಲ ಪ್ಯಾನಲ್‌ಗಳನ್ನು ಕಟ್ಟಡದ ಮೇಲೆ ಇಡಲಾಗಿದೆ. ಸಾರ್ವಜನಿಕರ ಹಣ ಪೋಲು ಮಾಡಿದವರ ವಿರುದ್ಧ ಕ್ರಮ ಕೈಗೊಂಡು ಹಣ ವಸೂಲಿ ಮಾಡಬೇಕಿದೆ.
ಕೋಟ್:
ಕಟ್ಟಡದಲ್ಲಿರುವ ಎಲ್ಲ ಅಧಿಕಾರಿ ಹಾಗೂ ಸಿಬ್ಬಂದಿಯಿಂದ ವೈಯಕ್ತಿಕವಾಗಿ ಸ್ವಯಂಪ್ರೇರಣೆಯಿಂದ ಹಣ ಸೇರಿಸಿ ಕಟ್ಟಡಕ್ಕೆ ಬಣ್ಣ ಬಳಿಸಲಾಗುತ್ತಿದೆ. ಇನ್ನುಮುಂದೆ ಕಟ್ಟಡ ಹಾಗೂ ಆವರಣದಲ್ಲಿ ಯಾರೂ ಗುಟಕಾ, ಎಲೆ, ಅಡಕೆ ಉಗಿಯುವಂತಿಲ್ಲ. ಇದನ್ನು ಗಮನಿಸಲೆಂದೇ ಸಿಬ್ಬಂದಿ ನೇಮಿಸಲಾಗುವುದು. ಈ ಕುರಿತು ನಿಗಾ ವಹಿಸುವಂತೆ ಅಧಿಕಾರಿ, ಸಿಬ್ಬಂದಿಗೂ ಸೂಚಿಸಲಾಗುವುದು.
- ಶರಣಮ್ಮ, ತಹಸೀಲ್ದಾರ್