ಜಿಲ್ಲೆ

ಕಬ್ಬಿನ ದರ ನಿಗಧಿಗೆ 7ರವರೆಗೆ ಅವಕಾಶ; ಕಬ್ಬು ಬೆಳೆಗಾರರು, ಸಕ್ಕರೆ ಕಾರ್ಖಾನೆ ಮಾಲೀಕರ ಸಭೆಯಲ್ಲಿ ಡಿಸಿ ಸೂಚನೆ

ಹಾವೇರಿ: ಕಬ್ಬು ಬೆಳೆಗಾರರ ಸಮಸ್ಯೆಗಳ ಕುರಿತು ಚರ್ಚಿಸಲು ಇಲ್ಲಿನ ಜಿಲ್ಲಾಧಿಕಾರಿಯವರ ಕಚೇರಿಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕಬ್ಬು ಬೆಳೆಗಾರರು ಹಾಗೂ ಸಕ್ಕರೆ ಕಾರ್ಖಾನೆ ಮಾಲೀಕರ ಸಭೆಯಲ್ಲಿ ಡಿ.7ರಂದು ಕಬ್ಬಿನ ದರ ನಿಗಧಿಗೊಳಿಸಿ ಎಂದು ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಸಕ್ಕರೆ ಕಾರ್ಖಾನೆ ಮಾಲೀಕರಿಗೆ ಸೂಚನೆ ನೀಡಿದರು.

ಸಭೆಯಲ್ಲಿ ಅನೇಕ ವಿಷಯಗಳ ಬಗ್ಗೆ ಚರ್ಚೆ ನಡೆಯಿತು. ಕೆಲ ಸಮಸ್ಯೆಗಳಿಗೆ ಪರಿಹಾರ ದೊರೆತಿದ್ದು, ಉಳಿದ ಸಮಸ್ಯೆಗಳ ಇತ್ಯರ್ಥಕ್ಕೆ ಸಮಯಾವಕಾಶವನ್ನು ಕಾರ್ಖಾನೆಯವರು ಕೇಳಿದರು. ಹಾಗಾಗಿ, ಈ ವರ್ಷದ ದರ ನಿಗದಿ ಮಾಡಲು ಶನಿವಾರದವರೆಗೆ ಕಾರ್ಖಾನೆ ಮಾಲೀಕರಿಗೆ ಸಮಯಾವಕಾಶ ಕೊಡಲಾಯಿತು.

2023-24ನೇ ಸಾಲಿನ ವರ್ಷದ ರೈತರಿಗೆ ಹಣವನ್ನು ತಡವಾಗಿ ಕೊಟ್ಟಿದ್ದಕ್ಕೆ ಸಕ್ಕರೆ ಸಚಿವಾಲಯ ರೈತರಿಗೆ 52 ಲಕ್ಷ ರೂ. ಬಡ್ಡಿ ಕೊಡಬೇಕೆಂದು ಸಂಗೂರಿನ ಕಾರ್ಖಾನೆಯವರಿಗೆ ಆದೇಶಿಸಿದೆ. ಬಡ್ಡಿ ಸಮೇತ ಬಾಕಿ ಬಿಡುಗಡೆ ಮಾಡುವಂತೆ ಜಿಲ್ಲಾಧಿಕಾರಿಯವರು ಕಾರ್ಖಾನೆ ಅಧಿಕಾರಿಗಳಿಗೆ ತಿಳಿಸಿದರು.

ಪ್ರತಿ ಲೋಡ್ ಕಾಟ ಆದ ತಕ್ಷಣವೇ ರೈತರಿಗೆ ಮೆಸೇಜ್ ಬರಬೇಕು. 15 ದಿನಕ್ಕೊಮ್ಮೆ ಸಕ್ಕರೆ ರಿಕವರಿಯನ್ನು ರೈತ ಮುಖಂಡರ ಜೆತೆ ಮಾಡಿಸಬೇಕು. ಹತ್ತು ದಿನಕ್ಕೊಮ್ಮೆ ಬಿಲ್ ಹಾಕಬೇಕು. ತೂಕ ಮತ್ತು ಅಳತೆಯುವರು ರೈತ ಮುಖಂಡರನ್ನು ಇಟ್ಟುಕೊಂಡು ಪರಿಶೀಲಿಸಬೇಕು. ಕಾರ್ಖಾನೆ ಆವರಣದಲ್ಲಿ ಹಾಳಾದ ರಸ್ತೆಯನ್ನು ದುರಸ್ತಿ ಮಾಡಬೇಕು. ವಾಯುಮಾಲಿನ್ಯ ಅಧಿಕಾರಿಗಳು ಕಾರ್ಖಾನೆಗೆ ಹಾಗೂ ಕಾರ್ಖಾನೆ ಸುತ್ತಮುತ್ತಲಿನ ಹಳ್ಳಿಗಳಿಗೆ ಹೋಗಿ ಕಾರ್ಖಾನೆಯಿಂದ ಆಗುವ ತೊಂದರೆಗಳನ್ನು ವೀಕ್ಷಣೆ ಮಾಡಬೇಕೆಂದು ಜಿಲ್ಲಾಧಿಕಾರಿಯವರು ಆದೇಶ ಮಾಡಿದರು.

ಸಭೆಯಲ್ಲಿ ರಾಜ್ಯ ಕಬ್ಬು ಬೆಳೆಗಾರ ಸಂಘದ ಅಧ್ಯಕ್ಷ ಭುವನೇಶ್ವರ ಶಿಡ್ಲಾಪೂರ, ರಾಜಶೇಖರ ಬೆಟಗೇರಿ, ಈರಣ್ಣ ಮಾಕನೂರ, ಮಂಜುನಾಥ ಅಸುಂಡಿ, ದಾನೇಶಪ್ಪ, ಗಣೇಶ ಸವಣೂರು, ಮುತ್ತಣ್ಣ ಗುಡಗೇರಿ, ಆನಂದ ಶಂಕರಗೌಡ, ಸಕ್ಕರೆ ಕಾರ್ಖಾನೆಗಳ ಮಾಲೀಕರು, ಅಧಿಕಾರಿಗಳು, ಸೇರಿದಂತೆ ಹಲವು ರೈತರು ಪಾಲ್ಗೊಂಡಿದ್ದರು.

ಕಟಾವು ವೆಚ್ಚ ಕಾರ್ಖಾನೆ ಭರಿಸಲಿ

ಗೇಟ್ ಕೇನ್ ಮಾಡದೇ ಫೀಲ್ಡ್ ಕೇನ್ ಕಬ್ಬು ಖರೀದಿ ಮಾಡಬೇಕು. ಕಬ್ಬು ಕಟಾವು ಹಾಗೂ ಸಾಗಾಣಿಕೆ ವೆಚ್ಚವನ್ನು ಕಾರ್ಖಾನೆಗಳು ಭರಿಸಬೇಕು ಎಂದು ರೈತರು ಪಟ್ಟುಹಿಡಿದಾಗ ಮಾಲೀಕರ ಜತೆಗೆ ಮತ್ತೊಂದು ಸಲ ಚರ್ಚೆ ಮಾಡಿ ರೈತರ ಹಾಗೂ ಕಾರ್ಖಾನೆ ಮಾಲೀಕರ ಸಭೆ ಕರೆಯುತ್ತೇವೆ ಎಂದು ಕಾರ್ಖಾನೆ ಅಧಿಕಾರಿಗಳು ಆಶ್ವಾಸನೆ ಕೊಟ್ಟರು.