ಜಿಲ್ಲೆ

ಟೇಕ್ವಾಂಡೋ ಟೂರ್ನಿಯಲ್ಲಿ ಮಂಜುನಾಥ, ಸಾಯಿಪ್ರಸಾದ ಪ್ರಥಮ; ರಾಜ್ಯಮಟ್ಟದಿಂದ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಪಿಯು ವಿದ್ಯಾರ್ಥಿಗಳು

ಕೇಶವಮೂರ್ತಿ ಬೇಲೂರಪ್ಪನವರ

ಹಾವೇರಿ: ನಗರದ ಹೊಸಮನಿ ಸಿದ್ದಪ್ಪ ಜಿಲ್ಲಾ ಕ್ರೀಡಾಂಗಣದಲ್ಲಿ ಶಾಲಾ ಶಿಕ್ಷಣ ಇಲಾಖೆಯ (ಪದವಿ ಪೂರ್ವ) ಕೇಂದ್ರ ಕಚೇರಿ ಹಾಗು ಜಿಲ್ಲಾ ಉಪನಿರ್ದೇಶಕರ ಕಚೇರಿಯ ಸಹಯೋಗದಲ್ಲಿ ಡಿ.4. 5ರಂದು ಹಮ್ಮಿಕೊಂಡಿದ್ದ ಟೇಕ್ವಾಂಡೋ ಪಂದ್ಯಾವಳಿಯಲ್ಲಿ ಬಾಲಕರ ವಿಭಾಗದಲ್ಲಿ ಮಂಜುನಾಥ, ನಿತಿನ್, ಸಾಯಿಪ್ರಸಾದ ಸೇರಿದಂತೆ ಹಲವು ವಿದ್ಯಾರ್ಥಿಗಳು ವಿಜೇತರಾಗಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಮೊದಲ ಬಾರಿಗೆ ಜಿಲ್ಲೆಯಲ್ಲಿ ಆಯೋಜಿಸಿರುವ ಕ್ರೀಡಾಕೂಟಕ್ಕೆ ಬುಧವಾರ ರಾತ್ರಿ ಚಾಲನೆ ನೀಡಲಾಗಿತ್ತು. 28 ಜಿಲ್ಲೆಗಳಿಂದ 120ಕ್ಕೂ ಅಧಿಕ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಭಾಗವಹಿಸಿದ್ದರು. ನಗರದ ವಿವಿಧ ಹಾಸ್ಟೆಲ್, ಹೋಟೆಲ್‌ಗಳಲ್ಲಿ ವಿದ್ಯಾರ್ಥಿಗಳು, ಅತಿಥಿಗಳಿಗೆ ವಸತಿ, ಊಟದ ವ್ಯವಸ್ಥೆ ಮಾಡಲಾಗಿತ್ತು. ತೂಕದ ಆಧಾರದಲ್ಲಿ ಬಾಲಕ ಹಾಗೂ ಬಾಲಕಿಯರ ಪ್ರತ್ಯೇಕ ವಿಭಾಗಗಳಲ್ಲಿ ಪಂದ್ಯ ನಡೆಸಲಾಯಿತು.

ಬಾಲಕರ ವಿಭಾಗದ ಫಲಿತಾಂಶ ರಾತ್ರಿ ವೇಳೆಗೆ ಪ್ರಕಟವಾಗಿದ್ದು, ಬಾಲಕಿಯರ ವಿಭಾಗದ ಫಲಿತಾಂಶ ಬಾಕಿ ಇದೆ. ರಾತ್ರಿ ಪಂದ್ಯ ಮುಕ್ತಾಯವಾದ ಬಳಿಕ ವಿಜೇತರಿಗೆ ಪದಕ ಹಾಗೂ ಪ್ರಮಾಣ ಪತ್ರ ವಿತರಿಸಲಾಯಿತು. ವಿಜೇತರು ಶೀಘ್ರದಲ್ಲೇ ಉತ್ತರ ಪ್ರದೇಶದಲ್ಲಿ ಜರುಗಲಿರುವ ರಾಷ್ಟ್ರಮಟ್ಟದ ಪಂದ್ಯದಲ್ಲಿ ರಾಜ್ಯದ ಪರವಾಗಿ ಭಾಗವಹಿಸಲಿದ್ದಾರೆ.

42ರಿಂದ 45 ಕೆಜಿ ತೂಕದ ಬಾಲಕರ ವಿಭಾಗದಲ್ಲಿ ತುಮಕೂರು ಜಿಲ್ಲೆಯ ಮಂಜುನಾಥ ವಿ.ಎನ್., 45-48 ಕೆಜಿ ವಿಭಾಗದಲ್ಲಿ ಬೆಂಗಳೂರು ಉತ್ತರ ಜಿಲ್ಲೆಯ ನಿತಿನ್ ಎಂ., 48-51 ಕೆಜಿ ವಿಭಾಗದಲ್ಲಿ ಧಾರವಾಡದ ಸಾಯಿಪ್ರಸಾದ ಕ್ಷಾತ್ರತೇಜ, 51-55 ಕೆಜಿ ವಿಭಾಗದಲ್ಲಿ ಬೆಂಗಳೂರು ಉತ್ತರ ಜಿಲ್ಲೆಯ ಮ್ಯಾಥೀವ್ ಜೆ., 55-59 ಕೆಜಿ ವಿಭಾಗದಲ್ಲಿ ತುಮಕೂರಿನ ಯಶವಂತ ಟಿ.ಎಂ., 59-65 ಕೆಜಿ ವಿಭಾಗದಲ್ಲಿ ಬೆಂಗಳೂರು ಉತ್ತರ ವಿಭಾಗದ ಶ್ರೇಯಸ್ ಜೆ. ಪ್ರಥಮ ಸ್ಥಾನ ಪಡೆದರು. ಪ್ರಥಮ ಸ್ಥಾನ ಪಡೆದವರಿಗೆ ಚಿನ್ನದ ಪದಕ, ಪ್ರಮಾಣ ಪತ್ರ ವಿತರಿಸಿ ಗೌರವಿಸಲಾಯಿತು.

ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಡಾ.ಎಚ್.ಉಮೇಶಪ್ಪ, ರಾಜ್ಯ ಟೇಕ್ವಾಂಡೋ ಸಂಸ್ಥೆಯ ಕಾರ್ಯದರ್ಶಿ ಬಿ.ಎಂ.ಕೃಷ್ಣಮೂರ್ತಿ, ಉಪಾಧ್ಯಕ್ಷ ಪರಪ್ಪ ಕ್ಷಾತ್ರತೇಜ, ಅಂತಾರಾಷ್ಟ್ರೀಯ ತೀರ್ಪುಗಾರ್ತಿ ಅಂಜಲಿ ಪರಪ್ಪ, ಜಿಲ್ಲಾ ಟೇಕ್ವಾಂಡೋ ಸಂಸ್ಥೆಯ ಅಧ್ಯಕ್ಷ ಸಲೀಂ ಎಚ್. ಪಟ್ಟೇಗಾರ, ಜಿಲ್ಲಾ ಕಾರ್ಯದರ್ಶಿ ವಿಜಯ ಅಗಡಿ, ಪದವಿಪೂರ್ವ ಕಾಲೇಜ್‌ಗಳ ದೈಹಿಕ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಆರ್.ಎಂ.ಕರೆಗೌಡರ, ಇತರರು ಪಾಲ್ಗೊಂಡಿದ್ದರು.