ಹಾವೇರಿ: ಎಸ್ಸೆಸ್ಸೆಲ್ಸಿ ಪರೀಕ್ಷೆ 1ರಲ್ಲಿ ಫೇಲಾದ ವಿದ್ಯಾರ್ಥಿಗಳಿಗಾಗಿ ಬೇಸಿಗೆ ರಜೆಯಲ್ಲಿ ಮೇ 15ರಿಂದ ಆಯೋಜಿಸಿದ್ದ ವಿಶೇಷ ತರಗತಿಗಳನ್ನು ಮುಂದೂಡಲಾಗಿದ್ದು, ಮೇ 29ರಿಂದ ಜೂನ್ 13ರವರೆಗೆ ತರಗತಿ ನಡೆಸುವಂತೆ ಸರ್ಕಾರ ಆದೇಶಿಸಿದೆ.
ಬೇಸಿಗೆ ರಜೆಯ ನಡುವೆಯೂ ಚುನಾವಣೆ ಕರ್ತವ್ಯ ಮಾಡಿ ಸುಸ್ತಾಗಿದ್ದೇವೆ. ಇರುವ ಕೆಲ ದಿನ ರಜೆಯಲ್ಲಿ ಕುಟುಂಬದೊಡನೆ ಕಾಲ ಕಳೆಯಲು, ಅನಾರೋಗ್ಯ ಮತ್ತಿತರ ಸಮಸ್ಯೆಗೆ ಚಿಕಿತ್ಸೆ ಪಡೆಯಲು ವಿಶೇಷ ತರಗತಿಯಿಂದ ಸಮಸ್ಯೆಯಾಗುತ್ತಿದೆ. ಈ ಕೂಡಲೇ ಮುಂದೂಡಿ ಎಂದು ಶಿಕ್ಷಕರು ಸಂಘಟನೆಗಳ ಮೂಲಕ ಒತ್ತಾಯಿಸಿದ್ದರು. ಈ ನಡುವೆ ವಿಶೇಷ ತರಗತಿಗಳಿಗೆ ಅನೇಕ ವಿದ್ಯಾರ್ಥಿಗಳು ಸೇರಿದಂತೆ ಶಿಕ್ಷಕರೂ ಗೈರಾಗಿದ್ದರು. ಈ ಹಿನ್ನೆಲೆಯಲ್ಲಿ ಸರ್ಕಾರ ತರಗತಿ ದಿನಾಂಕ ಮುಂದೂಡಿದೆ. ಎಸ್ಸೆಸ್ಸೆಲ್ಸಿ ಪರೀಕ್ಷೆ 2 ಜೂನ್ 14ರಿಂದ ಆರಂಭವಾಗಲಿದೆ ಎಂದು ಶಾಲಾ ಶಿಕ್ಷಣ ಇಲಾಖೆ ತಿಳಿಸಿದೆ. ಇದರಿಂದ ಶಿಕ್ಷಕರು ನಿಟ್ಟುಸಿರು ಬಿಟ್ಟಿದ್ದಾರೆ.