ಜಿಲ್ಲೆ

33 ಶಾಲೆಗಳಿಗೆ ಶೇ.100ರಷ್ಟು ಫಲಿತಾಂಶ; 14 ಸರ್ಕಾರಿ ಸ್ಕೂಲ್‌ಗಳಿಂದ ನೂರರಷ್ಟು ಸಾಧನೆ; ಜಿಲ್ಲಾಡಳಿತ, ಶಿಕ್ಷಣ ಇಲಾಖೆ ಶ್ರಮದ ಪ್ರತಿಫಲ

ಕೇಶವಮೂರ್ತಿ ವಿ.ಬಿ. ಹಾವೇರಿ

ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ರಾಜ್ಯದ ಟಾಪ್ ಟೆನ್ ಜಿಲ್ಲೆಗಳ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲೇಬೇಕು ಎಂದು ಜಿಲ್ಲಾಡಳಿತ ಮತ್ತು ಶಿಕ್ಷಣ ಇಲಾಖೆ ಪಣತೊಟ್ಟು ಫಲಿತಾಂಶ ಸುಧಾರಣೆಗಾಗಿ ವಿವಿಧ ಕ್ರಮಗಳನ್ನು ಕೈಗೊಂಡ ಪರಿಣಾಮ ಕಳೆದ ವರ್ಷ 15ನೇ ಸ್ಥಾನದಲ್ಲಿದ್ದ ಜಿಲ್ಲೆ ಈ ಬಾರಿ 2024-25ನೇ ಸಾಲಿನಲ್ಲಿ 13ನೇ ಸ್ಥಾನಕ್ಕೆ ಜಿಗಿದಿದೆ. ಇದರ ಪರಿಣಾಮವಾಗಿ ಜಿಲ್ಲೆಯ 33 ಶಾಲೆಗಳು ಶೇ.100ರಷ್ಟು ಫಲಿತಾಂಶ ಪಡೆದಿವೆ. ಈ ಬಾರಿಯ ಪರೀಕ್ಷೆಯಲ್ಲಿ ಜಿಲ್ಲೆಯ ಒಟ್ಟು 33 ಶಾಲೆಗಳು ಶೇ.100ರಷ್ಟು ಫಲಿತಾಂಶ ಪಡೆದ ಸಾಧನೆ ಮಾಡಿವೆ. ಅದರಲ್ಲಿ 14 ಸರ್ಕಾರಿ ಶಾಲೆಗಳು ಶೇ.100ರಷ್ಟು ಫಲಿತಾಂಶ ಪಡೆದಿವೆ. 2 ಅನುದಾನಿತ ಹಾಗೂ 15 ಖಾಸಗಿ ಶಾಲೆಗಳ ವಿದ್ಯಾರ್ಥಿಗಳು ಶೇ.100ರಷ್ಟು ತೇರ್ಗಡೆ ಹೊಂದಿದ ಸಾಧನೆ ಮಾಡಿದ್ದಾರೆ. ಈ ವರ್ಷ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಯಾಲಕ್ಕಿ ನಾಡು ಹಾವೇರಿ ಜಿಲ್ಲೆ ಶೇ.69.03ರಷ್ಟು ಫಲಿತಾಂಶ ಪಡೆಯುವ ಮೂಲಕ ರಾಜ್ಯಕ್ಕೆ 13ನೇ ಸ್ಥಾನ ಪಡೆದುಕೊಂಡಿದೆ. ಟಾಪ್ ಟೆನ್ ಲಿಸ್ಟ್‌ನಲ್ಲಿ ಇಲ್ಲವಾದರೂ ಹತ್ತಿರದವರೆಗೆ ಸಾಗಿರುವುದು ಸಮಾಧಾನಕರ ಸಂಗತಿಯಾಗಿದೆ. ಇನ್ನಷ್ಟು ಪ್ರಯತ್ನ ಪಟ್ಟರೆ 2025-26ರಲ್ಲಿ ಟಾಪ್ ಟೆನ್ ಅಥವಾ ಟಾಪ್ ಐದನೇ ಸ್ಥಾನದೊಳಗೆ ಸ್ಥಾನ ಗಿಟ್ಟಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂಬುದು ಶಿಕ್ಷಣ ತಜ್ಞರ ಅಭಿಪ್ರಾಯವಾಗಿದೆ. ಜ್ಞಾನ ಸಂಗಮ ಪುಸ್ತಕ ಶಿಕ್ಷಣ ಇಲಾಖೆಯಿಂದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ‘ಜ್ಞಾನ ಸಂಗಮ’ ಹೆಸರಿನಡಿ ವಿಶೇಷ ಪುಸ್ತಕ ಪ್ರಕಟಿಸಿ ವಿತರಿಸಲಾಗಿತ್ತು. ಬದಲಾದ ಪಠ್ಯಕ್ಕೆ ಅನುಗುಣವಾಗಿ ವಾರ್ಷಿಕ ಪರೀಕ್ಷೆಗಳ ಮಾದರಿ ಪ್ರಶ್ನೋತ್ತರಗಳು ಹಾಗೂ ಪಠ್ಯದ ಅಂಶಗಳನ್ನು ಒಳಗೊಂಡ ಈ ಪುಸ್ತಕ ಮಕ್ಕಳ ಪರೀಕ್ಷೆಗೆ ಸಹಕಾರಿಯಾಯಿತು ಎಂದು ಪ್ರೌಢಶಾಲೆಯ ಹಿರಿಯ ಶಿಕ್ಷಕರೊಬ್ಬರು ಅಭಿಪ್ರಾಯಪಟ್ಟಿದ್ದಾರೆ. ಬಾಕ್ಸ್ ಕೈಹಿಡಿದ ಮೇಲುಸ್ತುವಾರಿ, ಪಾಲಕರ ಸಭೆ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮವರ, ಹಿಂದಿನ ಜಿಪಂ ಸಿಇಒ ಅಕ್ಷಯ ಶ್ರೀಧರ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಮೇಲೆ ನಿರಂತರ ಮೇಲುಸ್ತುವಾರಿ ವಹಿಸಿದ್ದರು. ಮಕ್ಕಳಿಗೆ ಅಗತ್ಯ ಮಾರ್ಗದರ್ಶನ ಮಾಡುವುದು, ಮೇಲಿಂದ ಮೇಲೆ ಪ್ರಶ್ನೆಪತ್ರಿಕೆಗಳನ್ನು ಕೊಟ್ಟು ಮಾದರಿ ಪರೀಕ್ಷೆ ಆಯೋಜನೆ ಮಾಡಿದ್ದು, ಮೂರು ಬಾರಿ ಪಾಲಕರ ಸಭೆ ಮಾಡಿ, ಅಗತ್ಯ ಸಲಹೆ, ಸೂಚನೆಗಳನ್ನು ನೀಡಿದ್ದು, ವಿಜಯವಾಣಿ, ಸೇರಿದಂತೆ ವಿವಿಧ ಸಂಸ್ಥೆಗಳ ಸಹಯೋಗದಲ್ಲಿ ವಿದ್ಯಾರ್ಥಿಗಳಿಗೆ ವಿಶೇಷ ತರಬೇತಿ, ಕಾರ್ಯಾಗಾರ ಏರ್ಪಡಿಸಿದ್ದು ಫಲಿತಾಂಶ ಹೆಚ್ಚಳಕ್ಕೆ ಕಾರಣವಾಯಿತು ಎನ್ನುತ್ತಾರೆ ಶಿಕ್ಷಣ ಇಲಾಖೆ ಡಯಟ್ ಕಾಲೇಜ್ ಪ್ರಾಚಾರ್ಯ ಗಿರೀಶ ಪದಕಿ. ಬಾಕ್ಸ್ ಶತಕ ಭಾರಿಸಿದ ಸರ್ಕಾರಿ ಶಾಲೆಗಳು ಬ್ಯಾಡಗಿ ಅಲ್ಪಸಂಖ್ಯಾತರ ಮುರಾರ್ಜಿ ವಸತಿ ಶಾಲೆ, ಹಾನಗಲ್ಲ ತಾಲೂಕು ಹಿರೇಬಾಸೂರಿನ ಸರ್ಕಾರಿ ಪ್ರೌಢಶಾಲೆ, ಯಳವಟ್ಟಿಯ ಮುರಾರ್ಜಿ ದೇಸಾಯಿ ವಸತಿ ಶಾಲೆ, ಹಾವೇರಿ ತಾಲೂಕು ಕರ್ಜಗಿ ಅಲ್ಪಸಂಖ್ಯಾತರ ಮುರಾರ್ಜಿ ದೇಸಾಯಿ ಶಾಲೆ, ಹಾವೇರಿಯ ಕಿತ್ತೂರ ರಾಣಿ ಚನ್ನಮ್ಮ ವಸತಿ ಶಾಲೆ, ರಟ್ಟಿಹಳ್ಳಿ ಕುಡಪತಿಯ ಶ್ರೀಮತಿ ಇಂದಿರಾ ಗಾಂಧೀ ವಸತಿ ಶಾಲೆ, ರಾಣೆಬೆನ್ನೂರ ತಾಲೂಕು ಹಿರೇಬಿದರಿಯ ಕಿತ್ತೂರ ರಾಣಿ ಚನ್ನಮ್ಮ ವಸತಿ ಶಾಲೆ, ಸವಣೂರ ತಾಲೂಕು ಬೇವಿನಹಳ್ಳಿಯ ಮುರಾರ್ಜಿ ದೇಸಾಯಿ ವಸತಿ ಶಾಲೆ, ಹಿರೇಮರಳಿಹಳ್ಳಿಯ ಇಂದಿರಾ ಗಾಂಧೀ ವಸತಿ ಶಾಲೆ, ಜೇಕಿನಕಟ್ಟಿಯ ಮುರಾರ್ಜಿ ದೇಸಾಯಿ ವಸತಿ ಶಾಲೆ, ಶಿಗ್ಗಾಂವಿ ತಾಲೂಕು ಬಾಡ ಗ್ರಾಮದ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ, ಶಿವಪುರ ದುಂದಶಿಯ ಕಿತ್ತೂರ ರಾಣಿ ಚನ್ನಮ್ಮ ವಸತಿ ಶಾಲೆ ಶೇ.100ರಷ್ಟು ಫಲಿತಾಂಶ ಪಡೆದಿವೆ.

ಕೋಟ್:

ಟಾಪ್ ಟೆನ್ ಒಳಗಿನ ಸ್ಥಾನ ಪಡೆಯುವುದು ಜಿಲ್ಲಾಧಿಕಾರಿಯವರು ನಮ್ಮ ಗುರಿ ಆಗಿತ್ತು. ಈ ಬಾರಿ 13ನೇ ಸ್ಥಾನ ಪಡೆದಿದ್ದು, ಮುಂದಿನ ವರ್ಷ ಮತ್ತಷ್ಟು ಉತ್ತಮ ಫಲಿತಾಂಶ ಪಡೆಯಲು ಸ್ಪೂರ್ತಿಯಾಗಿದೆ. ಫಲಿತಾಂಶ ಸುಧಾರಣೆಗೆ ಕೈಜೋಡಿಸಿದ ಎಲ್ಲರಿಗೂ ಅಭಿನಂದನೆಗಳು.

- ಸುರೇಶ ಹುಗ್ಗಿ, ಉಪನಿರ್ದೇಶಕ, ಶಾಲಾ ಶಿಕ್ಷಣ ಇಲಾಖೆ

ಕೋಟ್: 

ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ ಮತ್ತು ಶಿಕ್ಷಣ ಇಲಾಖೆ ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗೆ ಅನೇಕ ಕ್ರಮಗಳನ್ನು ತೆಗೆದುಕೊಂಡಿದ್ದು ಈ ಬಾರಿ ಯಶಸ್ವಿಯಾಗಿದೆ. ಹಲವು ಸಂಸ್ಥೆಗಳು, ಮಕ್ಕಳು, ಪಾಲಕರು ಕೈಜೋಡಿಸಿದ್ದರಿಂದ ಇದು ಸಾಧ್ಯವಾಯಿತು. ಮತ್ತಷ್ಟು ಹೊಸ ಪ್ರಯೋಗಗಳೊಂದಿಗೆ ಮುಂದಿನ ವರ್ಷದ ಪರೀಕ್ಷೆಗೆ ತಯಾರಾಗಲು ಇಲಾಖೆ ಸಿದ್ಧತೆ ನಡೆಸುತ್ತದೆ.

- ಗಿರೀಶ ಪದಕಿ, ಉಪನಿರ್ದೇಶಕರು, (ಅಭಿವೃದ್ಧಿ) ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ