ಹಾವೇರಿ: ಪ್ರಸಕ್ತ 2024-25ನೇ ಸಾಲಿನಲ್ಲಿ ಪರಿಶಿಷ್ಟ ಜಾತಿ ಉಪ ಯೋಜನೆ ಹಾಗೂ ಪರಿಶಿಷ್ಟ ಪಂಗಡ ಉಪಯೋಜನೆ ಅಡಿಯಲ್ಲಿ 2023ನೇ ಕ್ಯಾಲಂಡರ್ ವರ್ಷದಲ್ಲಿ (01-01-2023 ರಿಂದ 31-12-2023) ಅಂತರಾಷ್ಟ್ರೀಯ, ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ಅಧಿಕೃತ ಕ್ರೀಡಾಕೂಟಗಳಲ್ಲಿ ಪದಕ ವಿಜೇತ ಪರಿಶಿಷ್ಟ ಜಾತಿ ಮತ್ತು ಪಂಗಡ ಕ್ರೀಡಾಪಟುಗಳಿಂದ ಪ್ರೋತ್ಸಾಹಧನ ಸೌಲಭ್ಯಕ್ಕೆ ಅರ್ಜಿ ಆಹ್ವಾನಿಸಲಾಗಿದೆ.
ಕ್ರೀಡಾಪಟುಗಳು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದವರಾಗಿರಬೇಕು. ಪ್ರೋತ್ಸಾಹಧನವನ್ನು ಕರ್ನಾಟಕದ ಕ್ರೀಡಾಪಟುಗಳಿಗೆ ಮಾತ್ರ ನೀಡುವುದು. ಅಂತಾರಾಷ್ಟ್ರೀಯ, ರಾಷ್ಟ್ರೀಯ, ರಾಜ್ಯ ಮಟ್ಟದ ತಂಡಗಳನ್ನು ಪ್ರತಿನಿಧಿಸಿ ಸರ್ಕಾರದಿಂದ ಅಂಗೀಕೃತವಾದಂತಹ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಪದಕ ವಿಜೇತರಾಗಿರಬೇಕು ಹಾಗೂ ಕ್ರೀಡಾಪಟುಗಳು ಕರ್ನಾಟಕ ಮೂಲದವರಾಗಿರಬೇಕು. ಬೇರೆ ರಾಜ್ಯ ಅಥವಾ ಕ್ರೀಡಾತಂಡವನ್ನು ಪ್ರತಿನಿಧಿಸುವ ಕ್ರೀಡಾಪಟುಗಳು ಈ ಪುರಸ್ಕಾರಕ್ಕೆ ಅರ್ಹರಾಗಿರುವುದಿಲ್ಲ. ಸರ್ಕಾರಿ/ಅರೆ ಸರ್ಕಾರಿ ಇಲಾಖೆಗಳಲ್ಲಿ ನೇಮಕಗೊಂಡು ಸೇವೆ ಸಲ್ಲಿಸುತ್ತಿರುವ ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಹಾಗೂ ಪದಕ ಪಡೆದವರು ಮಾತ್ರ ಅರ್ಜಿಯನ್ನು ಸಲ್ಲಿಸಲು ಅರ್ಹರಿರುತ್ತಾರೆ. ಕ್ರೀಡಾಪಟುಗಳು ಆಧಾರ್ ಕಾರ್ಡ್, ಪಡಿತರ ಚೀಟಿ ಸಲ್ಲಿಸಬೇಕು.
ಒಲಂಪಿಕ್, ಏಷ್ಯನ್, ಕಾಮನ್ ವೆಲ್ತ್ ಕ್ರೀಡೆಗಳಲ್ಲಿ ಅಂತಾರಾಷ್ಟ್ರೀಯ ಸಂಸ್ಥೆ ಮತ್ತು ಯುವ ವ್ಯವಹಾರ ಮತ್ತು ಕ್ರೀಡಾ ಮಂತ್ರಾಲಯದಿಂದ ಮಾನ್ಯತೆ ಪಡೆದ ಕ್ರೀಡಾ ಸಂಸ್ಥೆಗಳು ನಡೆಸುವ ಅಧಿಕೃತ ಚಾಂಪಿಯನ್ ಶಿಪ್‌ಗಳಿಗೆ ಮಾತ್ರ ಪ್ರೋತ್ಸಾಹಧನ ನೀಡಲಾಗುವುದು. 6ನೇ ತರಗತಿಯಿಂದ ವ್ಯಾಸಂಗ ಮಾಡುತ್ತಿರುವ ಕ್ರೀಡಾಪಟುಗಳು ಪ್ರೋತ್ಸಾಹಧನಕ್ಕೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
ಅರ್ಹ ಕ್ರೀಡಾಪಟುಗಳು ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಹಾವೇರಿ ಕಚೇರಿಗೆ ಡಿ.20ರೊಳಗಾಗಿ ಅರ್ಜಿ ಸಲ್ಲಿಸಬೇಕು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.