ಹಾವೇರಿ: ನಮ್ಮ ಪರಿಸರದಲ್ಲಿ ಮೊದಲು ಪ್ರಚಲಿತದಲ್ಲಿದ್ದ ಸೊಪ್ಪಿನ ವೈವಿಧ್ಯವನ್ನು ಮತ್ತೆ ಜನಪ್ರಿಯಗೊಳಿಸುವ ಉದ್ದೇಶದಿಂದ ಅ.5 ಮತ್ತು 6ರಂದು ನಗರದ ಹೊಸಮಠದ ಶ್ರೀ ಬಸವೇಶ್ವರ ಸಮುದಾಯ ಭವನದಲ್ಲಿ ಎರಡು ದಿನಗಳ ‘ಸೊಪ್ಪಿನ ಮೇಳ’ ಆಯೋಜಿಸಲಾಗಿದೆ ಎಂದು ಸಹಜ ಸಮೃದ್ಧ ಸಂಸ್ಥೆಯ ಸಂಜೋಜಕ ಶಾಂತಕುಮಾರ ಹೇಳಿದರು.
ಇಲ್ಲಿನ ಜಿಲ್ಲಾ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಮೈಸೂರಿನ ಸಹಜ ಸಮೃದ್ಧ- ಸಾವಯವ ಕೃಷಿಕರ ಬಳಗ ಹಾಗೂ ರಾಣೆಬೆನ್ನೂರಿನ ವನಸಿರಿ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಸಹಯೋಗದಲ್ಲಿ ನಡೆಯುವ ಮೇಳದಲ್ಲಿ ಜಿಲ್ಲೆಯ ರೈತರು ಸೇರಿದಂತೆ ವಿವಿಧ ಜಿಲ್ಲೆಗಳಿಂದ ವಿಭಿನ್ನ ತಳಿಗಳ ಸೊಪ್ಪುಗಳನ್ನು ತರಲಿದ್ದಾರೆ. ದಂಟು, ನುಗ್ಗೆಕಾಯಿ ಸೊಪ್ಪು, ರಾಜಗೀರ, ಹರಿವೆ, ಹಕ್ಕರಕಿ ಸೊಪ್ಪು, ತಿರಕಸಾಲಿ, ಬಸಳೆ, ಹೀಗೆ 120ಕ್ಕೂ ಅಧಿಕ ಬಗೆಯ ಸೊಪ್ಪುಗಳು ಮೇಳದಲ್ಲಿ ಇರಲಿವೆ. ಸೊಪ್ಪುಗಳ ವೈವಿದ್ಯತೆ, ಹಿನ್ನೆಲೆ, ಅದರಿಂದಾಗುವ ಪ್ರಯೋಜನಗಳ ಕುರಿತು ಮಾಹಿತಿ ನೀಡಲಾಗುವುದು ಎಂದರು.
ವನಸಿರಿ ಗ್ರಾಮೀಣಾಭಿವೃದ್ಧಿ ಸಂಘದ ನಿರ್ದೇಶಕ ಎಸ್.ಬಿ.ಬಳಿಗಾರ ಮಾತನಾಡಿ, ಎರಡು ದಿನ ಬೆಳಗ್ಗೆ 10ರಿಂದ ರಾತ್ರಿ 8ರವರೆಗೆ ಮೇಳ ನಡೆಯಲಿದೆ. ಸೊಪ್ಪಿನ ಕೃಷಿ ಮತ್ತು ಸೊಪ್ಪಿನ ಮೌಲ್ಯವರ್ಧನೆಯ ಅವಕಾಶಗಳ ಬಗ್ಗೆ ರೈತರಿಗೆ ತರಬೇತಿ, ವಿಷಮುಕ್ತವಾಗಿ ಸೊಪ್ಪಿನ ಕೃಷಿ ಮಾಡುವ ಬಗೆ, ದೇಸಿ ಸೊಪ್ಪಿನ ತಳಿಗಳ ಬೀಜೋತ್ಪಾದನೆಯ ಬಗ್ಗೆ ಪ್ರಗತಿಪರ ಸಾವಯವ ರೈತರಾದ ಮಂಜುನಾಥ ಹುಲಗೂರ ಮಾಹಿತಿ ನೀಡಲಿದ್ದಾರೆ. ಬೆಂಗಳೂರು ನಗರಕ್ಕೆ ಸಾವಯವ ಸೊಪ್ಪು ಮತ್ತು ತರಕಾರಿ ಸರಬರಾಜು ಮಾಡಿ, ವಾರ್ಷಿಕ ಹದಿನೇಳು ಕೋಟಿ ರೂಪಾಯಿ ವಹಿವಾಟು ಮಾಡುತ್ತಿರುವ ಸಹಜ ಆರ್ಗಾನಿಕ್ಸ್‌ನ ಆನಂದತೀರ್ಥ ಪ್ಯಾಟಿ ಅನುಭವ ಹಂಚಿಕೊಳ್ಳಲಿದ್ದಾರೆ ಎಂದರು.
ಸೊಪ್ಪಿನ ಮೇಳವನ್ನು ಹೊಸಮಠದ ಬಸವಶಾಂತಲಿಂಗ ಸ್ವಾಮೀಜಿ ಉದ್ಘಾಟಿಸುವರು. ಸಕತ್ ಸೊಪ್ಪು ಪುಸ್ತಕ ಬಿಡುಗಡೆಯಾಗಲಿದೆ. ನಾಗರಹೊಳೆ ಕಾಡಿನ ಜೇನು ಕುರುಬ ಸಮುದಾಯದ ಪಾರ್ವತಿ, ಇತರರು ಭಾಗವಹಿಸುತ್ತಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಸಾವಯವ ರೈತ ಶ್ರೇಣಿಕರಾಜ, ಎ.ಮಾಲತೇಶ ಇದ್ದರು.
ಮಕ್ಕಳಿಗೆ ಚಿತ್ರಕಲೆ ಸ್ಪರ್ಧೆ
ಅ.6ರಂದು ಬೆಳಗ್ಗೆ 10 ಗಂಟೆಗೆ 5ರಿಂದ 12 ವರ್ಷದ ಮಕ್ಕಳಿಗಾಗಿ ಸೊಪ್ಪು- ನಾ ಕಂಡಂತೆ ವಿಷಯದ ಕುರಿತು ಚಿತ್ರಕಲಾ ಸ್ಪರ್ಧೆ ಏರ್ಪಡಿಸಲಾಗಿದೆ. ಸ್ಪರ್ಧೆ 5ರಿಂದ 9 ವರ್ಷ ಮತ್ತು 9ರಿಂದ 12 ವರ್ಷದ ಎರಡು ವಿಭಾಗಗಳಲ್ಲಿ ನಡೆಯಲಿದೆ. ಬಹುಮಾನ ವಿತೇತರಿಗೆ ಪ್ರಶಸ್ತಿ ಫಲಕ ಮತ್ತು ಪ್ರಮಾಣ ಪತ್ರ ನೀಡಲಾಗುತ್ತದೆ.