ಹಾವೇರಿ: ಅಂತಾರಾಷ್ಟ್ರೀಯ ಮಟ್ಟದ ಸಿರಿಧಾನ್ಯ ಮತ್ತು ಸಾವಯವ ಮೇಳ-2024ರ ಅಂಗವಾಗಿ ಸಿರಿಧಾನ್ಯ ಪಾಕಸ್ಪರ್ಧೆಯನ್ನು ಡಿ.13ರಂದು ಬೆಳಗ್ಗೆ 11 ಗಂಟೆಗೆ ಹಾವೇರಿ ಕೃಷಿ ಜಂಟಿ ನಿರ್ದೇಶಕರ ಕಚೇರಿಯಲ್ಲಿ ಆಯೋಜಿಸಲಾಗಿದೆ.
ಈ ಸ್ಪರ್ಧೆಯಲ್ಲಿ ಜಿಲ್ಲೆಯ ಎಲ್ಲ ಸಾರ್ವಜನಿಕರು ಭಾಗವಹಿಸಲು ಅವಕಾಶವಿರುತ್ತದೆ. ಆದರೆ, ವಿದ್ಯಾರ್ಥಿಗಳಿಗೆ ಅವಕಾಶವಿಲ್ಲ. ಒಬ್ಬರಿಗೆ ಒಂದೇ ತಿನಿಸು ಸಿಹಿ ಅಥವಾ ಖಾರ ಅಡುಗೆ ಮಾಡಲು ಅವಕಾಶವಿದೆ. ಸಿರಿಧಾನ್ಯ ಸಸ್ಯಹಾರಿ ತಿನಿಸುಗಳಿಗೆ ಮಾತ್ರ ಅವಕಾಶವಿದೆ. ಮನೆಯಲ್ಲಿಯೇ ತಯಾರಿಸಿದ ಸಿರಿಧಾನ್ಯ ತಿನಿಸು ಪ್ರದರ್ಶಿಸಲು ಅವಕಾಶವಿರುತ್ತದೆ. ತಯಾರಿಸಿದ ತಿನಿಸುಗಳ ಪ್ರದರ್ಶನ, ತಯಾರಿಕೆಗೆ ಬಳಸಿದ ಪದಾರ್ಥಗಳು, ತೋರಿಕೆ, ರುಚಿ, ಸುವಾಸನೆಗಳ ಮೇಲೆ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು. ಜಿಲ್ಲಾ ಮಟ್ಟದಲ್ಲಿ ಅತ್ಯುತ್ತಮ ಒಂದು ಸಿಹಿ ಹಾಗೂ ಖಾರ ತಿನಿಸನ್ನು ಆಯ್ಕೆ ಮಾಡಲಾಗುವುದು. ಇಬ್ಬರಿಗೂ ತಲಾ 5,000 ರೂ. ನಗದು ಬಹುಮಾನ ನೀಡಲಾಗುವುದು.
ಸಿರಿಧಾನ್ಯ ಪಾಕಸ್ಪರ್ಧೆಯಲ್ಲಿ ಭಾಗವಹಿಸುವವರು ಮನೆಯಿಂದ ಅಡುಗೆ ತಯಾರಿಸಿಕೊಂಡು ಬಂದು ಪ್ರದರ್ಶನಕ್ಕೆ ಇಡಬೇಕು. ಹೆಚ್ಚಿನ ಮಾಹಿತಿಗಾಗಿ ಹಾವೇರಿ ಜಂಟಿ ನಿರ್ದೇಶಕರ ಕಚೇರಿಯ ಸಹಾಯಕ ಕೃಷಿ ನಿರ್ದೇಶಕಿ ಮೈತ್ರಿ ಅವರನ್ನು ಸಂಪರ್ಕಿಸುವಂತೆ ಜಂಟಿ ಕೃಷಿ ನಿರ್ದೇಶಕ ಮಂಜುನಾಥ ಅಂತರವಳ್ಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.