ಹಾವೇರಿ: ಆಯುರ್ವೇದದಲ್ಲಿ ಅಲೋಪತಿ ರೀತಿಯಲ್ಲಿ ನಿರಂತರ ಸಂಶೋಧನೆ ಆಗಬೇಕು. ಅದನ್ನು ಸರ್ಕಾರ, ಐಎಂಎ ಒಪ್ಪಿಕೊಳ್ಳಬೇಕು. ಆಗ ಆಯುರ್ವೇದಕ್ಕೆ ಹೆಚ್ಚಿನ ಮಾನ್ಯತೆ ದೊರೆಯುತ್ತದೆ. ಅಲೋಪತಿಗೆ ಸಮನಾಗಿ ಆಯುರ್ವೇದ ಬೆಳೆಯಬೇಕು. ಇದರಿಂದ ಮಾನವ ಕುಲಕ್ಕೆ ದೊಡ್ಡ ಸಹಾಯವಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ- ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ನಗರದಲ್ಲಿ ಶನಿವಾರ ಜಗದ್ಗುರು ತೋಂಟದಾರ್ಯ ವಿದ್ಯಾಪೀಠದ ಸಿಂದಗಿ ಶಾಂತವಿರೇಶ್ವರ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಆಸ್ಪತ್ರೆಯ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಯೊಂದಿಗೆ ಆಯೋಜಿಸಿದ್ದ ಸಭೆಯಲ್ಲಿ ಅವರು ಮಾತನಾಡಿದರು. ಆಯುರ್ವೇದವೂ ಅಲೋಪತಿಗೆ ಸರಿಸಮಾನಾಗಿ ಬೆಳೆಯಬೇಕು. ಆಯುರ್ವೇದಕ್ಕೆ ಉತ್ತೇಜನ ನೀಡಲು ಬಿಜೆಪಿ ಅವಧಿಯಲ್ಲಿ ಆಯುಷ್ ಇಲಾಖೆಯನ್ನು ಆರಂಭಿಸಲಾಗಿದೆ ಎಂದರು.
ತಾವೆಲ್ಲ ಭವಿಷ್ಯದ ವೈದ್ಯರಾಗುವವರಿದ್ದೀರಿ. ಈ ದೇಶ ಬೇರೆ ದೇಶಗಳಿಗಿಂತ ವಿಭಿನ್ನವಾಗಿದೆ. ಹಲವಾರು ಭಾಷೆ, ಸಮುದಾಯ, ಪ್ರದೇಶಗಳು ಇವೆ. ಇದರ ನಡುವೆ ವಿವಿಧ ವರ್ಗಗಳಲ್ಲಿ ಜನ ವಿಂಗಡಣೆಯಾಗಿದೆ. 130 ಕೋಟಿ ಜನರಿಗೆ ಶಿಕ್ಷಣ, ಆರೊಗ್ಯ ಕೊಡುವುದು ಅತ್ಯಂತ ಮುಖ್ಯವಾಗಿದೆ ಎಂದರು.
ನಮ್ಮದು ಅನ್ವೇಷಣೆ ರಹಿತವಾದ ಪರಂಪರೆ. ಒರಿಜಿನಲ್ ಇಂಟಲಿಜನ್ಸ್ ನಮ್ಮ ಪರಂಪರೆಯಲ್ಲಿದೆ. ನಮ್ಮ ದೇಶದಲ್ಲಿ ಆಯುರ್ವೇದದ ಬೇರು ಬಹಳ ಗಟ್ಟಿಯಾಗಿದೆ. ಮೋದಿಯವರು ಯೋಗಕ್ಕೆ ಅತ್ಯಂತ ಮಹತ್ವ ಕೊಟ್ಡಿದ್ದಾರೆ. ಆಯುರ್ವೇದದ ಬೆಳವಣಿಗೆಗೆ ಪ್ರತ್ಯೇಕವಾಗಿ ಆಯುಷ್ ಇಲಾಖೆ ತೆರೆದಿದ್ದಾರೆ. ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ಆಯುಷ್ ವೈದ್ಯರಿಗೆ ಮಾನ್ಯತೆ ನೀಡಿದರು ಎಂದು ಹೇಳಿದರು.
ಕೆಳ ಹಂತದ ಸಮುದಾಯ, ಬಡವರು, ದೀನ ದಲಿತರು ಆಯುರ್ವೇದಕ್ಕೆ ಬರುತ್ತಾರೆ. ಶ್ರೀಮಂತರು ಅಲೋಪತಿಗೆ ಬರುತ್ತಾರೆ. ಎಲ್ಲರಿಗೂ ಆಯುರ್ವೇದದ ಚಿಕಿತ್ಸೆ ದೊರೆಯುವಂತೆ ಆಗಬೇಕು. ನೀವು ಈ ಬಾರಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಬೆಂಬಲ ನೀಡಿದರೆ, ಆ ನಿಟ್ಟಿನಲ್ಲಿ ದೊಡ್ಡ ಮಟ್ಟದ ಬೆಳವಣಿಗೆಗೆ ಕಾರಣವಾಗಲಿದೆ. ನಾನು ಆಯುರ್ವೇದಕ್ಕೆ ಅಗತ್ಯ ಬೆಂಬಲ ನೀಡಲು ಬದ್ಧನಾಗಿದ್ದೇನೆ ಎಂದರು.
ಸಭೆಯಲ್ಲಿ ಆಸ್ಪತ್ರೆ ಆಡಳಿತಾಧಿಕಾರಿ ವಿ.ಎಚ್.ಕೆ.ಹಿರೇಮಠ, ಪ್ರಾಚಾರ್ಯ ಚಂದ್ರಶೇಖರ ಗೌಡರ, ಗವಿಸಿದ್ದಪ್ಪ ದ್ಯಾಮಣ್ಣನವರ, ಇತರರು ಪಾಲ್ಗೊಂಡಿದ್ದರು.