ಜಿಲ್ಲೆ

ಕಾಂಗ್ರೆಸ್ ನವರು ಅಧಿಕಾರಕ್ಕಾಗಿಯೇ ಹುಟ್ಟಿದ್ದಾರೆ ಎಂಬಂತೆ ವರ್ತಿಸುತ್ತಿದ್ದಾರೆ; ಗೋವಿಂದ ಕಾರಜೋಳ, ಸಿ.ಟಿ.ರವಿ

ಶಿಗ್ಗಾಂವಿ: ಕಾಂಗ್ರೆಸ್ ನವರು ಅಧಿಕಾರಕ್ಕಾಗಿಯೇ ಹುಟ್ಟಿದ್ದಾರೆ ಎನ್ನುವಂತೆ ವರ್ತಿಸುತ್ತಿದ್ದಾರೆ ಎಂದು ಸಚಿವ ಗೋವಿಂದ ಕಾರಜೋಳ ಹಾಗೂ ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.

ಶಿಗ್ಗಾಂವಿ ಕ್ಷೇತ್ರದಲ್ಲಿ ಸಿಎಂ ಅನುಪಸ್ಥಿತಿಯಲ್ಲಿ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯಲ್ಲಿ ಭಾಗವಹಿಸಲು ಆಗಮಿಸಿದ ಅವರು ಇಲ್ಲಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಅವರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಜಂಟಿಯಾಗಿ ಮಾತನಾಡಿದರು.

94 ವರ್ಷದ ಶಾಮನೂರು, 84 ವರ್ಷದ ಖರ್ಗೆ, 78 ವರ್ಷದ ಸಿದ್ದರಾಮಯ್ಯ, ಇವರ ಜತೆ ಡಿ.ಕೆ.ಶಿವಕುಮಾರ ಎಲ್ಲರೂ ಅಧಿಕಾರಕ್ಕಾಗಿಯೇ ಹುಟ್ಟಿದ್ದಾರೆ ಎಂಬಂತೆ ವರ್ತಿಸುತ್ತಿದ್ದಾರೆ ಎಂದರು.

ಯಾತ್ರೆಗೆ ಅತ್ಯಂತ ದೊಡ್ಡ ಜನಬೆಂಬಲ ದೊರೆಯುತ್ತಿದೆ. ಮಾ‌.25ರಂದು ಸಮಾರೋಪ ನಡೆಯಲಿದೆ. ಮೋದಿ ಅವರ ನೇತೃತ್ವದಲ್ಲಿ ದಾವಣಗೆರೆಯಲ್ಲಿ ಮಹಾ‌ಸಂಗಮ ಯಾತ್ರೆ ನಡೆಯಲಿದೆ.

ದೇಶಕ್ಕೆ ಸ್ವಾತಂತ್ರ್ಯ ಬಂದು 60 ವರ್ಷವಾದರೂ ಅಭಿವೃದ್ಧಿ ಆಗಿರಲಿಲ್ಲ. ಮೋದಿ ಅವರು ಪ್ರಧಾನಿಯಾದ ಬಳಿಕ ಅಭಿವೃದ್ಧಿ ಶಕೆ ಶುರುವಾಗಿದೆ.

ಉತ್ತರ ಕರ್ನಾಟಕ ಅಭಿವೃದ್ಧಿಯಲ್ಲಿ ಹಿಂದೆ ಇದೆ ಎಂಬ ಹಣೆಪಟ್ಟಿ ಕಟ್ಟಿಕೊಂಡಿತ್ತು. ಬೊಮ್ಮಾಯಿ‌ ಅವರು ಸಿಎಂ ಆದ ಬಳಿಕ ಉಕ ಅಭಿವೃದ್ಧಿ ಆಗುತ್ತಿದೆ. ಈ ಭಾಗದ ನೀರಾವರಿ ಯೋಜನೆಗೆ ಸುಮಾರು 75 ಸಾವಿರ ಕೋಟಿ ರೂ. ಮೀಸಲಿಟ್ಟಿದ್ದಾರೆ. ಬೊಮ್ಮಾಯಿ‌ ಅವರಿಗೆ ಇರುವ ಸಾಮಾಜಿಕ ಕಳಕಳಿಯನ್ನು ಯಾರಲ್ಲೂ ಕಂಡಿಲ್ಲ ಎಂದರು.