ಹಾವೇರಿ/ ಶಿಗ್ಗಾಂವಿ: ಅಜ್ಜಂಪೀರ್ ಖಾದ್ರಿ ಜನಪ್ರಿಯ ವ್ಯಕ್ತಿ. ಹಜರತ್ ಷಾ ದರ್ಗಾ ಗುರುಗಳ ವಂಶದವರು. ಈ ದರ್ಗಾಕ್ಕೆ ಎಲ್ಲ ಧರ್ಮದವರು ನಡೆದುಕೊಳ್ಳುತ್ತಾರೆ. ಅದರಲ್ಲೂ ಕುರುಬರಿಗೆ ಹಜರತ್ ಷಾ ಅವರು ಗುರುಗಳಾಗಿದ್ದರು. ಪಠಾಣ ಗೆಲುವಿಗೆ ಖಾದ್ರಿ ಪಣ ತೊಟ್ಟಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಶಿಗ್ಗಾಂವಿ ತಾಲೂಕು ಹುಲಗೂರ ಗ್ರಾಮದ ಪೊಲೀಸ್ ಠಾಣೆ ಬಳಿ ಸೋಮವಾರ ಹಮ್ಮಿಕೊಂಡಿದ್ದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು. ದಾರ್ಶನಿಕರು ಸಾಧು, ಸಂತರ ನಾಡಿನಲ್ಲಿ ಮನುಷ್ಯತ್ವಕ್ಕೆ ಹೆಚ್ಚು ಬೆಲೆ ಇದೆ. ಬಿಜೆಪಿಗರು ಜಾತಿ, ಧರ್ಮ, ಮನುಷ್ಯರನ್ನು ಒಡೆದು ಆಳುವವರು. ಎಲ್ಲರನ್ನೂ ಒಂದುಗೂಡಿಸುವ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಿ ಎಂದರು.
ಬಿಜೆಪಿ ಸುಳ್ಳಿನ ಪಕ್ಷ. ಭ್ರಷ್ಟಾಚಾರ ಜನತಾ ಪಾರ್ಟಿ. 40 ಪರ್ಸೆಂಟ್ ಕಮಿಷನ್ ಪದ ಬಂದದ್ದೇ ಬೊಮ್ಮಾಯಿ ಸಿಎಂ ಆಗಿದ್ದಾಗ.ಬೊಮ್ಮಾಯಿ ಸಿಎಂ ಆಗಿದ್ದಾಗ ಬಿಜೆಪಿಯ 120ಕ್ಕೂ ಅಧಿಕ ಶಾಸಕರಿದ್ದರು. ನಂತರ 66ಕ್ಕೆ ಇಳಿಯಿತು. ಅವರು ಏನು ಕೆಲಸ ಮಾಡಿದ್ದಾರೆ ಎಂಬುದಕ್ಕೆ ಇದೇ ಸಾಕ್ಷಿ. ಕಳೆದ ಚುನಾವಣೆಯಲ್ಲಿ ನನಗೆ ಪ್ರಚಾರಕ್ಕೆ ಬರಲಾಗಲಿಲ್ಲ. ಆ ನೋವು ಪಠಾಣ ಅವರಲ್ಲೂ ಇತ್ತು. ಅದಕ್ಕಾಗಿ ಈ ಸಲ ಮೂರು ದಿನ ಪ್ರಚಾರ ಮಾಡುತ್ತಿದ್ದೇನೆ. ಪಠಾಣ ಗೆಲ್ಲಬೇಕು ಎಂದರು.
2013ರಿಂದ 2018ರವರೆಗೆ ಸಿಎಂ ಆಗಿದ್ದೆ. 158 ಭರವಸೆಗಳನ್ನು ಈಡೇರಿಸಿದೆ. ಈ ಬಾರಿ ಭರವಸೆ ನೀಡಿದ್ದ ಐದು ಗ್ಯಾರಂಟಿಗಳನ್ನೂ ಜಾರಿ ಮಾಡಿದ್ದೇವೆ. ‘ಗ್ಯಾರಂಟಿ ಜಾರಿ ಮಾಡಲು ಆಗಲ್ಲ. ಇದರಿಂದ ರಾಜ್ಯ ದಿವಾಳಿ ಆಗುತ್ತದೆ’ ಎಂದು ಪ್ರಧಾನಿ ಹೇಳಿದ್ದರು. ಎಂಟು ತಿಂಗಳಲ್ಲಿ ಎಲ್ಲವನ್ನೂ ಜಾರಿಗೊಳಿಸಿದೆ. ಯಾವುದು ಬಾಕಿ ಇದೆ ಹೇಳಿ ಬೊಮ್ಮಾಯಿ ಎಂದರು.
ಸಿಎಂ ಸಮ್ಮುಖದಲ್ಲಿ ಹಲವು ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾದರು.
ಸಚಿವರಾದ ಸತೀಶ ಜಾರಕಿಹೊಳಿ, ಆರ್.ಬಿ.ತಿಮ್ಮಾಪುರ, ರಹೀಂಖಾನ್, ಸಲೀಂ ಅಹ್ಮದ್, ನಸೀರ್ ಅಹ್ಮದ್, ಎಐಸಿಸಿ ಕಾರ್ಯದರ್ಶಿ ಮಯೂರ ಜೈಕುಮಾರ, ಶಾಸಕರಾದ ಶ್ರೀನಿವಾಸ ಮಾನೆ, ಬಸವರಾಜ ಶಿವಣ್ಣನವರ, ಸೋಮಣ್ಣ ಬೇವಿನಮರದ, ಜಿಲ್ಲಾಧ್ಯಕ್ಷ ಸಂಜೀವಕುಮಾರ ನೀರಲಗಿ, ಪ್ರೇಮಾ ಪಾಟೀಲ, ರಾಜು ಕುನ್ನೂರ, ಸೇರಿದಂತೆ ಹಲವರು ಪಾಲ್ಗೊಂಡಿದ್ದರು.
ಖಾದ್ರಿ, ಪಠಾಣ ಜೋಡೆತ್ತು
ಅಭಿವೃದ್ಧಿ ಕೆಲಸ ಬಂದ್ ಮಾಡಿದ್ದಾರೆ ಎನ್ನುವ ಮೋದಿ ಅಧಿಕಾರಿಗಳಿಂದ ಸೂಕ್ತ ಮಾಹಿತಿ ಪಡೆಯಲಿ. ಬಡವರ ಕಲ್ಯಾಣ ಕಾರ್ಯಕ್ರಮ ನೋಡಿ ಹೊಟ್ಟೆಯುರಿ ನಿಮಗೆ. ಅಭಿವೃದ್ಧಿ ನಿಂತಿದೆ ಎಂದರೆ ಏನು ಬಡವರ ಅಭಿವೃದ್ಧಿ ಅಭಿವೃದ್ಧಿ ಅಲ್ಲವೇ. ಬಡವರ ಹೊಟ್ಟೆ ತುಂಬಿದರೆ, ಬಡವರ ಮನೆ ದೀಪ ಬೆಳಗಿದರೆ ಅಭಿವೃದ್ಧಿ ಅಲ್ಲವೇ? ಅದಾನಿ ಅಂಬಾನಿ ಅವರಂಥ ಶ್ರೀಮಂತರಿಗೆ ಅಭಿವೃದ್ಧಿ ನಿಮ್ಮ ಅಭಿವೃದ್ಧಿ ಯೇ? ನೀವು ಝಾರ್ಖಂಡನಲ್ಲಿ ಸಿದ್ದರಾಮಯ್ಯ ನವರ ಕಾಪಿ ಮಾಡಿ 2,100 ರೂ. ಗ್ಯಾರಂಟಿ ಯೋಜನೆ ಘೋಷಿಸಿ, ಟೀಕೆ ಮಾಡುತ್ತಿರುವುದು ಎಷ್ಟು ಸರಿ ಎಂದು ಸಚಿವ ಎಚ್.ಕೆ.ಪಾಟೀಲ ಪ್ರಶ್ನಿಸಿದರು. ಖಾದ್ರಿ ಹಾಗೂ ಪಠಾಣ ಎಂಬ ಜೋಡೆತ್ತು ಕ್ಷೇತ್ರಕ್ಕೆ ಸಿಕ್ಕಿವೆ. ಚಕ್ಕಡಿ ಆರ್ಭಟದಿಂದ ಓಡಿಸಿ ಎಂದು ಜನತೆಗೆ ಕರೆ ನೀಡಿದರು.