ಜಿಲ್ಲೆ

ಸಂಶಯಾಸ್ಪದ ಸಾವು ಪ್ರಕರಣ ದಾಖಲು; ಶಿಗ್ಗಾಂವಿಯಲ್ಲಿ ಸಿಆರ್‌ಪಿಎಫ್ ಯೋಧನ ಮೃತದೇಹ ಪತ್ತೆ ಕೇಸ್

ಹಾವೇರಿ: ಶಿಗ್ಗಾಂವಿಯಲ್ಲಿ ಹಾಸನ ಜಿಲ್ಲೆ ಅರಸೀಕರೆ ಮೂಲದ ಆಂದ್ರಪ್ರದೇಶದ ಭದ್ರಾಚಲಂನ ಸಿಆರ್‌ಪಿಎಫ್ ಯೋಧ ತಾರೇಶ ಎನ್.ಬಿ. ಅವರ ಮೃತದೇಹ ಪತ್ತೆಯಾದ ಕುರಿತು ಶಿಗ್ಗಾಂವಿ ಪೊಲೀಸ್ ಠಾಣೆಯಲ್ಲಿ ಸೋಮವಾರ ಸಂಶಯಾಸ್ಪದ ಸಾವು ಪ್ರಕರಣ ದಾಖಲಾಗಿದೆ.

ಅರಸಿಕೆರೆ ಮೂಲದ ತಾರೇಶ ಕುಟುಂಬ ಬೆಂಗಳೂರಿನಲ್ಲಿ ವಾಸವಾಗಿದೆ. ರಜೆಯ ಮೇಲೆ ಬೆಂಗಳೂರಿಗೆ ಬಂದಿದ್ದ ತಾರೇಶ ಜೂ.18ರಂದು ಮಗನನ್ನು ಶಾಲೆಗೆ ಕಳುಹಿಸಿ ಬರುವುದಾಗಿ ಹೋದವರು ವಾಪಸ್ ಬಂದಿರಲಿಲ್ಲ. ಈ ಕುರಿತು ಕುಟುಂಬದವರು ಬೆಂಗಳೂರಿನ ಚಂದ್ರಾಲೇಔಟ್ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು.

ಒಬ್ಬರೇ ಬಸ್ ಹತ್ತಿ ಹೋಗಿರುವ ಸಿಸಿಟಿವಿ ದೃಶ್ಯಗಳೂ ಲಭ್ಯವಾಗಿದ್ದವು. ನಂತರ ಎಲ್ಲಿ ಹೋದರು ಎಂಬುದು ತಿಳಿದಿರಲಿಲ್ಲ. ಜೂ.22ರಂದು ಶಿಗ್ಗಾಂವಿ ಬಳಿ ಎನ್‌ಎಚ್ 48ನಲ್ಲಿ ರಾಯಘಡ ಡಾಬಾ ಬಳಿ ಮೃತದೇಹ ಪತ್ತೆಯಾಗಿತ್ತು. ಎರಡು ದಿನಗಳ ಹಿಂದೆಯೇ ಮೃತಪಟ್ಟಿದ್ದು, ಇಟ್ಟಿಗೆ ರಾಶಿಗಳ ಪಕ್ಕದಲ್ಲಿ ಇದ್ದ ಕಾರಣ ತಡವಾಗಿ ಬೆಳಕಿಗೆ ಬಂದಿದೆ.

ಸೋಮವಾರ ತಾರೇಶ ಕುಟುಂಬಸ್ಥರು ಶಿಗ್ಗಾಂವಿಗೆ ಆಗಮಿಸಿ ಶವಪರೀಕ್ಷೆ ಬಳಿಕ ಮೃತದೇಹ ತೆಗೆದುಕೊಂಡು ಹೋಗಿ ಬೆಂಗಳೂರಿನಲ್ಲಿ ಅಂತ್ಯಕ್ರಿಯೆ ನೆರವೇರಿಸಿದ್ದಾರೆ. ಈ ಕುರಿತು ತಾರೇಶ ಪತ್ನಿ ದಿವ್ಯಾ ಶಿಗ್ಗಾಂವಿ ಠಾಣೆಯಲ್ಲಿ ಸಂಶಯಾಸ್ಪದ ಸಾವು ಪ್ರಕರಣ ದಾಖಲಿಸಿದ್ದಾರೆ. ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.