ಜಿಲ್ಲೆ

ಕ್ಷೇತ್ರದ ಅಭಿವೃದ್ಧಿ ಕುರಿತು ಬಹಿರಂಗ ಚರ್ಚೆ ಬನ್ನಿ; ಸಿಎಂ ಸಿದ್ದರಾಮಯ್ಯಗೆ ಮಾಜಿ ಸಿಎಂ ಬೊಮ್ಮಾಯಿ ಸವಾಲು

ಹಾವೇರಿ /ಶಿಗ್ಗಾವಿ: ಶಿಗ್ಗಾಂವಿ- ಸವಣೂರ ಕ್ಷೇತ್ರದ ಅಭಿವೃದ್ಧಿ ಕುರಿತು ನಾನು ಬಹಿರಂಗ ಚರ್ಚೆಗೆ ಸಿದ್ಧನಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸವಾಲು ಹಾಕಿದ್ದಾರೆ.

ಶಿಗ್ಗಾಂವಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ವಿರುದ್ಧ ಮಾಡಿರುವ ಆರೋಪಗಳಿಗೆ ಸರಣಿ ಟ್ವೀಟ್‌ಗಳ ಮೂಲಕ ತಿರುಗೇಟು ನೀಡಿರುವ ಬೊಮ್ಮಾಯಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ, ನಾನು ಖಂಡಿತವಾಗಿಯೂ ಒಂದು ಮನೆ ಕಟ್ಟಿಲ್ಲ. ನನ್ನ ಕ್ಷೇತ್ರದಲ್ಲಿ ಐದು ಲಕ್ಷ ರೂಪಾಯಿಯ ಹನ್ನೆರಡುವರೆ ಸಾವಿರ ಮನೆ ಕಟ್ಟಿಸಿದ್ದೇನೆ. ನಿಮ್ಮದೇ ಸರ್ಕಾರ ಇದೆ. ದಾಖಲೆ ತೆಗೆದು ನೋಡಿ ಮುಖ್ಯಮಂತ್ರಿಯಾಗಿ ಈ ರೀತಿ ಹಸಿ ಸುಳ್ಳು ಹೇಳುವುದು ನಿಮ್ಮ ಸ್ಥಾನಕ್ಕೆ ಶೋಭೆ ತರುವುದಿಲ್ಲ ಎಂದು ತಿರುಗೇಟು ನೀಡಿದ್ದಾರೆ.

ಕರೊನಾ ಸಂದರ್ಭದಲ್ಲಿ ಜೀವನದ ಹಂಗು ತೊರೆದು ನಮ್ಮ ಸರ್ಕಾರ ಕರೊನಾ ಸಂಪೂರ್ಣ ನಿಯಂತ್ರಿಸಿದೆ. ಕೇವಲ ಎರಡು ಟೆಸ್ಟ್ ಲ್ಯಾಬ್ ಗಳಿದ್ದಿದ್ದನ್ನು ಆರವತ್ತು ಲ್ಯಾಬ್ ಮಾಡಿ ಸಾವಿರಾರು ಜನರ ಪ್ರಾಣ ಉಳಿಸಿದೆ. ನನ್ನ ಸ್ವಂತ ಮನೆಯನ್ನೇ ಕೋವಿಡ್ ಆಸ್ಪತ್ರೆಯಾಗಿ ಪರಿವರ್ತನೆ ಮಾಡಿರುವುದು ಕ್ಷೇತ್ರದ ಜನರಿಗೆ ಚಿಕಿತ್ಸೆ ಕೊಟ್ಟಿರುವುದನ್ನು ಜನ ಎಂದಿಗೂ ಮರೆಯುವುದಿಲ್ಲ.

ಸಿಎಂ ಆಗಿ ಜಲಸಂಪನ್ಮೂಲ ಸಚಿವನಾಗಿ ಶಿಗ್ಗಾಂವಿ ಏತ ನಿರಾವರಿಯನ್ನು 2008ಕ್ಕೆ ಪ್ರಾರಂಭಿಸಿ 2012ರಲ್ಲಿ ಪೂರ್ಣಗೊಳಿಸಿದ್ದೇನೆ. ಅಂದಿನ ಸಿಎಂ ಯಡಿಯೂರಪ್ಪ ಹಣ ಬಿಡುಗಡೆ ಮಾಡಿದ್ದಾರೆ. ಸವಣೂರ ಏತ ನೀರಾವರಿ ನಿಮ್ಮ ಸರ್ಕಾರದಲ್ಲಿ ಮೂರು ವರ್ಷ ಪ್ರಾರಂಭ ಮಾಡದೇ ನಿಷ್ಕ್ರಿಯವಾಗಿತ್ತು. ನೀವು ಹಣಕಾಸು ಬಿಡುಗಡೆ ಮಾಡಿರುವ ದಾಖಲೆಯನ್ನು ತೋರಿಸಿ. ನಾವು 2020ರಿಂದ 23ರ ವರೆಗೂ ಆ ಯೋಜನೆ ಪುರ್ಣಗೊಳಿಸಿದ್ದೇವೆ ಎಂದರು.

ನಾನು ಮಂತ್ರಿಯಾಗಿ, ಸಿಎಂ ಆಗಿ ಏನೆಲ್ಲ ಅಭಿವೃದ್ಧಿ ಮಾಡಿದ್ದೇನೆ ಎಂದು ಬಹಿರಂಗ ಚರ್ಚೆಗೆ ನಾನು ಸಿದ್ದನಿದ್ದೇನೆ. ನನ್ನ ಅಭಿವೃದ್ದಿ ಶಿಕ್ಷಣ, ಆರೊಗ್ಯ, ರಸ್ತೆ, ಗ್ರಾಮೀಣ ಅಭಿವೃದ್ಧಿ ಕೆರೆ ತುಂಬಿಸುವುದು, ಬ್ರಿಡ್ಜ್‌ಗಳ ನಿರ್ಮಾಣ, ಎರಡು ಪಾಲಿಟೆಕ್ನಿಕ್, ಎರಡು ಐಟಿಐ ಕಾಲೇಜ್, ಜಿಟಿಟಿಸಿ, ಟೆಕ್ಸ್‌ಟೈಲ್ ಪಾರ್ಕ್, ಆಯುರ್ವೇದ ಕಾಲೇಜ್ ಇನ್ನೂ ಹಲವಾರು ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ನಿಮ್ಮ ಸರ್ಕಾರದ ಬಳಿ ದಾಖಲೆ ಇವೆ. ಇಲ್ಲದಿದ್ದರೆ ನಿಮಗೆ ದಾಖಲೆ ಸಮೇತ ಕಳುಹಿಸಿ ಕೊಡಲು ಸಿದ್ಧನಿದ್ದೇನೆ ಎಂದು ಬೊಮ್ಮಾಯಿ ಸವಾಲೆಸೆದಿದ್ದಾರೆ.