ಜಿಲ್ಲೆ

ರಾಜ್ಯದಲ್ಲಿದೆ ಆರೋಪಿ ನಂಬರ್ ಒನ್ ಸರ್ಕಾರ; ಎಲ್ಲದಕ್ಕೂ ಉಡಾಫೆ ಉತ್ತರ ಕೊಡುವ ಸಿಎಂ; ಕೇಂದ್ರ ಸಚಿವ ಪ್ರಲ್ಹಾದ ಜೋಶಿ ವಾಗ್ದಾಳಿ

ಹಾವೇರಿ/ ಶಿಗ್ಗಾಂವಿ: ರಾಜ್ಯದಲ್ಲಿ ಎ1 ಆಡಳಿತ ನಡೆದಿದೆ ಅಂದರೆ ಆರೋಪಿ ನಂಬರ್ ಒನ್ (ಅಕ್ಯೂಸಡ್ ನಂಬರ್ ಒನ್) ಆಡಳಿತ ನಡೆದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಬಹುಶಃ ಇದು ತಮ್ಮ ಕೊನೆಯ ಅವಧಿ ಎಂದು ತಿಳಿದು ಅತ್ಯಂತ ನಿರ್ಲಜ್ಯತನದಿಂದ ವರ್ತಿಸಲು ತೀರ್ಮಾನಿಸಿದಂತೆ ಕಾಣುತ್ತದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆಕ್ರೋಶ ವ್ಯಕ್ತಪಡಿಸಿದರು.

ಶಿಗ್ಗಾಂವಿ ಪಟ್ಟಣದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಬಕಾರಿ ಇಲಾಖೆಯಲ್ಲಿ 700 ಕೋಟಿ ರೂ. ಅವ್ಯವಹಾರ ಸಾಬೀತು ಪಡಿಸಿದರೆ ನಾನು ರಾಜೀನಾಮೆ ಕೊಡುತ್ತೇನೆ. ಇಲ್ಲದಿದ್ದರೆ ನೀವು ರಾಜೀನಾಮೆ ಕೊಡಿ ಎಂದು ಪ್ರಧಾನಿಗೆ ಸವಾಲು ಹಾಕಿದ್ದಾರೆ. ಈ ಆರೋಪವನ್ನು ನಾವು ಮಾಡಿದ್ದಲ್ಲ. ಮದ್ಯ ಮಾರಾಟಗಾರರೇ ಆರೋಪಿಸಿದ್ದಾರೆ. ಅವರನ್ನು ಕರೆದು ಕೇಳಿದ್ದೀರಾ ಎಂದು ಪ್ರಶ್ನಿಸಿದರು. ಅಧಿಕಾರಿಗಳ ವರ್ಗಾವಣೆ, ವಸೂಲಿಗೆ ಬೇಸತ್ತಿದ್ದಾರೆ. ಅವರನ್ನು ಕೇಳಿ. ತೀರಾ ಇಷ್ಟು ನಿರ್ಲಜ್ಯ ಆಗಬೇಡಿ ಎಂದು ಸಿಎಂಗೆ ಕುಟುಕಿದರು.

ನಿಮಗೆ ನಾಚಿಕೆ, ಮಾನ ಮರ್ಯಾದೆ ಇದ್ದಿದ್ದರೆ ಇಷ್ಟೊತ್ತಿಗೆ ರಾಜೀನಾಮೆ ಕೊಡುತ್ತಿದ್ದಿರಿ. ನಿಮ್ಮ ಕೈಯಲ್ಲಿ ಕೆಲಸ ಮಾಡುವ ಲೋಕಾಯುಕ್ತ ಎಸ್‌ಪಿ ಎದುರು ಡ್ರಾಮಾ ಮಾಡುತ್ತೀರಿ. ವೈಯಕ್ತಿಕ ಕಾರಲ್ಲಿ ಹೋಗಿ ಎರಡು ಗಂಟೆ 35 ಪ್ರಶ್ನೆ ಅಂತಾ. ನೈತಿಕತೆ ಇದ್ದರೆ ರಾಜೀನಾಮೆ ಕೊಟ್ಟು ತನಿಖೆಗೆ ಹೋಗಬೇಕಿತ್ತು. ಇಂಥವರು ಪ್ರಧಾನಮಂತ್ರಿಗೆ ಸವಾಲು ಹಾಕಲು ನೈತಿಕತೆ ಇದೆಯಾ ಎಂದು ವಾಗ್ದಾಳಿ ನಡೆಸಿದರು.

ಕಳೆದ 25 ವರ್ಷದಲ್ಲಿ ನರೇಂದ್ರ ಮೋದಿ ಒಮ್ಮೆಯೂ ಸೋತಿಲ್ಲ. ಗುಜರಾತ್‌ನಲ್ಲಿ ಬಿಜೆಪಿ ಸೋತಿಲ್ಲ. ನಿಮ್ಮ ತುಷ್ಠೀಕರಣದ ಪರಾಕಾಷ್ಠೆಯಿಂದ ಐದು ವರ್ಷ ಸಿಎಂ ಇದ್ದ ನಿಮ್ಮನ್ನು ನಿಮ್ಮ ಕ್ಷೇತ್ರದ ಜನತೆ ಸೋಲಿಸಿದ್ದಾರೆ. ಅರ್ಕಾವತಿ ರೀಡು ಆರೋಪ, ವಾಚ್ ಉಡುಗೊರೆ ಆರೋಪ, ಈಗ ಮುಡಾ, ಅಬಕಾರಿ, ಕಾರ್ಮಿಕ ಇಲಾಖೆ ಹಗರಣಗಳು ನಿಮ್ಮ ಸುತ್ತಮುತ್ತ ಅಂಟಿಕೊಂಡಿವೆ. ಮೋದಿ ಅವರ ವಿರುದ್ಧ ಒಂದೇ ಒಂದು ಆರೋಪವಿಲ್ಲ. ದುರುದ್ದೇಶಪೂರಕವಾಗಿ ಪ್ರಶ್ನಿಸುತ್ತೀರಿ ಎಂದರು.

ರಾಜ್ಯದ ಮೂರು ಕ್ಷೇತ್ರದಲ್ಲಿ, ಮಹಾರಾಷ್ಟ್ರ ಹಾಗೂ ಜಾರ್ಖಂಡ್‌ನಲ್ಲೂ ಬಿಜೆಪಿ ಜಯಭೇರಿ ಭಾರಿಸಲಿದೆ. 2006-07ರಲ್ಲಿ ಈ ಕ್ಷೇತ್ರ ಹಿಂದುಳಿದ ಕ್ಷೇತ್ರವಾಗಿತ್ತು. ಕುಡಿಯುವ ನೀರು, ಜಾನಪದ ವಿಶ್ವವಿದ್ಯಾಲಯ, ಟೆಕ್ಸ್‌ಟೈಲ್ ಪಾರ್ಕ್, ಪಶುವೈದ್ಯಕೀಯ ಕಾಲೇಜ್, ಆಯುರ್ವೇದ ಮಹಾವಿದ್ಯಾಲಯ, ಐಟಿಐ ಕಾಲೇಜ್‌ಗಳು, ಸೇರಿ ಅನೇಕ ಕೊಡುಗೆಗಳನ್ನು ಬೊಮ್ಮಾಯಿ ಕೊಟ್ಟಿದ್ದಾರೆ. ಎಲ್ಲ ವರ್ಗಗಳನ್ನು ಒಟ್ಟಿಗೆ ತೆಗೆದುಕೊಂಡು ಹೋಗುವ ಬಿಜೆಪಿಗೆ ಮತ ಕೊಡಿ ಎಂದು ಕೋರಿದರು.

ಬಿಜೆಪಿಯ 2014ರ ಪ್ರಣಾಳಿಕೆಯಲ್ಲಿ ವಕ್ಫ್ ಪರವಾಗಿ ಸೇರಿಸಲಾಗಿತ್ತು ಎಂದು ಸಿದ್ದರಾಮಯ್ಯ ಹೇಳಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಜೋಶಿ, ನೀವು ಬೇಸಿಕ್ ವಿಷಯ ತಿಳಿದು ಮಾತನಾಡಿ. ವಕ್ಫ್ ಒಬ್ಬರ ಆಸ್ತಿ ಆಗಬಾರದು. ಜಿಲ್ಲೆ ಜಿಲ್ಲೆ ಓಡಾಡಿ ಡಿಸಿ, ತಹಸೀಲ್ದಾರ್‌ರಿಗೆ ಧಮ್ಕಿ ಹಾಕಿ ಅಮಾಯಕರ ಭೂಮಿ ವಶಪಡಿಸಿಕೊಳ್ಳಿ ಎಂದು ನಾವು ಹೇಳಿಲ್ಲ. ಕಾನೂನು ಬದ್ಧವಾಗಿ ಇದ್ದರೆ ಮಾತ್ರ ಮಾಡಿ ಎಂದಿದ್ದೇವೆ. ಯಾವುದಕ್ಕೆ ಬೇಕು ಅದಕ್ಕೆ ಬಳಸಿಕೊಳ್ಳಿ ಎಂದಿದ್ದೇವೆ. ಮುಂದೆಯೂ ಹೇಳುತ್ತೇವೆ ಎಂದರು.

ಸಂಸದ ಗೋವಿಂದ ಕಾರಜೋಳ ಮಾತನಾಡಿ, ಬೊಮ್ಮಾಯಿ ಸಿಎಂ ಇದ್ದಾಗ ಒಳಮೀಸಲಾತಿ ವರ್ಗೀಕರಣ ಮಾಡಿ ಕಳುಹಿಸಿದ್ದನ್ನು ಸುಪ್ರೀಂಕೋರ್ಟ್ ಕೂಡ ಒಪ್ಪಿದೆ. ಆದರೆ, ಸಿಎಂ, ಡಿಸಿಎಂ, ಖರ್ಗೆ ಎಲ್ಲ ಸೇರಿ ದಲಿತರಿಗೆ ಮೋಸ ಮಾಡುತ್ತಿದ್ದಾರೆ. ಮೊದಲ ಕ್ಯಾಬಿನೆಟ್‌ನಲ್ಲೇ ಒಳಮೀಸಲಾತಿ ಜಾರಿಗೊಳಿಸುವುದಾಗಿ ಹೇಳಿದ್ದ ಸರ್ಕಾರ ಈಗ ಮರೆತಿದೆ. ದಲಿತರ ಓಟು ಕೇಳಲು ನಿಮಗೆ ನೈತಿಕತೆ ಇಲ್ಲ ಎಂದರು.

ಶಾಸಕರಾದ ಎಸ್.ಟಿ.ಶ್ರೀವತ್ಸ, ಎಸ್.ವಿ.ಸಂಕನೂರ, ಸುರಭಿ ಬಡಿಗೇರ, ರಾಜಣ್ಣ ಕೊರವಿ, ಬಿ.ನರಸಪ್ಪ, ಶಿವಾನಂದ ಮ್ಯಾಗೇರಿ, ಇತರರಿದ್ದರು.

ಮೊದಲು ವಕ್ಫ್ ನೋಟಿಸ್ ನಿಲ್ಲಿಸಲಿ

ವಕ್ಫ್ ನೋಟಿಸ್ ವಾಪಸ್ ಪಡೆಯುವುದಾಗಿ ಹೇಳುತ್ತಿದೆ ಸರ್ಕಾರ. ನೋಟಿಸ್ ಕೊಡುವುದನ್ನು ಮೊದಲು ನಿಲ್ಲಿಸಬೇಕು. ಕೇಂದ್ರದಲ್ಲಿ ಬದಲಾವಣೆ ತರುವುದಕ್ಕೆ ಬೆಂಬಲ ನೀಡುತ್ತೀರಾ? ಎಂದು ಕಾಂಗ್ರೆಸ್ ಸ್ಪಷ್ಟಪಡಿಸಬೇಕು. ಜಮೀರ್ ಅಹ್ಮದ್ ಎನ್ನುವ ಮತಾಂಧ ನಿಮ್ಮ ಹೆಸರಲ್ಲಿ ಅಧಿಕಾರಿಗಳಿಗೆ ಬೆದರಿಸಿ ಅಮಾಯಕರಿಗೆ ನೋಟಿಸ್ ಕೊಡಿಸಿದ್ದಾರೆ. ಅವರ ವಿರುದ್ಧ ಯಾವ ಕ್ರಮ ತೆಗೆದುಕೊಂಡಿದ್ದೀರಿ. ದಾಖಲೆ ಕೊಡಿ. ನಿಮ್ಮ ಅಲ್ಲಾಗ ಮೇಲ್ಮನವಿ ಸಲ್ಲಿಸಲು ಹೇಳಿ. ಹನುಮಂತ ದೇವರು ಯಾಕೆ ಅರ್ಜಿ ಸಲ್ಲಿಸಬೇಕು. ಇದನ್ನು ಮೊದಲು ಸ್ಪಷ್ಟಪಡಿಸಿ ಎಂದು ಕೇಂದ್ರ ಸಚಿವ ಜೋಶಿ ಹೇಳಿದರು. ಯಾವ ಕಾರಣಕ್ಕೂ ಎಲೆಕ್ಷನ್ ಮುಗಿದ ಮೇಲೆ ವಕ್ಫ್ ಬಂದ್ ಮಾಡಲ್ಲ. ಬಿಜೆಪಿಯಿಂದ ಒಂದು ಸಮಾವೇಶ ಮಾಡಿ ಜನರಿಂದ ಅಹವಾಲು ಸ್ವೀಕರಿಸುವ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷರಿಗೆ ಸೂಚನೆ ಕೊಟ್ಟಿದ್ದೇನೆ ಎಂದರು. ಶಿಗ್ಗಾಂವಿ ಸಂತೆ ಬೈಲಿನಲ್ಲಿ ಸ್ಪಷ್ಟವಾಗಿದೆ ಪುರಸಭೆ ಆಸ್ತಿ ಅಂತಾ. ಅಲ್ಲಿ ಹಸಿರು ಜಂಡಾ ಹಾಕಿದ್ದಾರೆ. ಎಸ್‌ಪಿಗೆ ಹೇಳಿದೆ ತೆಗೆಸಿ ಅಂತಾ. ಮತ್ತೊಬ್ಬರು ಹಾಕಿದರೆ ಕೋಮುಗಲಭೆ ಆಗುತ್ತವೆ ಎಂದರೂ ತೆಗೆಸಿಲ್ಲ. ಅದಕ್ಕೂ ಗಂಭೀರವಾದ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಕೋಟ್:

ಕಾಂಗ್ರೆಸ್ ಸತ್ತ ಸರ್ಕಾರ, ಸಚಿವರು ಶಾಸಕರು ರಣಹದ್ದಿನಂತೆ ಹರಿದುಕೊಂಡು ತಿನ್ನುತ್ತಿದ್ದಾರೆ. ಜನ ಇವರನ್ನು ಕ್ಷಮಿಸಲು ಸಾಧ್ಯವೇ ಇಲ್ಲ. ಸಿದ್ದರಾಮಯ್ಯ ಮುಡಾ ಪ್ರಕರಣದಲ್ಲಿ ಆರೋಪಿಯಾಗಿದ್ದಾರೆ. ಶೀಘ್ರದಲ್ಲೇ ಶಿಕ್ಷೆ ಪ್ರಮಾಣ ಘೋಷಣೆಯಾಗುತ್ತದೆ. ಚುನಾವಣೆ ನಂತರ ಡಿಸೆಂಬರ್ 1ರ ವೇಳೆಗೆ ರಾಜ್ಯ ಸರ್ಕಾರ ಪಥನವಾಗುತ್ತದೆ.

- ಗೋವಿಂದ ಕಾರಜೋಳ, ಸಂಸದ