ಹಾವೇರಿ: ಭ್ರಷ್ಟಾಚಾರಿಗಳಿಗೆ ಸಿಂಹಸ್ವಪ್ನವಾಗಿರುವ ರವಿ ಕೃಷ್ಣಾರೆಡ್ಡಿ ಅವರು ಶಿಗ್ಗಾಂವಿ ಉಪ ಚುನಾವಣೆಯಲ್ಲಿ ಸ್ಪರ್ಧಿಸಲು ಒಲವು ತೋರಿದ್ದಾರೆ ಎಂದು ಕರ್ನಾಟಕ ರಕ್ಷಣಾ ಸಮಿತಿ (ಕೆಆರ್‌ಎಸ್) ಪಕ್ಷದ ಜಿಲ್ಲಾ ಘಟಕದ ಕಾರ್ಯದರ್ಶಿ ಧರ್ಮರಾಜ ಬಿಂದಲಗಿ ಹೇಳಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜಕೀಯ ಕ್ಷೇತ್ರ ಕಲುಷಿತಗೊಂಡಿದೆ. ಪ್ರಜ್ಞಾವಂತರು, ಸಜ್ಜನರು ಹಾಗೂ ಬುದ್ದಿವಂತರು, ರಾಜಕಾರಣ ಸಹವಾಸ ಬೇಡವೆಂದು ಸುಮ್ಮನಾಗುತ್ತಿದ್ದಾರೆ. ಇದರ ವಿರುದ್ಧ ನಿರಂತರವಾಗಿ ಹೋರಾಡುತ್ತಿರುವ ಕೆಆರ್‌ಎಸ್ ಪಕ್ಷದ ರಾಜ್ಯಾಧ್ಯಕ್ಷ ರವಿ ಕೃಷ್ಣಾರೆಡ್ಡಿ ಅವರು ಶಿಗ್ಗಾಂವಿಯಿಂದ ಸ್ಪರ್ಧಿಸುವಂತೆ ಜಿಲ್ಲಾ ಘಟಕದಿಂದ ಒತ್ತಾಯಿಸಿದ್ದೇವೆ. ಈ ಕುರಿತು ಅವರು ಶೀಘ್ರದಲ್ಲೇ ನಿರ್ಧಾರ ಪ್ರಕಟಿಸಲಿದ್ದಾರೆ ಎಂದರು.
ರವಿ ಕೃಷ್ಣಾರೆಡ್ಡಿ ಅವರು ರೈತರು, ಕಾರ್ಮಿಕರು, ಮಹಿಳೆಯರ ಪರ ಹೋರಾಡುತ್ತಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ಹೆಚ್ಚು ಚಿರಪರಿಚಿತರು. ಕ್ಷೇತ್ರದಲ್ಲಿರುವ ಪ್ರಜ್ಞಾವಂತ ಮತದಾರರಿಗೆ ಅವರ ಕೆಲಸಗಳು ಗೊತ್ತಿವೆ. ಜತೆಗೆ, ಯುವಕರ ಬೆಂಬಲವೂ ಸಿಗಲಿದೆ ಎಂದು ಹೇಳಿದರು.
ಪಕ್ಷದ ಕಾರ್ಯದರ್ಶಿಗಳಾದ ಚರಣರಾಜ ರೊಡ್ಡನವರ, ಯಲ್ಲಪ್ಪ ಕಾಡಶೆಟ್ಟಿಹಳ್ಳಿ, ಗಂಗಾ ಕೋರಿ, ಶಿವರಾಜ ಉಪ್ಪಾರ ಇದ್ದರು.