ಜಿಲ್ಲೆ

ಕಾಂಗ್ರೆಸ್ ಅಭ್ಯರ್ಥಿ ಅಪರಾಧ ಪ್ರಕರಣ ಮುಚ್ಚಿಟ್ಟಿದ್ದಾರೆ; ಚುನಾವಣಾ ಆಯೋಗಕ್ಕೆ ದೂರು; ಕುಸ್ತಿ ಆಡುವವರು ಬೇಕಾ, ಜನಸೇವಕರು ಬೇಕಾ ?; ಬಸವರಾಜ ಬೊಮ್ಮಾಯಿ

ಕೇಶವಮೂರ್ತಿ ಬೇಲೂರಪ್ಪನವರ

ಹಾವೇರಿ/ ಶಿಗ್ಗಾಂವಿ: ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮೇಲೆ ರೌಡಿಶೀಟರ್ ಓಪನ್ ಇದೆ ಎಂದು ಎಸ್‌ಪಿ ಅವರೇ ಹೇಳಿದ್ದಾರೆ. ಕಳೆದ ವರ್ಷ ಅವರ ಮೇಲೆ ಹಲವು ಪ್ರಕರಣಗಳು ಇರುವುದಾಗಿ ಅವರೇ ಅಫಿಡವಿಟ್‌ನಲ್ಲಿ ಸಲ್ಲಿಸಿದ್ದರು. ಈ ಬಾರಿ ಯಾವ ಪ್ರಕರಣವೂ ಇಲ್ಲವೆಂದು ಮರೆಮಾಚಿ ಸುಳ್ಳು ಹೇಳಿದ್ದಾರೆ. ಈ ಕುರಿತು ಕೇಂದ್ರ ಹಾಗೂ ರಾಜ್ಯ ಚುನಾವಣಾ ಆಯೋಗಕ್ಕೆ ದೂರು ಅರ್ಜಿ ಸಲ್ಲಿಸಲಾಗುವುದು ಎಂದು ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

ಶಿಗ್ಗಾಂವಿ ಪಟ್ಟಣದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ರೌಡಿಶೀಟರ್, ರೇಪ್ ಕೇಸ್ ಸೇರಿ 15ಕ್ಕೂ ಹೆಚ್ಚು ಪ್ರಕರಣಗಳು ಇವೆ ಎಂದು 2023ರ ಚುನಾವಣೆಯ ಅಫಿಡವಿಟ್‌ನಲ್ಲಿ ಹೇಳಿಕೊಂಡಿದ್ದರು. ಒಂದೇ ವರ್ಷದಲ್ಲಿ ಯಾವುದೇ ಕೇಸ್ ಇಲ್ಲ ಎಂದು ಹೇಳಿಕೊಂಡಿದ್ದಾರೆ. ಮಾಜಿ ಶಾಸಕ ಅಜ್ಜಂಪೀರ್ ಖಾದ್ರಿ ಹಾಗೂ ಎಸ್‌ಪಿ ಅವರೇ ಹೇಳಿದ್ದಾರೆ ರೌಡಿಶೀಟರ್ ಇದೆ ಅಂತಾ. ಹಾಗಾದರೆ ಅವರ ವಿರುದ್ಧ ಇನ್ನೂ ಹಲವು ಕೇಸ್‌ಗಳು ಇದ್ದು, ಅಫಿಡವಿಟ್‌ನಲ್ಲಿ ಸುಳ್ಳು ದಾಖಲಿಸಿದ್ದಾರೆ ಎಂದು ಅರ್ಥವಾಗುತ್ತದೆ ಎಂದರು.

ಹೀಗಿದ್ದರೂ ಅಧಿಕಾರಿಗಳು ಗೃಹಸಚಿವರು ಹಾಗೂ ಸರ್ಕಾರದ ಒತ್ತಡಕ್ಕೆ ಮಣಿದು ಕಾಂಗ್ರೆಸ್ ಅಭ್ಯರ್ಥಿಯ ನಾಮಪತ್ರವನ್ನು ಸರಿಯಾಗಿ ಪರಿಶೀಲನೆ ಮಾಡಿಲ್ಲ. ಚುನಾವಣಾ ಆಯೋಗ, ಜಿಲ್ಲಾಧಿಕಾರಿ ಹಾಗೂ ಚುನಾವಣಾಧಿಕಾರಿ ಈ ಕೂಡಲೇ ಇದನ್ನು ಪರಿಶೀಲಿಸಿ ಜನರಿಗೆ ಸತ್ಯವನ್ನು ತಿಳಿಸಬೇಕು. ಇಲ್ಲದಿದ್ದರೆ ನೀವೂ ಕರ್ತವ್ಯಲೋಪ ಮಾಡಿದಂತೆ. ನೀವೂ ಕೂಡ ಕಟಕಟೆಯಲ್ಲಿ ನಿಲ್ಲಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಚುನಾವಣಾ ನಾಮಪತ್ರ ಪರಿಶೀಲನೆಯನ್ನು ನಾವು ನಂಬಿದ್ದೆವು. ಜನ ಯಾರನ್ನು ಆಯ್ಕೆ ಮಾಡಬೇಕೆಂಬುದನ್ನು ತೀರ್ಮಾನಿಸಬೇಕು. ಕಾಂಗ್ರೆಸ್ ಅಭ್ಯರ್ಥಿ ಕೃಷಿ ಭೂಮಿಯನ್ನು ರಿಯಲ್ ಎಸ್ಟೇಟ್ ಮಾಡುತ್ತಿದ್ದಾರೆ. ಅದು ಅವರ ಉದ್ಯೋಗ. ಹೀಗೆ ಬಿಟ್ಟರೆ ಎಲ್ಲ ಜಮೀನು ಮಾರುತ್ತಾರೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಸಂಸದ ಗೋವಿಂದ ಕಾರಜೋಳ, ಶಾಸಕ ಮಹೇಶ ಟೆಂಗಿನಕಾಯಿ, ವಿಧಾನ ಪರಿಷತ್ ಸದ್ಯ ಎಸ್.ವಿ.ಸಂಕನೂರ ಇದ್ದರು.

ಕುಸ್ತಿ ಆಡುವವರು ಬೇಕಾ, ಜನಸೇವಕರು ಬೇಕಾ ?

ಪೈಲ್ವಾನ್‌ನನ್ನು ಕಣಕ್ಕೆ ಇಳಿಸಿದ್ದೇವೆ ಎನ್ನುತ್ತಾರೆ ಕಾಂಗ್ರೆಸ್ಸಿಗರು. ಇಲ್ಲಿ ಮೆಡಲ್‌ಗಾಗಿ ಕುಸ್ತಿ ನಡೆದಿಲ್ಲ. ಜನರ ಸೇವೆಗಾಗಿ ಚುನಾವಣೆ ನಡೆದಿದೆ. ಜನರ ಸೇವೆ ಮಾಡುವವರು ಬೇಕಾ ? ಅಥವಾ ಜನರೊಂದಿಗೆ ಕುಸ್ತಿ ಆಡುವ ಪೈಲ್ವಾನ್ ಬೇಕಾ ಎಂಬುದನ್ನು ಕ್ಷೇತ್ರದ ಪ್ರಬುದ್ಧ ಮತದಾರರೇ ತೀರ್ಮಾನಿಸಲಿ. ಅಂಥವರ ಕೈಯಲ್ಲಿ ಅಧಿಕಾರ ಸಿಕ್ಕರೆ ಇನ್ನಿಲ್ಲದ ಸಮಸ್ಯೆ ಎದುರಿಸಬೇಕಾಗುತ್ತದೆ.