ಹಾವೇರಿ: ಶಿಗ್ಗಾಂವಿ ತಾಲೂಕು ಗೊಟಗೋಡಿಯ ವಿಶ್ವದ ಏಕೈಕ ಜಾನಪದ ವಿಶ್ವವಿದ್ಯಾಲಯದ 8 ಮತ್ತು 9ನೇ ಘಟಿಕೋತ್ಸವ ಡಿ.2ರಂದು ಜಾನಪದ ವಿವಿ ಆವರಣದ ಹಿರೇತಿಟ್ಟು ಬಯಲು ರಂಗಮಂದಿರದಲ್ಲಿ ನಡೆಯಲಿದೆ. ಸಮಾರಂಭದಲ್ಲಿ ಜಾನಪದ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿದ ಆರು ಜನರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಗುವುದು ಎಂದು ವಿವಿ ಕುಲಪತಿ ಪ್ರೊ.ಟಿ.ಎಂ.ಭಾಸ್ಕರ ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
2021-22ನೇ ಸಾಲಿಗೆ ಜಾನಪದ ವೈದ್ಯ ಡಾ.ಹನುಮಂತಪ್ಪ ಗೋವಿಂದಪ್ಪ ದಡ್ಡಿ, ಜಾನಪದ ಸಾಹಿತಿ ಡಾ.ಶಾಂತಿ ನಾಯಕ, ರಾಮನಗರದ ಹಾಸನ ರಘು ಅವರಿಗೆ ಹಾಗೂ 2022-23ನೇ ಸಾಲಿಗೆ ಬೆಂಗಳೂರಿನ ಡಾ.ಜ್ಯೋತಿರ್ಲಿಂಗ ಚಂದ್ರಾಮ ಹೊನಕಟ್ಟಿ, ಪುರಾಣ ಕಾವ್ಯ ಭಾರತೀಯ ಪರಂಪರೆಯ ವಿಮರ್ಶಕ ಡಾ.ಎಸ್.ಸಿ.ಶರ್ಮಾ, ಯಾದಗಿರಿಯ ಜನಪದ ವಿದ್ವಾಂಸ ಸಿದ್ರಾಮ ಹೊನ್ನಕಲ್ ಅವರಿಗೆ ಗೌರವ ಡಾಕ್ಟರೆಟ್ ಪದವಿ ಪ್ರದಾನ ಮಾಡಿ ಗೌರವಿಸಲಾಗುವುದು ಎಂದು ಹೇಳಿದರು.