ಹಾವೇರಿ: ಜುಲೈ 7ರಂದು ಮಂಡನೆಯಾಗಲಿರುವ ರಾಜ್ಯ ಬಜೆಟ್‌ನಲ್ಲಿ ಶಿಕ್ಷಣಕ್ಕಾಗಿ ಶೇ.30ರಷ್ಟು ಹಣ ಮೀಸಲು ಇಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿ ಎಸ್‌ಎಫ್‌ಐ ರಾಜ್ಯಾಧ್ಯಕ್ಷ ಅಮರೇಶ ಕಡಗದ ಒತ್ತಾಯಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಬುಧವಾರ ವಿದ್ಯಾರ್ಥಿಗಳ ಶೈಕ್ಷಣಿಕ ಸಮಸ್ಯೆಗಳ ಕುರಿತು ಭಾರತ ವಿದ್ಯಾರ್ಥಿ ಫೆಡರೇಶನ್ (ಎಸ್‌ಎಫ್‌ಐ) ಆಯೋಜಿಸಿದ್ದ ಜಿಲ್ಲಾ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು. ನೂತನ ರಾಜ್ಯ ಸರ್ಕಾರದ ಮೊದಲ ಅಧಿವೇಶನ ಜು.3ರಿಂದ ರಂಭವಾಗಲಿದೆ. ಜುಲೈ 7ರಂದು ಬಜೆಟ್ ಮಂಡನೆಯಾಗಲಿದೆ. ಈ ಸಂದರ್ಭದಲ್ಲಿ ಸರ್ಕಾರ ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಡಬೇಕು. ಮಹಿಳೆಯರಿಗೆ ಉಚಿತ ಬಸ್ ಪಾಸ್ ನೀಡಿರುವಂತೆ, ಎಲ್ಲ ವರ್ಗದ ವಿದ್ಯಾರ್ಥಿಗಳಿಗೂ ಉಚಿತ ಬಸ್ ಪಾಸ್ ವ್ಯವಸ್ಥೆ ಕಲ್ಪಿಸಬೇಕು. 8ನೇ ತರಗತಿ ವಿದ್ಯಾರ್ಥಿಗಳಿಗೆ ನೀಡುತ್ತಿದ್ದ ಬೈಸಿಕಲ್ ವಿತರಣೆಯನ್ನು ಮತ್ತೆ ಆರಂಭಿಸಬೇಕು ಎಂದು ಆಗ್ರಹಿಸಿದರು.
ಎಸ್‌ಎಫ್‌ಐ ರಾಜ್ಯ ಕಾರ್ಯದರ್ಶಿ ಭೀಮನಗೌಡ ಸುಂಕೇಶ್ವರಹಾಳ ಮಾತಾನಾಡಿ, ಬಿಜೆಪಿ ಸರ್ಕಾರದ ಅವಧಿಯಲ್ಲಿ ಅರ್ಜಿ ಹಾಕಿದ ಎಲ್ಲ ವಿದ್ಯಾರ್ಥಿಗಳಿಗೂ ಹಾಸ್ಟೆಲ್ ಸೌಲಭ್ಯ ಒದಗಿಸಬೇಕು ಎಂದು ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಗಿತ್ತು. ಪರಿಣಾಮವಾಗಿ ರಾಜ್ಯದಲ್ಲಿ ಹೆಚ್ಚುವರಿಯಾಗಿ 33,500 ವಿದ್ಯಾರ್ಥಿಗಳಿಗೆ ಹಾಸ್ಟೆಲ್ ವ್ಯವಸ್ಥೆ ಒದಗಿಸಲಾಯಿತು. ಆದರೆ, ಈಗಿರುವ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಅರ್ಜಿ ಹಾಕಿದ ಎಲ್ಲ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸೌಲಭ್ಯ ಒದಗಿಸಬೇಕು. ರಾಷ್ಟೀಯ ಶಿಕ್ಷಣ ನೀತಿ ರದ್ದುಗೊಳಿಸಿ ಪರ್ಯಾಯ ಶಿಕ್ಷಣ ನೀತಿ ಜಾರಿ ಮಾಡಬೇಕು ಎಂದು ಹೇಳಿದರು.
ಜಿಲ್ಲಾ ಸಹ ಕಾರ್ಯದರ್ಶಿ ಬಸವರಾಜ ಭೋವಿ ಮಾತಾನಾಡಿ, ಪ್ರಸಕ್ತ ವರ್ಷದಿಂದಲೇ ಕಾನೂನು ಮಹಾವಿದ್ಯಾಲಯ 3 ಮತ್ತು 5 ವರ್ಷದ ಕೋರ್ಸ್ ಪ್ರಾರಂಭಿಸಬೇಕು. ಜಿಲ್ಲಾ ಕೇಂದ್ರದ ನಗರದಲ್ಲೇ ಕಾಲೇಜು ಕಟ್ಟಡ ಪ್ರಾರಂಭ ಮಾಡಬೇಕು. ನೂತನ ಹಾವೇರಿ ವಿಶ್ವವಿದ್ಯಾಲಯಕ್ಕೆ ಅಗತ್ಯ ಅನುದಾನ ಬಿಡುಗಡೆ ಮಾಡಿ ಅಭಿವೃದ್ಧಿಪಡಿಸಬೇಕು ಎಂದರು.
ಸಭೆಯಲ್ಲಿ ಗುಡ್ಡಪ್ಪ ಮಡಿವಾಳರ, ಅರುಣ ಕಡಕೋಳ, ಕಾವ್ಯಾ ಹನಗೋಡಿಮಠ, ರವಿ ಬಂಕಾಪುರ, ವಿವೇಕ ಫನಸೆ, ಶ್ರೀಧರ ಸಿ., ವೀಣಾ ಘಂಟೇರ, ಲಕ್ಷ್ಮೀ ಶಿಗ್ಗಾಂವಿ, ಅರ್ಜುನ ರಜಪೂತ, ದೇವರಾಜ ಎಚ್., ದುರಗಪ್ಪ ಡಿ., ಇತರರು ಇದ್ದರು.