ಜಿಲ್ಲೆ

ರಾಜ್ಯ ಸರ್ಕಾರದ ವಿರುದ್ಧ ಎಸ್‌ಎಫ್‌ಐ ಆಕ್ರೋಶ; ಅಹಿಂದ ವರ್ಗದ ಸ್ಕಾಲರ್‌ಶಿಪ್, ಪ್ರೋತ್ಸಾಹಧನ ರದ್ದತಿಗೆ ಖಂಡನೆ

ಕೇಶವಮೂರ್ತಿ ಬೇಲೂರಪ್ಪನವರ

ಹಾವೇರಿ: ವಿದ್ಯಾರ್ಥಿಗಳ ಸ್ಕಾಲರ್‌ಶಿಪ್ ಹಾಗೂ ಪ್ರೋತ್ಸಾಹ ಧನ ರದ್ದು ಮಾಡಿರುವುದನ್ನು ಖಂಡಿಸಿ ಹಾಗೂ ಆದೇಶ ಹಿಂಪಡೆಯುವಂತೆ ಆಗ್ರಹಿಸಿ ಎಸ್‌ಎಫ್‌ಐ ನೇತೃತ್ವದಲ್ಲಿ ನಗರದಲ್ಲಿ ಬುಧವಾರ ವಿದ್ಯಾರ್ಥಿಗಳು ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲಾಯಿತು.
ನಗರದ ಸರ್ಕಾರಿ ಪದವಿಪೂರ್ವ ಮಹಾವಿದ್ಯಾಲಯದಿಂದ ಎಸ್‌ಎಂಎಸ್, ಹೊಸಮಠ ಕಾಲೇಜ್ ವಿದ್ಯಾರ್ಥಿಗಳು ಮೆರವಣಿಗೆ ಮೂಲಕ ಹೊಸಮನಿ ಸಿದ್ದಪ್ಪ ವೃತ್ತದವರೆಗೆ ಪ್ರತಿಭಟನಾ ರ‌್ಯಾಲಿ ನಡೆಸಿದರು. ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ವಿದ್ಯಾರ್ಥಿ ವಿರೋಧಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ತಹಸೀಲ್ದಾರರ ಮೂಲಕ ಮುಖ್ಯಮಂತ್ರಿಯವರಿಗೆ ಮನವಿ ಪತ್ರ ಸಲ್ಲಿಸಿದರು.
ಸಂಘಟನೆಯ ಜಿಲ್ಲಾ ಸಹ ಕಾರ್ಯದರ್ಶಿ ಬಸವರಾಜ ಭೋವಿ ಮಾತನಾಡಿ, ಶಿಕ್ಷಣದಿಂದ ಶತಮಾನಗಳ ಕಾಲ ವಂಚಿತರಾಗಿದ್ದ ಸಮುದಾಯದ ಮಕ್ಕಳಿಗೆ ಸರ್ಕಾರಿ ಯೋಜನೆಗಳು ಆಸರೆಯಾಗಿದ್ದವು. ಸರ್ಕಾರದ ಹೊಸ ಆದೇಶದಿಂದ ತಳ ಸಮುದಾಯದ ಮಕ್ಕಳನ್ನು ಮತ್ತಷ್ಟು ಕತ್ತಲ ಕೂಪಕ್ಕೆ ತಳ್ಳುವಂತಾಗಿದೆ. ಯಾವಾಗಲೂ ಅಲ್ಪಸಂಖ್ಯಾತ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳ ಸಮುದಾಯದ ಅಭಿವೃದ್ಧಿಗಾಗಿ ನಮ್ಮ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ಮಾಡಿದೆ ಎಂದು ಹೇಳುವ ರಾಜ್ಯ ಸರ್ಕಾರ ಅಹಿಂದ ವರ್ಗದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ಹಾಗೂ ಶುಲ್ಕ ಮರುಪಾವತಿ ಯೋಜನೆಗಳಿಗೆ ಕತ್ತರಿ ಹಾಕಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಸಮುದಾಯದ 10ನೇ ತರಗತಿ ವಿದ್ಯಾರ್ಥಿಗಳಿಗೆ ಈ ಹಿಂದಿನ ಆದೇಶದಲ್ಲಿ ಶೇ.60ರಿಂದ 74.99 ಫಲಿತಾಂಶದೊಂದಿಗೆ ಪ್ರಥಮ ಶ್ರೇಣಿಯಲ್ಲಿ ಪ್ರಥಮ ಭಾರಿಗೆ ಉತ್ತೀರ್ಣರಾದರೆ 7,000 ರೂಪಾಯಿ ಪ್ರೋತ್ಸಾಹ ಧನವನ್ನು ಸಮಾಜ ಕಲ್ಯಾಣ ಇಲಾಖೆ ಮೂಲಕ ಕೊಡಲಾಗುತ್ತಿತ್ತು. ಈ ಶೈಕ್ಷಣಿಕ ವರ್ಷದಲ್ಲಿ ಪರಿಸ್ಕೃತ ಆದೇಶದಲ್ಲಿ ಇದನ್ನು ರದ್ದು ಮಾಡಲಾಗಿದೆ. ಇದು ವಿದ್ಯಾರ್ಥಿಗಳ ವಿರೋಧಿ ನೀತಿ ಅಲ್ಲವೇ ಎದು ಕುಟುಕಿದರು.
60ರಿಂದ 75 ಫಲಿತಾಂಶ ಪಡೆದ ಎಸ್‌ಸಿ, ಎಸ್‌ಟಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ರದ್ದುಪಡಿಸಲಾಗಿದೆ. ಅಲ್ಪ ಸಮುದಾಯದ ಪಿಎಚ್‌ಡಿ ವಿದ್ಯಾರ್ಥಿಗಳಿಗೆ ಮಾಸಿಕ ಸಹಾಯಧನ 25 ಸಾವಿರ ರೂ. ಮುಂದುವರೆಸಬೇಕು. ಹಿಂದುಳಿದ ವರ್ಗದ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನ ನೀಡುವಲ್ಲಿನ ತಾರತಮ್ಯ ನಿಲ್ಲಿಸಬೇಕು ಎಂದು ಆಗ್ರಹಿಸಿದರು.
ನೇಹಾಲ್‌ಖಾನ್ ಗಂಗಾವತಿ, ಅರ್ಜುನ ರಜಪೂತ, ದೇವರಾಜ ಅರ್ಕಸಾಲಿ, ಮಹೇಶ ಮರೋಳ, ಸುಲೇಮಾನ್ ಮತ್ತಿಹಳ್ಳಿ, ದುರ್ಗಪ್ಪ ಯಮ್ಮಿಯವರ, ಲಕ್ಷ್ಮೀ ಕೊರವರ, ಶೃತಿ ಆರ್.ಎಂ., ಮುತ್ತು ಎಚ್., ವಿಜಯ ಶಿರಹಟ್ಟಿ, ಭಾವನಾ ಕೆ.ಎಚ್., ಲಾವಣ್ಯ ಆರ್.ಡಿ., ಇತರರಿದ್ದರು.