Oplus_0 
ಜಿಲ್ಲೆ

ನೀಟ್, ಎನ್‌ಟಿಎ ರದ್ದತಿಗೆ ಎಸ್‌ಎಫ್‌ಐ ಆಗ್ರಹ

ಕೇಶವಮೂರ್ತಿ ಬೇಲೂರಪ್ಪನವರ

ಹಾವೇರಿ: ಯುಜಿಸಿ, ನೀಟ್ ಪರೀಕ್ಷೆ ಭ್ರಷ್ಟಾಚಾರದ ಹಗರಣ ವಿರೋಧಿಸಿ, ರಾಷ್ಟ್ರಿಯ ಪರೀಕ್ಷಾ ಸಂಸ್ಥೆ (ಎನ್.ಟಿ.ಎ) ಹಾಗೂ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (ನೀಟ್) ಅನ್ನು ರದ್ದುಗೊಳಿಸಿ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಜಾರಿಗೊಳಿಸಬೇಕು ಎಂದು ಆಗ್ರಹಿಸಿ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್‌ಎಫ್‌ಐ) ವತಿಯಿಂದ ನಗರದಲ್ಲಿ ಬುಧವಾರ ಪ್ರತಿಭಟಿಸಲಾಯಿತು.
ನಗರದ ಮೈಲಾರ ಮಹಾದೇವಪ್ಪ ವೃತ್ತದಿಂದ ಹೊಸಮನಿ ಸಿದ್ದಪ್ಪ ವೃತ್ತದವರೆಗೆ ಪ್ರತಿಭಟನಾ ರ‌್ಯಾಲಿ ನಡೆಸಲಾಯಿತು. ನಂತರ ತಹಸೀಲ್ದಾರ್ ಮೂಲಕ ಕೇಂದ್ರ ಸರ್ಕಾರ ಹಾಗೂ ರಾಷ್ಟ್ರಪತಿಯವರಿಗೆ ಮನವಿ ಸಲ್ಲಿಸಲಾಯಿತು.
ಎಸ್‌ಎಫ್‌ಐ ಜಿಲ್ಲಾ ಸಹ ಕಾರ್ಯದರ್ಶಿ ಬಸವರಾಜ ಬೋವಿ ಮಾತನಾಡಿ, ದೇಶದಲ್ಲಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ವೈದ್ಯಕೀಯ ಮತ್ತು ಇತರೆ ಕೋರ್ಸ್‌ಗಳಿಗೆ ಪ್ರವೇಶ ಪಡೆಯಲು ರಾಷ್ಟ್ರ ಮಟ್ಟದಲ್ಲಿ ನಡೆಸುವ ನೀಟ್ ಪರೀಕ್ಷೆಯು ಜೂ.4ರಂದು ಫಲಿತಾಂಶಗಳು ಪ್ರಕಟವಾದ ನಂತರ, ನ್ಯಾಷನಲ್ ಟೆಸ್ಟ್ ಏಜೆನ್ಸಿ (ಎನ್.ಟಿ.ಎ) ಪರೀಕ್ಷೆಯ ಫಲಿತಾಂಶದಲ್ಲಿನ ನಡವಳಿಕೆಯ ಬಗ್ಗೆ ಹಾಗೂ ಪರೀಕ್ಷೆಗಳನ್ನು ನಡೆಸುವ ಬಗ್ಗೆ ಪಾರದರ್ಶಕತೆಯನ್ನು ಪ್ರಶ್ನಿಸುವ ಹಲವಾರು ದೂರುಗಳು ಬರುತ್ತಿವೆ. ಹಾಗಾಗಿ, ಈ ಪ್ರವೇಶ ಪರೀಕ್ಷೆ ನಡೆಸಲು ಈ ಸಸ್ಥೆಗಳು ಅಸಮರ್ಥವಾಗಿವೆ ಎಂಬುದು ಸಾಬೀತಾಗಿದೆ. ಈ ಬಗ್ಗೆ ಸುಪ್ರೀಂಕೋರ್ಟ್ ನ್ಯಾಯಾಧೀಶರ ನೇತೃತ್ವದ ಸಮಿತಿ ರಚಿಸಿ ಸೂಕ್ತ ತನಿಖೆ ನಡೆಸಬೇಕು. ಕೇಂದ್ರ ಶಿಕ್ಷಣ ಸಚಿವ ಧರ್ಮೇದ್ರ ಪ್ರಧಾನ್ ನೈತಿಕ ಹೊಣೆ ಒತ್ತು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.
ಕೇಂದ್ರ ಸರ್ಕಾರ ವೈದ್ಯಕೀಯ ಶಿಕ್ಷಣದ ಪಠ್ಯಕ್ರಮದಲ್ಲಿ ಗಮನಾರ್ಹವಾದ ಕಡಿತ ಮಾಡುತ್ತ ಕಾಲೇಜು ಶುಲ್ಕಗಳನ್ನು ಹೆಚ್ಚಿಸುತ್ತಾ ಹಣವುಳ್ಳವರಿಗೆ ಮಾತ್ರ ವೈದ್ಯಕೀಯ ಶಿಕ್ಷಣ ಎಂಬ ಖಾಸಗೀಕರಣ ನೀತಿಗಳನ್ನು ಎನ್‌ಎಂಸಿ ಮತ್ತು ಎನ್‌ಟಿಎ ಸಂಸ್ಥೆಗಳು ಜಂಟಿಯಾಗಿ ಪ್ರೋತ್ಸಾಹಿಸುತ್ತಿವೆ. ಇದು ದೇಶದ ಭವಿಷ್ಯಕ್ಕೆ ತುಂಬಾ ಅಪಾಯಕಾರಿಯಾಗಿದೆ ಎಂದರು.
ಸುಲೆಮಾನ್ ಮತ್ತಿಹಳ್ಳಿ, ಕುಬೇರ ಗೋಣಿ, ಅಜೇಯ ಲಮಾಣಿ, ಸುನೀಲ ಎಲ್., ಭರತ ಡಿ.ಆರ್., ಹೇಮಂತ ಡಿ.ಎಲ್., ನಾಗರಾಜ ಕೆ.ಎಚ್., ಅನ್ನಪೂರ್ಣ ಕೆ., ಭೂಮಿಕಾ ವಿ.ಎಚ್., ಲಕ್ಷ್ಮೀ ಡಿ.ಆರ್. ಇತರರು ಪಾಲ್ಗೊಂಡಿದ್ದರು.