ಹಾವೇರಿ: ಸೂಕ್ತ ಬಸ್ ಸೌಲಭ್ಯ ಇಲ್ಲದೇ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ತೀವ್ರ ಸಮಸ್ಯೆ ಅನುಭವಿಸುತ್ತಿದ್ದಾರೆ. ಈ ಕೂಡಲೇ ನಗರ ಸಾರಿಗೆ ಬಸ್ ಪ್ರಾರಂಭಿಸಬೇಕು ಹಾಗೂ ಗ್ರಾಮೀಣ ಪ್ರದೇಶಗಳಿಗೆ ಸಮರ್ಪಕ ಬಸ್ ವ್ಯವಸ್ಥೆ ಕಲ್ಪಿಸಬೇಕು ಇಲ್ಲದಿದ್ದರೆ ಹಾವೇರಿ ಬಸ್ ನಿಲ್ದಾಣ ಬಂದ್ ಮಾಡಿ ಪ್ರತಿಭಟಿಸಲಾಗುವುದು ಎಂದು ಭಾರತ ವಿದ್ಯಾರ್ಥಿ ಫೆಡರೇಶನ್ (ಎಸ್‌ಎಫ್‌ಐ) ಜಿಲ್ಲಾ ಸಮಿತಿ ಎಚ್ಚರಿಕೆ ನೀಡಿತು.
ನಗರದ ಬಸ್ ನಿಲ್ದಾಣದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದ ಎಸ್‌ಎಫ್‌ಐ ಕಾರ್ಯಕರ್ತರು ಹಾಗೂ ವಿದ್ಯಾರ್ಥಿಗಳು ಬಸ್ ಸಮಸ್ಯೆ ಇತ್ಯರ್ಥಪಡಿಸುವಂತೆ ಆಗ್ರಹಿಸಿ ಕೆಎಸ್‌ಆರ್‌ಟಿಸಿ ಕಂಟ್ರೋಲರ್ ಕೆ.ಎಂ.ನಾಯಕ ಅವರ ಮೂಲಕ ಜಿಲ್ಲಾ ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ಗ್ರಾಮೀಣ ಭಾಗದಿಂದ ಸಾವಿರಾರು ವಿದ್ಯಾರ್ಥಿಗಳು, ಸಾರ್ವಜನಿಕರು ಜಿಲ್ಲಾ ಕೇಂದ್ರಕ್ಕೆ ವಿದ್ಯಾಭ್ಯಾಸಕ್ಕಾಗಿ, ವ್ಯಾಪಾರ ವಹಿವಾಟಿಗಾಗಿ ಆಗಮಿಸುತ್ತಾರೆ. ಆದರೆ, ಅಗತ್ಯಕ್ಕೆ ತಕ್ಕಷ್ಟು ಬಸ್ ಸೌಕರ್ಯ ಇಲ್ಲ. ನಗರದಲ್ಲಿ ನಗರ ಸಾರಿಗೆ ವ್ಯವಸ್ಥೆ ಇಲ್ಲ. ಇದರಿಂದ ಜನತೆ ಸಂಕಷ್ಟ ಅನುಭವಿಸುತ್ತಿದ್ದಾರೆ. ಈ ಬಗ್ಗೆ ಹಲವು ಬಾರಿ ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಮನವಿ ಮಾಡಿಕೊಂಡರು ಈವರೆಗೆ ಯಾವುದೇ ರೀತಿಯ ಸ್ಪಂದನೆ ದೊರೆತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಎಸ್‌ಎಫ್‌ಐ ಜಿಲ್ಲಾ ಸಹ ಕಾರ್ಯದರ್ಶಿ ಬಸವರಾಜ ಭೋವಿ, ಅಭಿಷೇಕ ಗುದಗಿ, ರಾಜು ಸಣ್ಣಿಲಪ್ಪನವರ, ಸಂಜೀವ ಹರಿಜನ, ದರ್ಶನ ಮರೋಳ, ಬಸವರಾಜ ಕಂಬಳಿ, ನಾಗರಾಜ ಮಾಳಣ್ಣನವರ, ಪ್ರದೀಪ ಸಾದರ, ಸಂತೋಷ ಹೊಂಬಳಿ, ಭಾರತ ಮೂಲಿಮನಿ, ನೀಲಪ್ಪಗೌಡ ಮೇಟಿ, ಅಭಿಷೇಕ ದೊಡ್ಡಮನಿ, ಮುತ್ತುರಾಜ ಪೂಜಾರ, ಷಣ್ಮುಖ ಬಣಕಾರ, ಆಕಾಶ ಸುಣಗಾರ, ಆದಿತ್ಯ ತಳವಾರ, ಸೇರಿದಂತೆ, ಇತರರಿದ್ದರು.