ಜಿಲ್ಲೆ

ಸೊಳ್ಳೆ ನಿಯಂತ್ರಣಕ್ಕೆ ಮಕ್ಕಳಿಂದ ಮಾದರಿ ತಯಾರಿ; ಆರೋಗ್ಯ ಇಲಾಖೆಯಿಂದ ಜಿಲ್ಲಾ ಮಟ್ಟದ ಪ್ರದರ್ಶನ ಕಾರ್ಯಕ್ರಮ

ಕೇಶವಮೂರ್ತಿ ಬೇಲೂರಪ್ಪನವರ

ಹಾವೇರಿ: ಡೆಂಘಿ, ಮಲೇರಿಯಾ, ಮತ್ತಿತರ ಭಯಾನಕ ಕಾಯಿಲೆಗಳಿಗೆ ಕಾರಣವಾಗಿರುವ ಸೊಳ್ಳೆಗಳ ನಿಯಂತ್ರಣಕ್ಕಾಗಿ ಶಾಲಾ ಮಕ್ಕಳು ವಿವಿಧ ಬಗೆಯ ಮಾದರಿಗಳನ್ನು ಸಿದ್ಧಪಡಿಸಿದ್ದರು. ಮನೆಯ ಸುತ್ತಮುತ್ತಲಿನ ಪರಿಸರ ಶುಚಿಯಾಗಿಡುವುದು, ಚರಂಡಿ, ಖಾಲಿ ಸೈಟ್‌ಗಳ ಸ್ವಚ್ಛತೆ, ಟೈರ್, ಎಳನೀರು ಕುಡಿದು ಬಿಸಾಡಿದ ಚಿಪ್ಪುಗಳ ವಿಲೇವಾರಿ ಮಾಡುವುದು, ಸೇರಿದಂತೆ ನಾನಾ ರೀತಿಯ ಮಾಡೆಲ್‌ಗಳು ಗಮನ ಸೆಳೆದವು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಅಧಿಕಾರಿಗಳ ಸಹಯೋಗದಲ್ಲಿ ನಗರದ ಜಿಲ್ಲಾ ಆರೋಗ್ಯ ಭವನದಲ್ಲಿ ಗುರುವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಸೊಳ್ಳೆ ನಿಯಂತ್ರಣ ಮಾದರಿಗಳ ಪ್ರದರ್ಶನ ಕಾರ್ಯಕ್ರಮದಲ್ಲಿ ಕಂಡು ಬಂದ ದೃಶ್ಯವಿದು.
ಐದರಿಂದ ಏಳನೇ ತರಗತಿ ವಿಭಾಗದಲ್ಲಿ ಹೊಸರಿತ್ತಿ ಸಿಪಿಎಸ್ ಶಾಲೆಯ ಸುಶೀಲಾ ಹತ್ತಿಮತ್ತೂರ ಪ್ರಥಮ, ಕರ್ಜಗಿ ಎಚ್‌ಪಿಕೆಜಿಎಸ್ ಶಾಲೆಯ ಲಕ್ಷ್ಮೀ ಅಣಿ ದ್ವಿತೀಯ ಹಾಗೂ ಮುಗುಳಿ ಎಚ್‌ಪಿಎಸ್ ಶಾಲೆಯ ಲತಾ ಕಳಸಗೇರಿಮಠ ತೃತೀಯ ಬಹುಮಾನ ಪಡೆದುಕೊಂಡರು.ಎಂಟರಿಂದ 10ನೇ ತರಗತಿ ವಿಭಾಗದಲ್ಲಿ ಕಾರಡಗಿ ಜಿವಿಎಚ್‌ಎಸ್ ಶಾಲೆಯ ಆಶಿಯಾನಾಬಾನು ಶಿಗ್ಗಾಂವಿ ಪ್ರಥಮ, ಕುಣಿಮೆಳ್ಳಿಹಳ್ಳಿ ಜಿಎಚ್‌ಎಸ್ ಶಾಲೆಯ ರೋಜಾ ದಾಸರ ದ್ವಿತೀಯ ಹಾಗೂ ಶಿಶುವಿನಹಾಳ ಎಸ್‌ಎಸ್‌ಎಸ್ ಪ್ರೌಢ ಶಾಲೆಯ ವಿನಯ ಪೂಜಾರ ತೃತೀಯ ಬಹುಮಾನ ಪಡೆದುಕೊಂಡಿದ್ದಾರೆ.
ತಿರ್ಪುಗಾರರಾಗಿ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಸರಿತಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಿದ್ದಲಿಂಗೇಶ ರಂಗಣ್ಣನವರ, ನಿವೃತ್ತ ಮುಖ್ಯೋಪಾಧ್ಯಾಯ ಆರ್.ಎಸ್.ಪಾಟೀಲ, ಶಾಲಾ ಶಿಕ್ಷಣ ಇಲಾಖೆ ಅಧಿಕಾರಿಗಳು, ಕನ್ನಡ ವಿಜ್ಞಾನ ಪರಿಷತ್ ಜಿಲ್ಲಾ ಮಟ್ಟದ ಸಂಯೋಜಕರು ಭಾಗವಹಿಸಿದ್ದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಚ್.ಎಸ್.ರಾಘವೇಂದ್ರಸ್ವಾಮಿ, ತಾಲೂಕು ಆರೋಗ್ಯಾಧಿಕಾರಿ ಡಾ.ಪ್ರಭಾಕರ ಕುಂದೂರ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಜಿಲ್ಲಾ ಘಟಕ ಅಧ್ಯಕ್ಷ ಎಸ್.ಬಿ.ಹಿರೇಮಠ, ವಿಜ್ಞಾನ ವಿಷಯ ಪರಿವೀಕ್ಷಕ ಎಸ್.ಸಿ.ಮೂಡಲದವರ, ಶಿಕ್ಷಕರಾದ ಜಿ.ಎಸ್.ಹತ್ತಿಮತ್ತೂರ, ಕೆ.ಎಸ್.ದಳವಾಯಿ, ಇತರರು ಉಪಸ್ಥಿತರಿದ್ದರು.
ಶಿಕ್ಷಕ ಗುರುಬಸಯ್ಯ ಹತ್ತಿಮತ್ತೂರ ಸ್ವಾಗತಿಸಿದರು. ಆರೋಗ್ಯ ನಿರೀಕ್ಷಣಾಧಿಕಾರಿ ಮಲ್ಲಿಕಾರ್ಜುನ ಸಿ.ಎಂ. ವಂದಿಸಿದರು.