ಹಾವೇರಿ: ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ 25 ಜನ ಹಿರಿಯ ನಾಗರೀಕರ ವೃದ್ಧಾಶ್ರಮ ಪ್ರಾರಂಭಿಸಲು ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ವಯಂಸೇವಾ ಸಂಸ್ಥೆಗಳಿಂದ ಅರ್ಜಿ ಆಹ್ವಾನಿಸಿದೆ.
ಸ್ವಯಂಸೇವಾ ಸಂಸ್ಥೆಗಳು ಇಂಡಿಯನ್ ಸೊಸೈಟೀಸ್ ರಿಜಿಸ್ಟ್ರೇಶನ್ ಆ್ಯಕ್ಟ್ 1860ರ ಪ್ರಕಾರ (1860ರ ಆಕ್ಸ್ ನಂ) ನೋಂದಣಿಯಾಗಿರಬೇಕು. ಯಾವುದೇ ಲಾಭದ ಉದ್ದೇಶವಿಲ್ಲದೇ ನೋಂದಣಿಯಾಗಿರುವ ಚಾರಿಟಬಲ್ ಕಂಪನಿ, ಭಾರತದಲ್ಲಿ ಜಾರಿಯಲ್ಲಿರುವ ಯಾವುದೇ ಕಾನೂನಿನ ಪ್ರಕಾರ ನೊಂದಣಿಯಾಗಿರುವ ಸಾರ್ವಜನಿಕ ಟ್ರಸ್ಟ್, ನೊಂದಣಿಯಾಗಿರುವ ಸಮಾಜ ಸೇವೆಯಲ್ಲಿ ತೊಡಗಿರುವ ಅಧಿಕಾರೇತರ ಸಂಸ್ಥೆಗಳು, 1950ರ ಕರ್ನಾಟಕ (ಮೈಸೂರು) ಸಂಘ ಸಂಸ್ಥೆಗಳು ಅಧಿನಿಯಮದ ಪ್ರಕಾರ ನೋಂದಣಿಯಾಗಿರುವ ಸಂಸ್ಥೆಗಳು. ಸ್ವಯಂ ಸೇವಾ ಸಂಸ್ಥೆಯು ಅಸ್ತಿತ್ವಕ್ಕೆ ಬಂದು ಕನಿಷ್ಟ ಎರಡು ವರ್ಷಗಳಾಗಿರಬೇಕು. ವೃದ್ಧಾಶ್ರಮ ನಡೆಸುವಲ್ಲಿ ಅಥವಾ ಇಂತಹುದೇ ಇನ್ನಿತರ ಕಾರ್ಯಕ್ರಮಗಳನ್ನು ನಡೆಸುವಲ್ಲಿ ಅನುಭವ ಹೊಂದಿರಬೇಕು.
ಆಸಕ್ತ ಸ್ವಯಂಸೇವಾ ಸಂಸ್ಥೆ (ಎನ್‌ಜಿಒ)ಯು ನಿಗದಿತ ಅರ್ಜಿ ನಮೂನೆಯನ್ನು ಉಪನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ, ಜಿಲ್ಲಾಡಳಿತ ಭವನ, ’ಬಿ’ ಬ್ಲಾಕ್, ರೂಮ್ ನಂ. 25, ದೇವಗಿರಿ-ಹಾವೇರಿ ಈ ವಿಳಾಸದಲ್ಲಿ ಪಡೆದು, ಅಗತ್ಯ ದಾಖಲೆಗಳೊಂದಿಗೆ ಭರ್ತಿಮಾಡಿದ ಅರ್ಜಿಯನ್ನು ಮಾ.31ರೊಳಗಾಗಿ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.