ಜಿಲ್ಲೆ

ಸ್ಮಶಾನ ದಾರಿಗೆ ಜಮೀನು ನೀಡಿದವರಿಗೆ ಜಮೀನು ಕೊಡಿ; ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಸೂಚನೆ

ಕೇಶವಮೂರ್ತಿ ಬೇಲೂರಪ್ಪನವರ

ಹಾವೇರಿ: ತಾಲೂಕಿನ ಕಳ್ಳಿಹಾಳ ಗ್ರಾಮದಲ್ಲಿ ಪರಿಶಿಷ್ಟ ಜನಾಂಗದವರ ಸ್ಮಶಾನದ ದಾರಿಗಾಗಿ ಜಮೀನು ನೀಡುವ ಮಾಲೀಕರಿಗೆ ಪರ್ಯಾಯವಾಗಿ ಬೇರೆ ಸ್ಥಳದಲ್ಲಿ ಅಷ್ಟೇ ಪ್ರಮಾಣದ ಜಮೀನು ನೀಡುವುದಾಗಿ ಮನವೋಲಿಸಿ ಸ್ಮಶಾನಕ್ಕೆ ದಾರಿ ವ್ಯವಸ್ಥೆ ಮಾಡಿಕೊಡಿ ಎಂದು ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ಜನರ ಮೇಲಿನ ದೌರ್ಜನ್ಯ ನಿಯಂತ್ರಣ ಹಾಗೂ ಜಿಲ್ಲಾ ಜಾಗೃತಿ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಬಹಳ ದಿನದಿಂದ ಈ ಸಮಸ್ಯೆ ಇದೆ. ಆದಷ್ಟು ಬೇಗ ಸ್ಮಶಾನಕ್ಕೆ ದಾರಿ ಸಮಸ್ಯೆ ಬಗೆಹರಿಸುವಂತೆ ಸೂಚಿಸಿದರು.
ಹಾವೇರಿ ತಾಲೂಕಿನ ತೋಟದ ಯಲ್ಲಾಪುರ ಗ್ರಾಮದಲ್ಲಿ ತುಂಗಾ ಮೇಲ್ದಂಡೆ ಯೋಜನೆ ಕೆನಾಲ್ ನಿರ್ಮಾಣ ಮಾಡಲು ಅಗತ್ಯಕ್ಕಿಂತ ಹೆಚ್ಚಿನ ಜಮೀನು ಭೂಸ್ವಾಧೀನ ಮಾಡಿಕೊಳ್ಳಲಾಗಿದ್ದು, ಹೆಚ್ಚುವರಿ ಜಮೀನನ್ನು ರೈತರಿಗೆ ಮರಳಿ ನೀಡಬೇಕು ಎಂದು ಸಮಿತಿಯ ಅಧಿಕಾರೇತರ ನಾಮನಿರ್ದೇಶಿತ ಸದಸ್ಯ ರಮೇಶ ಆನವಟ್ಟಿ ಜಿಲ್ಲಾಧಿಕಾರಿಯವರ ಗಮನಕ್ಕೆ ತಂದರು. ಜಿಲ್ಲಾಧಿಕಾರಿಯವರು ಭೂಸ್ವಾಧೀನ ಜಮೀನು ವಿಷಯವಾಗಿ ನೀರಾವರಿ ನಿಗಮ ಕ್ರಮ ಕೈಗೊಳ್ಳಬೇಕಾಗುತ್ತದೆ. ಹಾಗಾಗಿ ಸರ್ವೇ ನಂಬರ್ ಸಹಿತ ಜಮೀನಿನ ವಿವರನ್ನು ನಿರಾವರಿ ನಿಗಮದ ಕಚೇರಿಗೆ ಪತ್ರ ಬರೆಯಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.
ರಾಣೆಬೆನ್ನೂರ ತಾಲೂಕು ಬೇಲೂರ ಗ್ರಾಮದ ನಿವಾಸಿಗೆ ಹಂಚಿಕೆ ಮಾಡಲಾದ ಜಾಗದಲ್ಲಿ ಬೇರೆಯವರು ಮನೆ ನಿರ್ಮಾಣಮಾಡಿದ ಪ್ರಕರಣ ನ್ಯಾಯಾಲದಲ್ಲಿ ಇತ್ಯರ್ಥವಾದ ಕಾರಣ, ಫಲಾನುಭವಿಗೆ ಬರುವ ದಿನಗಳಲ್ಲಿ ಗ್ರಾಮ ಪಂಚಾಯಿತಿಂದ ನಿವೇಶನ ಹಂಚಿಕೆ ಮಾಡುವಾಗ ಆದ್ಯತೆ ಮೇರೆಗೆ ನಿವೇಶನ ಹಂಚಿಕೆ ಮಾಡಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.
ಸಮಿತಿಯ ಅಧಿಕಾರೇತರ ನಾಮನಿರ್ದೇಶಿತ ಸದಸ್ಯ ಮುತ್ತುರಾಜ ಮಾದರ ಮಾತನಾಡಿ, ಸವಣೂರ ತಾಲೂಕು ಚಿಕ್ಕಮುಗದೂರ ಸರ್ಕಾರಿ ಶಾಲೆಯಲ್ಲಿ ಖಾಲಿ ಇರುವ ಮುಖ್ಯ ಅಡುಗೆ ಸಿಬ್ಬಂದಿ ಸ್ಥಾನಕ್ಕೆ ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ವರ್ಗದವರನ್ನು ನೇಮಿಸಿ. ಕೆಲವು ಶಾಲೆಗಳಲ್ಲಿ ಪರಿಶಿಷ್ಟ ವರ್ಗದವರನ್ನು ಮಾತ್ರ ನೇಮಿಸಲಾಗುತ್ತಿದೆ ಎಂದರು.
ಜಿಲ್ಲಾಧಿಕಾರಿ ಮಾತನಾಡಿ, ಸರ್ಕಾರದ ಮಾರ್ಗಸೂಚಿ ಪ್ರಕಾರ ಮೀಸಲಾತಿ ಅನ್ವಯ ಅಡುಗೆ ಸಿಬ್ಬಂದಿ ನೇಮಿಸಿಕೊಳ್ಳಬೇಕು ಹಾಗೂ ಖಾಲಿ ಇರುವ ಸ್ಥಳಗಳಲ್ಲಿ ಕೂಡಲೇ ಅಡುಗೆ ಸಿಬ್ಬಂದಿ ನೇಮಕ್ಕೆ ಕ್ರಮ ವಹಿಸುವಂತೆ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಪ್ರಶಾಂತ ವರಗಪ್ಪನವರ ಮಾತನಾಡಿ, ಜನವರಿ-2024ರಿಂದ ಸೆಪ್ಟೆಂಬರ್-2024ರವರೆಗೆ ವಿವಿಧ 40 ದೌರ್ಜನ್ಯ ಪ್ರಕರಣಗಳಲ್ಲಿ 33 ಲಕ್ಷ ರೂ. ಪರಿಹಾರ ನೀಡಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಡಾ.ರಂಗಸ್ವಾಮಿ, ಸವಣೂರ ಉಪವಿಭಾಗಾಧಿಕಾರಿ ಮಹ್ಮದ ಖೀಜರ್, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಮಮತಾ ಹೊಸಗೌಡ್ರ, ಡಿವೈ.ಎಸ್.ಪಿ. ಎಂ.ಎಸ್.ಪಾಟೀಲ, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಸುರೇಶ ಹುಗ್ಗಿ, ತಹಸೀಲ್ದಾರ್ ಶರಣಮ್ಮ, ಇತರರಿದ್ದರು.
ಸಮಿತಿಯ ಅಧಿಕಾರೇತರ ನಾಮನಿರ್ದೇಶಿತ ಸದಸ್ಯರಾದ ಶಿದ್ದಲಿಂಗಪ್ಪ ಹೊನ್ನಪ್ಪನವರ, ಹೊನ್ನಪ್ಪ ಯಲಿಗಾರ, ಫಕ್ಕೀರೇಶ ಕಾಳಿ, ಶ್ರೀಧರ ಆನವಟ್ಟಿ, ಎನ್.ಎಂ.ಗಾಳೆಮ್ಮನವರ, ಇತರರು ಉಪಸ್ಥಿತರಿದ್ದರು.