ಜಿಲ್ಲೆ

ಸವಿತಾ ಸಮಾಜದಿಂದ ಪಾದಯಾತ್ರೆ 11ರಿಂದ; ಶ್ರೀ ಸವಿತಾನಂದನಾಥ ಸ್ವಾಮೀಜಿ ಹೇಳಿಕೆ

ಹಾವೇರಿ: ಸವಿತಾ ಸಮಾಜದವರಿಗೆ ಮೀಸಲಾತಿ ಹೆಚ್ಚಳಕ್ಕೆ ಆಗ್ರಹಿಸಿ ಡಿ.11ರಂದು ಬೆಳಗ್ಗೆ 8.30ಕ್ಕೆ ಹುಬ್ಬಳ್ಳಿಯ ಅರವಿಂದ ನಗರದ ಶ್ರೀ ವೆಂಕಟೇಶ್ವರ ದೇವಸ್ಥಾನದಿಂದ ಬೆಳಗಾವಿವರೆಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಸವಿತಾ ಪೀಠದ ಪಂಚಗುರು ಶ್ರೀ ಸವಿತಾನಂದನಾಥ ಸ್ವಾಮೀಜಿ ಹೇಳಿದರು.
ಇಲ್ಲಿನ ಪ್ರವಾಸಿ ಮಂದಿರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸವಿತಾ ಸಮಾಜ ತೀರಾ ಹಿಂದುಳಿದ ಸಮಾಜವಾಗಿದೆ. ಸಮಾಜದ ಜನರು ಆರ್ಥಿಕ, ಶೈಕ್ಷಣಿಕ, ರಾಜಕೀಯವಾಗಿ ಹಿಂದುಳಿದಿದ್ದಾರೆ. ನಮಗೆ ರಾಜಕೀಯ ಪ್ರಾತಿನಿಧ್ಯಕ್ಕಿಂತ ಮುಖ್ಯವಾಗಿ ಶೈಕ್ಷಣಿಕ, ಆರ್ಥಿಕ ಪ್ರಾತಿನಿಧ್ಯಕ್ಕೆ ಒತ್ತುಕೊಡಬೇಕು ಎಂದರು.
ಸವಿತಾ ಸಮಾಜವು 2 ‘ಎ’ ಪ್ರವರ್ಗಕ್ಕೆ ಸೇರಿದೆ. ಇದರಲ್ಲಿ ಪ್ರಬಲ ಜಾತಿಯ ಜನರು ಸೇರಿದ್ದಾರೆ. ಅವರೊಂದಿಗೆ ಸವಿತಾ ಸಮಾಜ, ಮಡಿವಾಳ ಸಮಾಜ ಸೇರಿದಂತೆ ಅನೇಕ ಸಣ್ಣ ಸಮಾಜಗಳೂ ಇದರಲ್ಲಿವೆ. ಆದ್ದರಿಂದ ನಮ್ಮ ಸಮಾಜಗಳಿಗೆ ಸಿಗಬೇಕಾದ ಮೀಸಲಾತಿ ಸಿಗುತ್ತಿಲ್ಲ. ಹಾಗಾಗಿ, ನಮ್ಮ ಸಮಾಜವನ್ನು ಪ್ರವರ್ಗ 1ಕ್ಕೆ ಸೇರಿಸಿ ಅಥವಾ 2 ಬಿ, ಸಿ ಎಂದು ಮಾಡಿ ಇಲ್ಲವೇ 2 ಎನಲ್ಲೇ ಮೀಸಲಾತಿ ಪ್ರಮಾಣ ಹೆಚ್ಚಿಳ ಮಾಡಿ ಘೋಷಿಸಿ ಎಂದು ಒತ್ತಾಯಿಸಿದರು.
ಈ ಎಲ್ಲ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪಾದಯಾತ್ರೆ ಆರಂಭಿಸುತ್ತಿದ್ದೇವೆ. ಡಿ.14, 15ರಂದು ಬೆಳಗಾವಿಯಲ್ಲಿ ಪ್ರತಿಭಟನೆ ನಡೆಸಲಾಗುವುದು. ಇದರಲ್ಲಿ ಸಾವಿರಾರು ಸಮಾಜಬಾಂಧವರು ಭಾಗವಹಿಸುವರು. ಇದಕ್ಕೆ ಸರ್ಕಾರ ಬಗ್ಗದಿದ್ದಲ್ಲಿ, ಬೆಂಗಳೂರಿನಲ್ಲಿ ಹೋರಾಟ ರೂಪಿಸಲಾಗುವುದು ಎಂದರು.
ಸವಿತಾ ಸಮಾಜದ ಹಾವೇರಿ ತಾಲೂಕು ಅಧ್ಯಕ್ಷ ಈರಣ್ಣ ಆತ್ಮಕೋರ, ರಾಣೆಬೆನ್ನೂರಿನ ಗುರುರಾಜ ಕೆ., ಪರಶುರಾಮ ಭಜಂತ್ರಿ, ರಾಕೇಶ ಹುಬ್ಬಳ್ಳಿ, ಮೋಹನಕುಮಾರ, ಇತರರಿದ್ದರು.