ಜಿಲ್ಲೆ

ಸವಿತಾ ಸಮಾಜದವರು ಸಂಘಟಿತರಾಗಬೇಕು; ಶ್ರೀ ಸವಿತಾನಂದನಾಥ ಸ್ವಾಮೀಜಿ ಹೇಳಿಕೆ

ಹಾವೇರಿ: ಸವಿತಾ ಮಹರ್ಷಿ ಜಯಂತಿ ಆಚರಣೆಯಿಂದ ಸಮುದಾಯ ಜನರನ್ನು ಸಂಘಟಿಸಲು ಸಹಾಯವಾಗುತ್ತದೆ. ಕಡಿಮೆ ಜನಸಂಖ್ಯೆ ಹೊಂದಿರುವ ಸವಿತಾ ಸಮಾಜದವರು ಸಂಘಟಿತರಾಗಿ ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದು ಶ್ರೀ ಸವಿತಾನಂದನಾಥ ಸ್ವಾಮೀಜಿ ಕರೆ ನೀಡಿದರು.
ನಗರದ ಜಿಲ್ಲಾ ಗುರುಭವನದಲ್ಲಿ ಮಂಗಳವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ಸವಿತಾ ಸಮಾಜದ ಸಹಯೋಗದಲ್ಲಿ ಆಯೋಜಿಸಿದ್ದ ಶ್ರೀ ಸವಿತಾ ಮಹರ್ಷಿ ಜಯಂತಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ಸವಿತಾ ಮಹರ್ಷಿ ಕ್ಷೌರಿಕ ಸಮಾಜದ ಮೂಲ ಪುರುಷರು. ಆರ್ಥಿಕ, ಸಾಮಾಜಿಕ, ರಾಜಕೀಯ ಹಾಗೂ ಶೈಕ್ಷಣಿಕವಾಗಿ ಹಿಂದುಳಿದಿರುವ ಸವಿತಾ ಸಮಾಜ ತನ್ನದೇ ಆದ ಪರಂಪರೆ ಹೊಂದಿದೆ ಎಂದರು.
ರಾಷ್ಟ್ರಕೂಟ, ವಿಜಯನಗರ ಕಲ್ಯಾಣ ಚಾಲುಕ್ಯರ ಶಾಸನಗಳಲ್ಲಿ ಸವಿತಾ ಸಮಾಜದ ಬಗ್ಗೆ ಉಲ್ಲೇಖವಿದೆ. ಅನೇಕ ಶಾಸನಗಳಲ್ಲಿ ಸವಿತಾ ಸಮಾಜದ ಸಾಧನಗಳಾದ ಕತ್ತಿ, ಕನ್ನಡಿ ಹಾಗೂ ಕತ್ತರಿಗಳನ್ನು ಕೆತ್ತಲಾಗಿದೆ. ಎರಡು ಸಾವಿರ ವರ್ಷಗಳ ಸುದೀರ್ಘ ಇತಿಹಾಸ ಹೊಂದಿರುವ ಸವಿತಾ ಸಮಾಜ ತನ್ನ ಸೇವಾ ಕಾರ್ಯದಿಂದಲೇ ಹೆಸರುವಾಸಿಯಾಗಿ ಎಂದರು.
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಆರ್.ಚಿ.ಚಿನ್ನಿಕಟ್ಟಿ, ಸವಿತಾ ಮಹರ್ಷಿ ಸಂಘದ ಅಧ್ಯಕ್ಷ ಕೆ.ನಾಗರಾಜ, ಸಮಾಜದ ಮುಖಂಡರು, ಇತರರು ಉಪಸ್ಥಿತರಿದ್ದರು.