ಹಾವೇರಿ: ಸವಣೂರ ತಹಸೀಲ್ದಾರ್ ಕಚೇರಿಯ ಅಭಿಲೇಖಾಲಯದ ಕೊಠಡಿಗೆ 2000ನೇ ಇಸವಿಯಲ್ಲಿ ನೀರಿನ ಗಲಾಟೆ ಸಂದರ್ಭದಲ್ಲಿ ಬೆಂಕಿಗೆ ಆಹುತಿಯಾಗಿದ್ದ ದಾಖಲೆಗಳನ್ನು ಮರುಸೃಷ್ಟಿ ಮಾಡುವಂತೆ ಆಗ್ರಹಿಸಿ ಸವಣೂರ ತಹಸೀಲ್ದಾರ್ ಕಚೇರಿ ಎದುರು ಫೆ.26ರಿಂದ ಅನಿರ್ದಿಷ್ಟಾವಧಿ ಧರಣಿ ಹಮ್ಮಿಕೊಳ್ಳಲಾಗಿದೆ ಎಂದು ಅಖಂಡ ಕರ್ನಾಟಕ ರೈತ ಸಂಘದ ಜಿಲ್ಲಾಧ್ಯಕ್ಷ ಪ್ರಕಾಶ ಬಾರ್ಕಿ ತಿಳಿಸಿದರು.
ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ಶನಿವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 24 ವರ್ಷಗಳ ಹಿಂದೆ ನೀರಿನ ಗಲಾಟೆ ವಿಚಾರವಾಗಿ ಅಭಿಲೇಖಾಲಯದ ಕೊಠಡಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದರು. ಈ ವೇಳೆ ರೈತರು ಸೇರಿದಂತೆ ಸಾರ್ವಜನಿರಕ ಆಸ್ತಿ, ಜಮೀನು, ಮತ್ತಿತರ ದಾಖಲೆಗಳು ಸುಟ್ಟು ಹೋಗಿದ್ದವು. ಇದನ್ನೇ ನೆಪವಾಗಿಟ್ಟುಕೊಂಡು ಇಲ್ಲಿನ ತಹಸೀಲ್ದಾರರು ರೈತ ಪ್ರಕರಣಗಳ ವಿಲೇವಾರಿ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಇದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದರು.
ಸುಮಾರು 500 ವರ್ಷಗಳ ಹಿಂದಿನ ದಾಖಲೆಗಳು ದೊರೆಯುತ್ತಿಲ್ಲ. ರೈತರು ತಮ್ಮ ಆಸ್ತಿಗಳನ್ನು ಉಳಿಸಿಕೊಳ್ಳಲು ಪರದಾಡುವಂತಾಗಿದೆ. ಸರ್ಕಾರದ ಅನೇಕ ಷರತ್ತುಗಳಿಂದ ಸಮಸ್ಯೆ ಉದ್ಭವಿಸಿದೆ. ಈ ಸಮಸ್ಯೆ ಬಗೆಹರಿಸುವಂತೆ ಹಲವು ಬಾರಿ ಸರ್ಕಾರಕ್ಕೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಹಾಗಾಗಿ, ಧರಣಿ ಆರಂಭಿಸುತ್ತಿದ್ದು, ಸಮಸ್ಯೆ ಬಗೆಹರಿಸುವವರೆಗೆ ಪ್ರತಿಭಟನೆ ಕೈಬಿಡುವುದಿಲ್ಲ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಸವರಾಜ ದೇವಗಿರಿ, ರಮೇಶ ದೊಡ್ಡೂರು, ಗೂಡುಸಾಬ ಮೌಲಾಸಾಬನವರ, ಇತರರಿದ್ದರು.