ಹಾವೇರಿ: ಗ್ರಾಮೀಣ ಪ್ರದೇಶದಲ್ಲಿ ವಿದ್ಯಾಸಂಸ್ಥೆಗಳನ್ನು ಸ್ಥಾಪಿಸಿ ಬಡ, ಪ್ರತಿಭಾವಂತ ಮಕ್ಕಳಿಗೆ ಶಿಕ್ಷಣ ನೀಡುತ್ತಿರುವ ಮೇಕ್ ವೆಲ್‌ಫೇರ್ ಫೌಂಡೇಶನ್‌ನ ದಶಮಾನೋತ್ಸವ ಸಮಾರಂಭ ಸವಣೂರ ತಾಲೂಕು ಕಳಕಕೊಂಡದ ಎಸ್‌ವಿಪಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಫೆ.23ರಂದು ನಡೆಯಲಿದೆ ಎಂದು ಫೌಂಡೇಶನ್‌ನ ವ್ಯವಸ್ಥಾಪಕ ಕೆ.ಎಂ.ಮುಸ್ತಫಾ ನೀಮಿ ತಿಳಿಸಿದರು.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶೈಕ್ಷಣಿಕವಾಗಿ ಹಿಂದುಳಿದ ಉತ್ತರ ಕರ್ನಾಟಕದ ಗ್ರಾಮೀಣ ಪ್ರದೇಶಗಳಲ್ಲಿ ಮುಚ್ಚುವ ಹಂತದಲ್ಲಿದ್ದ ಶಿಕ್ಷಣ ಸಂಸ್ಥೆಗಳನ್ನು ಫೌಂಡೇಶನ್‌ನಿಂದ ಮರುಸ್ಥಾಪಿಸಲಾಗಿದೆ. ಜಾತಿ ಬೇಧ ಭಾವ ಇಲ್ಲದೇ ಸಂಸ್ಥೆಯಿಂದ ಬಡ ಮಕ್ಕಳಿಗೆ ಉಚಿತ ಊಟ, ವಸತಿ ವ್ಯವಸ್ಥೆ ಕೈಗೊಳ್ಳಲಾಗಿದೆ. ಸಮಾರಂಭದಲ್ಲಿ ಸೌದಿ ಅರೇಬಿಯಾದ ಅಲ್ ಮಝೈನ್ ಸಿಇಒ ಜನಾಬ್ ಬಜ್ಪೆ ಝಕರಿಯಾ ಅವರಿಗೆ ಅಕ್ಷರ ಅವಾರ್ಡ್ ನೀಡಿ ಗೌರವಿಸಲಾಗುವುದು ಎಂದರು.
ಫೆ.21, 22ರಂದು ಅಗಡಿ ಅಕ್ಕಿಮಠದ ಶ್ರೀ ಗುರುಲಿಂಗ ಸ್ವಾಮೀಜಿ ನೇತೃತ್ವದಲ್ಲಿ ಸವಣೂರ ತಾಲೂಕಿನ ವಿವಿಧೆಡೆ ಪಾದಯಾತ್ರೆ ನಡೆಸಿ, ಶಾಲೆಬಿಟ್ಟ ಮಕ್ಕಳನ್ನು ಶಾಲೆಗೆ ದಾಖಲಿಸಲಾಗುವುದು. ಫೆ.23ರ ಕಾರ್ಯಕ್ರಮದಲ್ಲಿ ವಿಧಾನಸಭೆ ಸಭಾಧ್ಯಕ್ಷ ಯು.ಟಿ.ಖಾದರ್ ಸಮಾರಂಭ ಉದ್ಘಾಟಿಸುವರು. ಶಾಸಕ ರುದ್ರಪ್ಪ ಲಮಾಣಿ ಅಧ್ಯಕ್ಷತೆ ವಹಿಸುವರು. ಅಗಡಿ ಮಠದ ಶ್ರೀ ಗುರುಲಿಂಗ ಸ್ವಾಮೀಜಿ, ಶಿಕ್ಷಣ ಸಚಿವ ಮಧು ಬಂಗಾರಪ್ಪ, ಶಾಸಕ ಯಾಸೀರ್‌ಖಾನ್ ಪಠಾಣ, ಹೆಸ್ಕಾ ಅಧ್ಯಕ್ಷ ಅಜೀಮ್‌ಪೀರ್ ಖಾದ್ರಿ, ಮತ್ತಿತರರು ಭಾಗವಹಿಸಲಿದ್ದಾರೆ ಎಂದರು.