ಹಾವೇರಿ: ಜಿಲ್ಲೆಯಲ್ಲಿ ಬರದ ಛಾಯೆ ಆವರಿಸಿದ್ದರಿಂದ ಪ್ರತಿ ವರ್ಷದಂತೆ ಈ ವರ್ಷ ಅದ್ಧೂರಿಯಾಗಿ ಮಕರ ಸಂಕ್ರಾಂತಿ ಆಚರಣೆ ಕಂಡು ಬಾರದಿದ್ದರೂ ಜಿಲ್ಲೆಯ ಜನತೆ ಸಾಂಪ್ರದಾಯಿಕವಾಗಿ ಹಬ್ಬ ಆಚರಿಸಿದರು. ಪರಸ್ಪರ ಎಳ್ಳು- ಬೆಲ್ಲ ಹಂಚಿ ಸಂಭ್ರಮಿಸಿದರು.
ಹಬ್ಬದ ಹಿನ್ನೆಲೆಯಲ್ಲಿ ಜಿಲ್ಲೆಯ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಮಾಡಲಾಗಿತ್ತು. ಮಳೆ ಕೊರತೆಯಿಂದ ನದಿಗಳು ಬತ್ತುತ್ತಿವೆ. ಹಾಗಾಗಿ, ಇದ್ದ ಅಲ್ಪ ಪ್ರಮಾಣದ ನದಿ ನೀರಿನಲ್ಲಿ ಕೆಲವರು ಪುಣ್ಯಸ್ನಾನ ಮಾಡಿ ದೇವಸ್ಥಾನಗಳಿಗೆ ತೆರಳಿ ಪ್ರಾರ್ಥನೆ ಸಲ್ಲಿಸಿದರು.
ತಾಲೂಕಿನ ಗುತ್ತಲ ಬಳಿಯ ನರಸೀಪುರ, ಚೌಡದಾನಪುರದ ತುಂಗಭದ್ರಾ ನದಿ ತೀರ, ಕರ್ಜಗಿ ಬಳಿಯ ವರದಾ ನದಿಯಲ್ಲಿ, ವರದಾ ಹಾಗೂ ಧರ್ಮಾ ನದಿ ಸಂಗಮದ ಕೂಡಲದಲ್ಲಿ, ಶಿಗ್ಗಾಂವಿ ತಾಲೂಕಿನ ದಕ್ಷಿಣಕಾಶಿ ಗಂಗಿಬಾವಿ, ಹಿರೇಕೆರೂರ ತಾಲೂಕಿನ ಮದಗ ಮಾಸೂರು ಕೆರೆಯಲ್ಲಿ, ಹಿರೇಕೆರೂರಿನ ದುರ್ಗಾದೇವಿ ಕೆರೆಯಲ್ಲಿ, ಬಾಡ ಕನಕನ ಅರಮನೆ, ಕಾಗಿನೆಲೆ, ಬ್ಯಾಡಗಿ ತಾಲೂಕು ಕದರಮಂಡಲಗಿ, ಕಾಗಿನೆಲೆ, ದೇವರಗುಡ್ಡ, ಶಿಶುನಹಾಳ ಶರೀಫಗಿರಿ, ಹಾವನೂರ ಗ್ರಾಮದೇವತೆ, ಕಾರಡಗಿ ವೀರಭದ್ರೇಶ್ವರ ದೇವಸ್ಥಾನ, ಗಳಗನಾಥ, ಹಾವೇರಿಯ ಪುರಸಿದ್ದೇಶ್ವರ ದೇಗುಲ ಸೇರಿದಂತೆ ವಿವಿಧ ಸ್ಥಳಗಳಿಗೆ ಜನರು ಕುಟುಂಬಸಮೇತರಾಗಿ ತೆರಳಿ ಮಕರ ಸಂಕ್ರಮಣ ಆಚರಿಸಿದರು.
ಸಜ್ಜಿ ರೊಟ್ಟಿ, ಪಲ್ಯ ಊಟ
ಜಿಲ್ಲೆಯ ವಿವಧ ಉದ್ಯಾನವನ, ನದಿ ತಟ, ದೇಗುಲದ ಆವರಣದಲ್ಲಿ ಜನರು ಕುಟುಂಬ ಸಮೇತರಾಗಿ ತೆರಳಿ ಭರ್ಜರಿ ಹಬ್ಬದೂಟ ಸವಿದರು. ಸಜ್ಜಿ ರೊಟ್ಟಿ, ಎಣ್ಣೆ ಬದನೆ ಕಾಯಿ, ಗುರೆಳ್ಳು ಚಟ್ನಿ, ಶೇಂಗಾ ಚಟ್ನಿ, ಶೇಂಗಾ ಹೋಳಿಗಿ, ಉಂಡಿ, ಕಡುಬು, ಎಳ್ಳ ಹೋಳಿಗಿ, ಪಲಾವ್, ಕಿಚಡಿ, ಸೇರಿದಂತೆ ವಿವಿಧ ಖಾದ್ಯಗಳನ್ನು ಸವಿದರು.