ಹಾವೇರಿ: ಕಬ್ಬಿನ ಬಾಕಿ ಹಣ ಬಿಡುಗಡೆ ಮಾಡುವಂತೆ ಆಗ್ರಹಿಸಿ ಕಬ್ಬು ಬೆಳೆಗಾರರು ತಾಲೂಕಿನ ಸಂಗೂರ ಗ್ರಾಮದ ಜಿಎಂ ಶುಗರ್ಸ್ ಫ್ಯಾಕ್ಟರಿ ಎದುರು ಸೋಮವಾರ ಮುಖ್ಯರಸ್ತೆ ಸಂಚಾರ ಬಂದ್ ಮಾಡಿ ಪ್ರತಿಭಟನೆ ನಡೆಸಿದರು.
ಪ್ರತಿಭಟನಾ ಸ್ಥಳಕ್ಕೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕ ರಮೇಶ ಎಂ.ಎಸ್. ಹಾಗೂ ಪೊಲೀಸ್ ಅಧಿಕಾರಿಗಳು ಆಗಮಿಸಿ ರೈತರ ಅಹವಾಲು ಆಲಿಸಿದರು. ಕಾರ್ಖಾನೆ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿ ಮಾತುಕಡೆ ನಡೆಸಿದರು.
ಸೋಮವಾರ ರೈತರ ಖಾತೆಗಳಿಗೆ ನಾಲ್ಕು ಕೋಟಿ ಜಮೆ ಮಾಡಿದ್ದೇವೆ. ಫೆ.28ರ ಒಳಗಾಗಿ ಎಲ್ಲ ರೈತರ ಬಾಕಿ ಹಣ ಜಮೆ ಮಾಡುತ್ತೇವೆ ಎಂದು ಕಾರ್ಖಾನೆಯ ಮಾಲೀಕರು ಭರವಸೆ ನೀಡಿದರು. ನಂತರ ರೈತರು ಪ್ರತಿಭಟನೆ ಹಿಂಪಡೆದರು.
ರಾಜ್ಯ ಕಬ್ಬು ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ಭುವನೇಶ್ವರ ಶಿಡ್ಲಾಪೂರ, ರಾಜಶೇಖರ ಬೆಟಗೇರಿ, ದಾನೇಶಪ್ಪ ಕೆಂಗೊಂಡ, ಮಂಜುನಾಥ ಅಸುಂಡಿ, ನಾಗಪ್ಪ ಕೆಮ್ಮಗೊಂಡ, ಮಲ್ಲಪ್ಪ ಬೈಲನಾಯಕರ, ಎಸ್.ವಿ ಸಂಗೂರಮಠ, ಬಸಣ್ಣ ಕಳಸೂರ, ಗುರುನಂಜಪ್ಪ ವರದಿ, ಗಿರೀಶ ಕೆರೆಗೊಂಡರ, ಮತ್ತಿತರ ರೈತರು ಭಾಗವಹಿಸಿದ್ದರು.
ಸಂಚಾರ ದಟ್ಟಣೆ
ಹಾವೇರಿ- ಹಾನಗಲ್ಲ ರಸ್ತೆಯಲ್ಲಿ ಸಂಚಾರ ಬಂದ್ ಮಾಡಿ ಸುಮಾರು ಒಂದು ಗಂಟೆ ಪ್ರತಿಭಟನೆ ನಡೆಸಿದ್ದರಿಂದ ಕಿಮೀಗಟ್ಟಲೇ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಟ್ರಾಫಿಕ್ ಜಾಮ್ ಉಂಟಾಗಿತ್ತು.