ರಾಣೆಬೆನ್ನೂರ: ಯೋಗ ಪುರಾತನ ಕಾಲದಿಂದ ರೂಢಿಸಿಕೊಂಡು ಬಂದಿರುವ ವಿದ್ಯೆ. ಇದು ಭಾರತದ ಪರಂಪರೆಯಾಗಿದೆ ಹಾಗೂ ತನ್ನದೇ ಆದ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ ಎಂದು ಹನುಮನಮಟ್ಟಿ ಕೃಷಿ ಮಹಾವಿದ್ಯಾಲಯದ ಡೀನ್(ಕೃಷಿ) ಮತ್ತು ಆವರಣ ಮುಖ್ಯಸ್ಥ ಡಾ. ಜೆ.ಎಸ್. ಹಿಳ್ಳಿ ಹೇಳಿದರು.
ಹನುಮನಮಟ್ಟಿ ಕೃಷಿ ಮಹಾವಿದ್ಯಾಲಯದ ಆವರಣದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಯೋಗಾಭ್ಯಾಸದಿಂದ ದೇಹ ಮತ್ತು ಮನಸ್ಸಿನ ಆರೋಗ್ಯ ಸ್ವಸ್ಥವಾಗಿರುತ್ತದೆ. ಕಾಯಿಲೆಗಳನ್ನು ತಡೆಗಟ್ಟಲು ಯೋಗವು ಅತ್ಯಂತ ಸಹಕಾರಿಯಾಗಿದೆ ಎಂದರು.
ಯೋಗ ಶಿಕ್ಷಕ ಯಶವಂತ ಕರಿಗೌಡರ ವಿವಿಧ ಆಸನಗಳ ಪ್ರಾಮುಖ್ಯತೆಯನ್ನು ತಿಳಿಸಿ, ಯೋಗಾಭ್ಯಾಸ ನಡೆಸಿಕೊಟ್ಟರು. ಮಹಾದೇವಿ ಹೊನಕಡವಿ, ಇತರರಿದ್ದರು.