ಹಾವೇರಿ: ಶ್ರೀ ರಾಘವೇಂದ್ರ ಸ್ವಾಮಿಯವರ 354ನೇ ಆರಾಧನಾ ಮಹೋತ್ಸವದ ನಿಮಿತ್ತ ಮಂಗಳವಾರ ನಗರದ ಪ್ರಮುಖ ಬೀದಿಗಳಲ್ಲಿ ಶ್ರೀ ರಾಘವೇಂದ್ರಸ್ವಾಮಿಯವರ ರಥೋತ್ಸವ ಸಕಲ ವಾದ್ಯ ವೈಭವಗಳೊಂದಿಗೆ ಜರುಗಿತು.
ನಗರದ ಶ್ರೀ ರಾಘವೇಂದ್ರಸ್ವಾಮಿಯವರ ಮಠದಲ್ಲಿ ಮೂರು ದಿನಗಳಿಂದ ಪೂರ್ವಾರಾಧನೆ, ಮಧ್ಯಾರಾಧನೆ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಉತ್ತರಾಧನೆ ನಿರ್ಮಾಲ್ಯ ವಿಸರ್ಜನೆ ಅಂಗವಾಗಿ ಮಂಗಳವಾರ ಬೆಳಗ್ಗೆಯಿಂದ ಕಾಲ ಪಂಚಾಮೃತ ಅಭಿಷೇಕ, ಅಷ್ಟೋತ್ತರ ಗುರುಸ್ತುತಿ ಪಾರಾಯಣ, ರಾಘವೇಂದ್ರಸ್ವಾಮಿಯವರಿಗೆ ಅಲಂಕಾರ ಹಾಗೂ ಹೋಮ ಹವನಗಳು ನಡೆದವು. ಬಳಿಕ ಹಸ್ತೋದಕ ನೈವೇದ್ಯ ಸಮರ್ಪಿಸಲಾಯಿತು.
ನಂತರ ಮಠದಿಂದ ವಾದ್ಯ ವೈಭವಗಳೊಂದಿಗೆ ಹಾಗೂ ಭಾಜಾಭಜಂತ್ರಿಯೊಂದಿಗೆ ಆರಂಭವಾದ ಶ್ರೀಗುರು ರಾಘವೇಂದ್ರಸ್ವಾಮಿಯವರ ಮಹಾರಥೋತ್ಸವ ನಗರದ ಅಗ್ರಹಾರ ರಸ್ತೆ, ಎಂ.ಜಿ ರಸ್ತೆ, ನಗರಸಭೆ ಮುಂಭಾಗ, ಎಂ.ಎಂ ವೃತ್ತ, ಪಿ.ಬಿ ರಸ್ತೆ ಮೂಲಕ ತೇರುಬೀದಿ ಆಂಜನೇಯಸ್ವಾಮಿ ದೇವಸ್ಥಾನ ತಲುಪಿತು. ಅಲ್ಲಿ ಪೂಜಾ ವಿವಿಧಾನಗಳು, ಮಂಗಳಾರತಿ ನಡೆದು ನಂತರ ರಾಮದೇವ ಗುಡಿ ಮುಖಾಂತರ ಶ್ರೀಮಠಕ್ಕೆ ಮರಳಿತು. ನಂತರ ಅನ್ನಪೂರ್ಣೇಶ್ವರಿ ಪೂಜೆ ನೆರವೇರಿಸಿ, ಮಹಾಪ್ರಸಾದ ವಿತರಿಸಲಾಯಿತು. ಸಂಜೆವೇಳೆ ಸವತೋಭದ್ರ ಮಂಡಲ ಪೂಜೆ, ಬೆಳ್ಳಿ(ರಜತ) ರಥೋತ್ಸವ, ಅಷ್ಠಾವಧಾನ ಮಹಾಮಂಗಳಾರತಿ ನೆರವೇರಿತು.
ವೈದ್ಯ ಫ್ಯಾಮಿಲಿ ಟ್ರಸ್ಟ್ ಧರ್ಮದರ್ಶಿ ಹರಿಕೃಷ್ಣ ಭಟ್, ಬ್ರಾಹ್ಮಣ ಸಮಾಜದ ಪ್ರಮುಖರು, ರಾಯರ ಭಕ್ತರು ಪಾಲ್ಗೊಂಡಿದ್ದರು.