ಜಿಲ್ಲೆ

ರೇಶನ್ ಕಾರ್ಡ್ ತಿದ್ದುಪಡಿಗೆ ಸರ್ವರ್ ಅಡ್ಡಿ; ದಿನಾಂಕ ಮುಂದೂಡಲು ಜನರ ಆಗ್ರಹ

ಕೇಶವಮೂರ್ತಿ ಬೇಲೂರಪ್ಪನವರ

ಹಾವೇರಿ: ಸರ್ವರ್ ಸಮಸ್ಯೆಯಿಂದಾಗಿ ಪಡಿತರ ಚೀಟಿಯಲ್ಲಿ ಹೊಸ ಹೆಸರು ಸೇರ್ಪಡೆ, ವಿಳಾಸ ಬದಲಾವಣೆ ಸೇರಿದಂತೆ ಇತರ ತಿದ್ದುಪಡಿ ಮಾಡಲು ಸಾಧ್ಯವಾಗದೇ ಜನ ಪರದಾಡುವಂತಾಗಿದೆ.
ಚುನಾವಣೆ ಮತ್ತಿತರ ಕಾರಣಗಳಿಂದ ರೇಶನ್ ಕಾರ್ಡ್ ತಿದ್ದುಪಡಿಗೆ ಅವಕಾಶ ಸಿಕ್ಕಿರಲಿಲ್ಲ. ಇದೀಗ ಸರ್ವರ್ ಕಾಟದಿಂದಾಗಿ ಸಿಕ್ಕ ಅವಕಾಶ ಸದ್ಬಳಕೆಯಾಗಲಿಲ್ಲ. ಜು.31ರವರೆಗೆ ಸರ್ಕಾರ ತಿದ್ದುಪಡಿಗೆ ಅವಕಾಶ ನೀಡಿದೆ. ಆದರೆ, ಸರ್ವರ್ ಬಿಸಿ ಇರುವ ಕಾರಣ ಕರ್ನಾಟಕ ಒನ್, ತಹಸೀಲ್ದಾರ್ ಕಚೇರಿ ಸೇರಿದಂತೆ ಒಂದು ಕೇಂದ್ರಲ್ಲಿ ಮೂರು, ನಾಲ್ಕು ಕಾರ್ಡ್‌ಗಳ ತಿದ್ದುಪಡಿ ಮಾತ್ರ ಆಗುತ್ತಿವೆ.
ಸರತಿ ಸಾಲಿನಲ್ಲಿ ನಿಂತು ದಿನವಿಡೀ ಕಾದರೂ ತಿದ್ದುಪಡಿ ಮಾಡಲಾಗದೇ ವಾಪಸ್ ತೆರಳುತ್ತಿದ್ದಾರೆ. ಹಾವೇರಿ ನಗರದ ಗುರುಭವನ ಬಳಿ ಇರುವ ಕರ್ನಾಟಕ ಒನ್ ಕೇಂದ್ರದಲ್ಲಿ ಮಂಗಳವಾರ ಸರ್ವರ್ ಬಿಸಿ ಕಾರಣ ಕೇವಲ ಎರಡು ರೇಶನ್ ಕಾರ್ಡ್ ತಿದ್ದುಪಡಿ ಮಾಡಲಾಗಿದೆ ಎಂದು ಕೇಂದ್ರದ ಸಿಬ್ಬಂದಿ ಕುಸುಮಾ ಕೋರಿಶೆಟ್ಟರ್ ತಿಳಿಸಿದ್ದಾರೆ.
ದಿನಾಂಕ ಮುಂದೂಡುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ. ದಿನಾಂಕ ಮುಂದೂಡುವ ಸಾಧ್ಯತೆ ಇದೆ ಎಂದು ತಹಸೀಲ್ದಾರ್ ಶಂಕರ ಜಿ.ಎಸ್. ತಿಳಿಸಿದ್ದಾರೆ.