ಜಿಲ್ಲೆ

ಜೋಳಿಗೆ ಹಿಡಿದು ನಾಡಪ್ರೇಮ ಮೆರೆದ ಬಾಳಾಚಾರ್ಯ; ಕಸಾಪ ಅಧ್ಯಕ್ಷ ಡಾ.ಮಹೇಶ ಜೋಶಿ

ಹಾವೇರಿ: ವೈಯಕ್ತಿಕ ಹಿತಾಸಕ್ತಿ ಬದಿಗೊತ್ತಿ ಕನ್ನಡ ಭಾಷೆಯ ಮೇಲಿನ ಅಭಿಮಾನದಿಂದ ಜೋಳಿಗೆ ಹಿಡಿದು ನಾಡಪ್ರೇಮ ಮೆರೆದ ಹೆಗ್ಗಳಿಕೆ ಸಕ್ಕರಿ ಬಾಳಾಚಾರ್ಯ ಅವರಿಗೆ ಸಲ್ಲುತ್ತದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ.ಮಹೇಶ ಜೋಶಿ ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದ ಗೆಳೆಯರ ಬಳಗ ಶಾಲೆಯ ಆವರಣದಲ್ಲಿ ಗೆಳೆಯರ ಬಳಗ, ಸಾಹಿತಿ ಕಲಾವಿದರ ಬಳಗ ಮತ್ತು ಧಾರವಾಡದ ಸಕ್ಕರಿ ಬಾಳಾಚಾರ್ಯ ಶಾಂತಕವಿ ಕವಿ ಟ್ರಸ್ಟ್ ವತಿಯಿಂದ ಇತ್ತೀಚೆಗೆ ಆಯೋಜಿಸಿದ್ದ ಆಧುನಿಕ ಕನ್ನಡ ರಂಗಭೂಮಿ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಬಹುಮುಖ ಪ್ರತಿಭೆಯ ಸಕ್ಕರಿ ಬಾಳಾಚಾರ್ಯರು ಮರಾಠಿ ಭಾಷೆಯ ಪ್ರಾಬಲ್ಯದ ಮಧ್ಯೆಯೂ ಕನ್ನಡ ಭಾಷೆಯ ಮೇಲಿನ ಅಭಿಮಾನವನ್ನು ತಮ್ಮ ಕಾವ್ಯ, ನಾಟಕಗಳ ಮೂಲಕ ಪ್ರದರ್ಶಿಸಿರುವುದು ಶ್ಲಾಘನೀಯ. ಶಿಕ್ಷಕ ವೃತ್ತಿಯ ದಿನಗಳಲ್ಲಿ ತಾವು ಸೇವೆ ಸಲ್ಲಿಸಿದ ಪ್ರದೇಶಗಳಲ್ಲಿ ಕನ್ನಡದ ಅಸ್ಮಿತೆ ಕುರಿತು ಜನರನ್ನು ಜಾಗೃತಗೊಳಿಸುತ್ತಿದ್ದರು ಎಂಬುದು ನಮಗೆ ಸ್ಪೂರ್ತಿ. ಅವರನ್ನು ಸದಾ ಸ್ಮರಿಸುವ ನಿಟ್ಟಿನಲ್ಲಿ ನಾವು ಸಾಗಬೇಕಿದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸಾಹಿತಿ ಸತೀಶ ಕುಲಕರ್ಣಿ, ಶಾಂತಕವಿ ಕಾವ್ಯನಾಮದಡಿ ಸಕ್ಕರಿ ಬಾಳಾಚಾರ್ಯರು ಕನ್ನಡ ಮತ್ತು ಕನ್ನಡ ನಾಡಿಗೆ ನೀಡಿದ ಕೊಡುಗೆ ಅನನ್ಯ. ಅವರ ನಾಟಕಗಳನ್ನು ರಂಗ ಪ್ರಯೋಗಕ್ಕೆ ತರಬೇಕೆಂಬುದು ಶೇಷಗಿರಿ ಕಲಾ ತಂಡದ ಅಭಿಲಾಷೆಯಾಗಿತ್ತು. ತಮ್ಮ ಅಭಿಲಾಷೆ ಈಡೇರಿಸಿಕೊಂಡು ನಾಡಿನಲ್ಲೆಡೆ ಹೆಸರು ಮಾಡಿರುವುದು ನಮಗೆ ಖುಷಿ ತಂದಿದೆ ಎಂದರು.
ರಂಗಕರ್ಮಿ ಪ್ರಕಾಶ ಗರುಡ ಮಾತನಾಡಿ, ಮಡಿವಂತಿಕೆ ಮನೋಭಾವದಿಂದ ಹೊರಬಂದ ಸಕ್ಕರಿ ಬಾಳಾಚಾರ್ಯರು ನಾಟಕ, ಕಾದಂಬರಿ, ಚುಟುಕುಗಳು, ಕಥೆ, ಮಕ್ಕಳ ನಾಟಕ ರಚಿಸಿದ್ದಾರೆ. ಧರ್ಮಾತೀತ ಪ್ರತಿಭೆಯ ಅವರ ನಾಟಕಗಳಿಗೆ ರಂಗಭೂಮಿ ಕ್ರಿಯಾಶೀಲವಾಗಬೇಕು ಎಂದರು.
ಉಪನ್ಯಾಸಕಿ ಡಾ.ಆಶಾ ಬಂಕಾಪುರ, ರಂಗಕರ್ಮಿ ಪ್ರಭು ಗುರಪ್ಪನವರ, ಸಿದ್ದಪ್ಪ ರೊಟ್ಟಿ ಮಾತನಾಡಿದರು. ಕೆ.ಆರ್.ಹಿರೇಮಠ, ರೇಣುಕಾ ಗುಡಿಮನಿ, ನರಸಿಂಹ ಕೋಮಾರ, ವಿಶ್ವನಾಥ ಹಿರೇಮಠ ರಂಗಗೀತೆ ಪ್ರಸ್ತುಪಡಿಸಿದರು.
ಗೆಳೆಯರ ಬಳಗದ ಅಧ್ಯಕ್ಷ ಡಾ.ಸುದೀಪ ಪಂಡಿತ ಅಧ್ಯಕ್ಷತೆ ವಹಿಸಿದ್ದರು. ವಿ.ಎಂ.ಪತ್ರಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಲಿಂಗಯ್ಯ ಹಿರೇಮಠ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವೈ.ಬಿ.ಆಲದಕಟ್ಟಿ, ಸಿದ್ಧಮತಿ ನೆಲವಿಗಿ, ಬಾಬುರಾವ್ ಸಕ್ಕರಿ, ಹನುಮೇಶ ಸಕ್ಕರಿ, ಭಾರತಿ ಯಾವಗಲ್ಲ, ಮುರುಗೇಶ ಹುಂಬಿ, ಚಂದ್ರಶೇಖರ ಮಾಳಗಿ, ಈರಣ್ಣ ಬೆಳವಡಿ ಉಪಸ್ಥಿತರಿದ್ದರು.
ಪೃಥ್ವಿರಾಜ ಬೆಟಗೇರಿ ನಿರೂಪಿಸಿದರು. ಎಸ್.ಆರ್.ಹಿರೇಮಠ ಸ್ವಾಗತಿಸಿದರು. ಸಿದ್ದೇಶ್ವರ ಹುಣಸಿಕಟ್ಟಿಮಠ ವಂದಿಸಿದರು.