ಹಾವೇರಿ: ಪಕ್ಕದ ವಿಜಯನಗರ ಜಿಲ್ಲೆಯ ಮೈಲಾರ ಗ್ರಾಮದ ಶ್ರೀ ಮೈಲಾರಲಿಂಗೇಶ್ವರ ಜಾತ್ರೆಗೆ ಹೋಗಿ ವಾಪಸ್ ಬರುತ್ತಿದ್ದ ಬೈಕ್ ಎತ್ತಿನಗಾಡಿಗೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಯುವಕರು ಸ್ಥಳದಲ್ಲೇ ಮೃತಪಟ್ಟ ಘಟನೆ ಮಂಗಳವಾರ ನಸುಕಿನ ಜಾವ ಸಂಭವಿಸಿದೆ.
ಕನವಳ್ಳಿ ಗ್ರಾಮದ ಶಶಿಕುಮಾರ ಹುಲಿಗೆಪ್ಪ ಉಪ್ಪಾರ (25), ವಿಜಯಪುರ ಚಡಚಣ ತಾಲೂಕು ಗೋಡಿಹಾಳ ಮೂಲದ ಆಕಾಶ ಮಲಕಪ್ಪ ಬಿರಾದಾರ (20) ಹಾಗೂ ಬೀದರ್ ಔರಾದ್ ತಾಲೂಕು ಜೋಜನ್ ಗ್ರಾಮದ ದರ್ಶನ್ ಪ್ರಭು (21) ಮೃತಪಟ್ಟ ಯುವಕರು. ಆಕಾಶ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದ. ಆಕಾಶ ಮತ್ತು ದರ್ಶನ್ ರಾಣೆಬೆನ್ನೂರ ತಾಲೂಕು ಹನುಮನಮಟ್ಟಿಯ ಕೃಷಿ ವಿಶ್ವವಿದ್ಯಾಲಯದ ಕಾಲೇಜ್‌ನಲ್ಲಿ ಬಿಎಸ್‌ಸಿ ಅಗ್ರಿಕಲ್ಚರ್ ದ್ವಿತೀಯ ವರ್ಷದಲ್ಲಿ ಓದುತ್ತಿದ್ದರು.
ರಾಣೆಬೆನ್ನೂರ- ಗುತ್ತಲ ಮಾರ್ಗವಾಗಿ ಮೂವರು ಯುವಕರು ಪಲ್ಸರ್ 150 ಬೈಕ್‌ನಲ್ಲಿ ಮೈಲಾರ ಜಾತ್ರೆಗೆ ಹೋಗಿ, ವಾಪಸ್ ಬರುತ್ತಿದ್ದರು. ಗುಡಗೂರ ಕ್ರಾಸ್ ಬಳಿ ಎದುರಿಗೆ ಬರುತ್ತಿದ್ದ ಎತ್ತಿನ ಬಂಡಿಗೆ ಬೈಕ್ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಮೂವರು ಯುವಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಸ್ಥಳಕ್ಕೆ ರಾಣೆಬೆನ್ನೂರ ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.
ರಿಫ್ಲೆಕ್ಟರ್ ಅಳವಡಿಕೆಗೆ ಮನವಿ
ಮೈಲಾರ, ಕುರವತ್ತಿ, ದೇವರಗುಡ್ಡ ಜಾತ್ರೆಗಳು ನಡೆಯುತ್ತಿರುವ ಸಂದರ್ಭದಲ್ಲಿ ಸಾವಿರಾರು ಎತ್ತಿನಗಾಡಿ, ಟ್ರಾೃಕ್ಟರ್, ಇತರ ವಾಹನಗಳು ಈ ಮಾರ್ಗದಲ್ಲಿ ಹಗಲು- ರಾತ್ರಿ ಓಡಾಡುತ್ತಿವೆ. ಎತ್ತಿನಗಾಡಿಗಳು ರಾತ್ರಿ ವೇಳೆ ವಾಹನ ಸವಾರರಿಗೆ ಕಾಣಿಸುವುದಿಲ್ಲ. ಹೀಗಾಗಿ ಅಪಘಾತ ಸಂಭವಿಸುವ ಸಾಧ್ಯತೆ ಹೆಚ್ಚಾಗಿರುತ್ತದೆ. ಹಾಗಾಗಿ, ರಿಫ್ಲೆಕ್ಟರ್ ಅಳವಡಿಸುವ ಕುರಿತು ಸೂಕ್ತ ಕ್ರಮ ಜರುಗಿಸುವಂತೆ ಜಿಪಂ ಸಿಇಒ ಹಾಗೂ ಆರ್‌ಟಿಒಗೆ ಎಸ್‌ಪಿ ಅಂಶುಕುಮಾರ ಪತ್ರ ಬರೆದಿದ್ದಾರೆ.