ಜಿಲ್ಲೆ

ನಾಡಿನ ಸಂಸ್ಕೃತಿಯ ಗತವೈಭವ ಮರುಕಳಿಸಲಿ; ದಾರಿ ತಪ್ಪಿಸುವವರ ಕುರಿತು ಜನಜಾಗೃತಿ ಆಗಬೇಕು; ಕರ್ನಾಟಕ ವೈಭವ ಸಮಾರೋಪದಲ್ಲಿ ಎಚ್‌ಡಿಕೆ ಸಲಹೆ

ಹಾವೇರಿ/ ರಾಣೆಬೆನ್ನೂರ: ಭಾರತ ಇಂದು ವಿಶ್ವಕ್ಕೆ ಪೈಪೋಟಿ ನೀಡುತ್ತಿರುವ ಈ ಸಂದರ್ಭದಲ್ಲಿ ನಮ್ಮ ಮೂಲ ಸಂಸ್ಕೃತಿಯನ್ನು ಮರೆಯುತ್ತಿದ್ದೇವೆ ಎಂಬ ಆತಂಕ ಮೂಡುತ್ತಿದೆ. ನಮ್ಮ ನಾಡು, ನುಡಿ, ಪರಂಪರೆಯ ಬಗ್ಗೆ ಚರ್ಚೆ, ಸಂವಾದದ ಮೂಲಕ ನಮ್ಮ ಸಂಸ್ಕೃತಿಯ ವೈಭವವನ್ನು ಮತ್ತೆ ಮರುಕಳಿಸುವ ಕೆಲಸ ಆಗಬೇಕಿದೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಸಲಹೆ ನೀಡಿದರು.

ಪರಿವರ್ತನ ಸಂಸ್ಥೆ ವತಿಯಿಂದ ನಗರದ ಕೆಎಲ್‌ಇ ರಾಜ-ರಾಜೇಶ್ವರಿ ಮಹಾವಿದ್ಯಾಲಯದ ಆವರಣದಲ್ಲಿ ಆಯೋಜಿಸಿದ್ದ ‘ಕರ್ನಾಟಕ ವೈಭವ’ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಅತ್ಯಂತ ಶ್ರೀಮಂತವಾದ ಇತಿಹಾಸ ಹೊಂದಿರುವ ರಾಜ್ಯದಲ್ಲಿ ಪ್ರಸಕ್ತವಾಗಿ ನಡೆದಿರುವ ವಿದ್ಯಮಾನಗಳನ್ನು ನೋಡಿದರೆ ಬೇಸರ ಉಂಟಾಗುತ್ತದೆ. ದೇಶದಲ್ಲಿ ಇಂದು ಸಂವಿಧಾನದ ಬಗ್ಗೆ ದೊಡ್ಡ ಚರ್ಚೆಗಳು ನಡೆದಿವೆ. ‘ಸಂವಿಧಾನವನ್ನು ಪೂರ್ತಿಯಾಗಿ ಬದಲಾವಣೆ ಮಾಡಲು ಹೊರಟಿದ್ದಾರೆ’ ಎಂದು ಒಂದು ಪಕ್ಷದ ಮೇಲೆ ಆರೋಪಿಸಿದರು. ಇಂತಹ ಅಪಪ್ರಚಾರಕ್ಕೆ ಈಗಾಗಲೇ ಉತ್ತರ ಸಿಕ್ಕಿದೆ. ಸಮಾಜದ ದಾರಿ ತಪ್ಪಿಸುವ ಒಂದು ವರ್ಗದ ಕುರಿತು ಎಚ್ಚರಿಕೆ ಮೂಡಿಸುವ ಕಾರ್ಯ ಆಗಬೇಕು ಎಂದರು.

ಸಂಘರ್ಷದ ಮುಖಾಂತರ ಯಾವುದೇ ಸಾಧನೆ ಮಾಡಲು ಸಾಧ್ಯವಿಲ್ಲ. ಕೇಂದ್ರ ಸರ್ಕಾರದ ಜತೆಗೆ ಸುಮಧುರವಾದ ಬಾಂಧವ್ಯ ಹೊಂದಿದಾಗ ಕೆಲಸ ಸುಲಭವಾಗುತ್ತವೆ ಎಂದು ರಾಜ್ಯ ಸರ್ಕಾರಕ್ಕೆ ಪರೋಕ್ಷವಾಗಿ ತಿಳಿಸಿದರು.

ಸಂಸದ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ವೈಚಾರಿಕತೆ ಕಡಿಮೆ ಆಗುತ್ತಿರುವ ಸಂದರ್ಭದಲ್ಲಿ ವೈಚಾರಿಕತೆಯ ಕುರಿತು ಕಾರ್ಯಕ್ರಮ ಆಯೋಜಿಸಿರುವ ಆಯೋಜಕರ ಕಾರ್ಯ ಶ್ಲಾಘನೀಯ. ಕರ್ನಾಟಕದಂಥ ರಾಜ್ಯ ಮತ್ತೊಂದು ರಾಜ್ಯ ಎಲ್ಲಿಯೂ ಇಲ್ಲ. ಮೂರು ಸಾವಿರ ವರ್ಷಗಳಿಂದ ಜೀವಂತವಾಗಿರುವ ಭಾಷೆ ನಮ್ಮದು. ಪಶ್ಚಿಮದಲ್ಲಿ ಹುಟ್ಟಿದ ನದಿಗಳು ಪೂರ್ವಕ್ಕೆ ಹರಿಯುತ್ತವೆ. ನಾಡಿನ ಉದ್ದಕ್ಕೂ ಹರಿದು, ಜನರಿಗೆ, ರೈತರಿಗೆ ಅಮೃತ ಕೊಟ್ಟು ಪಶ್ಚಿಮಕ್ಕೆ ಹೋಗುತ್ತವೆ. ಅದ್ಭುತವಾದ ದಿವ್ಯ ಕಾಡು ನಮ್ಮಲ್ಲಿದೆ. ಬಯಲುಸೀಮೆ ಇದೆ. ಅತಿ ಹೆಚ್ಚು ಹಸಿರು ಸಂಪತ್ತು ನಮ್ಮಲ್ಲಿದೆ. ಎಲ್ಲ ಬಗೆಯ ಬೆಳೆಗಳು, ಗಿಡಗಳು ಇಲ್ಲಿ ಬೆಳೆಯುತ್ತವೆ. ಇದು ನಮ್ಮ ವೈಭವ ಎಂದರು.

ಅತಿ ಹೆಚ್ಚು ಸಾಲ ಮಾಡಿರುವ ರಾಜ್ಯ ಕರ್ನಾಟಕ ಆಗಿರುವುದು ನೋವು ಕೊಡುತ್ತಿದೆ. ದೇಶಕ್ಕೆ ದೂರದೃಷ್ಟಿಯ ನಾಯಕತ್ವ ಇದೆ. ಅಂತಹ ನಾಯಕತ್ವ ರಾಜ್ಯಕ್ಕೂ ಇದ್ದರೆ ನಮ್ಮ ರಾಜ್ಯದ ವೈಭವ ಮರುಕಳಿಸುತ್ತದೆ. ಅಂತಹ ವೈಭವ ಕರ್ನಾಟಕದಲ್ಲಿ ಮತ್ತೆ ಆಗಲಿ ಎಂದು ಮಾರ್ಮಿಕವಾಗಿ ನುಡಿದರು.

ಮಾತೆ ಮಂಜಮ್ಮ ಜೋಗತಿ ಮಾತನಾಡಿ, ನಮ್ಮ ಮಕ್ಕಳಿಗೆ ಒಳ್ಳೆಯ ಸಂಪ್ರದಾಯ, ಶಿಕ್ಷಣದ ಭದ್ರ ಬುನಾದಿ ಹಾಕಿದರೆ ನಿತ್ಯವೂ ವೈಚಾರಿಕ ಹಬ್ಬವಾಗುತ್ತದೆ. ಸಂವಿಧಾನ ರಚನೆಯಾಗಿದ್ದಕ್ಕೆ ಮಹಿಳೆಯರಿಗೆ ಸಮಾನವಾದ ಸ್ಥಾನಮಾನ ಸಿಗುತ್ತದೆ. ನನ್ನಂಥ ತೃತೀಯ ಲಿಂಗಿಗೆ ಪದ್ಮಶ್ರೀ ಸಿಕ್ಕಿದೆ ಎಂದರು.

ಹರಿಹರ ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ವಚನಾನಂದ ಸ್ವಾಮೀಜಿ, ಗಾಯಕಿ ಸಂಗೀತಾ ಕಟ್ಟಿ, ಕೆಎಕ್‌ಇ ಸಂಸ್ಥೆಯ ಸ್ಥಾನಿಕ ಕಾರ್ಯಾಧ್ಯಕ್ಷ ವಿ.ಪಿ.ಲಿಂಗನಗೌಡರ, ಕೆ.ಎನ್.ಪಾಟೀಲ, ಇತರರು ಉಪಸ್ಥಿತರಿದ್ದರು.

ಕನ್ನಡವೂ ರಾಷ್ಟ್ರಭಾಷೆಯೇ

ಆರ್‌ಎಸ್‌ಎಸ್‌ನವರಿಗೆ ಸಂಸ್ಕೃತ, ಹಿಂದಿ ರಾಷ್ಟ್ರಭಾಷೆ ಎಂಬುದಿಲ್ಲ. ನನ್ನ ಮಾತೃಭಾಷೆ ಕನ್ನಡವೂ ರಾಷ್ಟ್ರಭಾಷೆಯೇ. ದೇಶದಲ್ಲಿರುವ ಪ್ರತಿಯೊಂದು ಭಾಷೆಯೂ ರಾಷ್ಟ್ರಭಾಷೆಯೇ. ನಮ್ಮ ನೆಲಮೂಲ ಸಂಸ್ಕೃತಿಯ ಎಲ್ಲ ಭಾಷೆಗಳನ್ನು ನಾವು ಉಳಿಸಿ, ಬೆಳೆಸಬೇಕು. ಇಂದಿನಿಂದ ಎಲ್ಲರೂ ಕನ್ನಡದಲ್ಲೇ ಸಹಿ ಮಾಡಲು ಸಂಕಲ್ಪ ಮಾಡಬೇಕು. ನನ್ನ ನಾಡು, ನುಡಿಯನ್ನು ಯಾವುದೇ ಸರ್ಕಾರದ ಕೈಗೆ ಕೊಡಬಾರದು. ನನ್ನ ಮನೆಯಿಂದಲೇ ಕನ್ನಡದ ವೈಭವ ಶುರುವಾಗಬೇಕು. ಮಮ್ಮಿ ಅಂದರೆ ಹೆಣ, ಡ್ಯಾಡಿ ಅಂದರೆ ನಾಯಿ. ನಿಮಗೆ ಯಾವುದು ಬೇಕು ಎಂಬುದನ್ನು ನಿವೇ ನಿರ್ಧರಿಸಿ ಎಂದು ಪ್ರಜ್ಞಾ ಪ್ರವಾಹ ಅಖಿಲ ಭಾರತ ಸಹಸಂಯೋಜಕ ರಘುನಂದನ ಕರೆ ನೀಡಿದರು.

ಕೋಟ್:

2047ರ ವೇಳೆಗೆ ಭಾರತ ‘ವಿಕಸಿತ ಭಾರತ’ ಆಗಬೇಕು ಎಂಬ ಕನಸಿನೊಂದಿಗೆ ನರೇಂದ್ರ ಮೋದಿ ಅವರು ಕೆಲಸ ಆರಂಭಿಸಿದ್ದಾರೆ. ಒಬ್ಬ ಶ್ರೇಷ್ಠ ನಾಯಕ ಬಹುದೊಡ್ಡ ಕನಸು ಕಂಡಾಗ ಅದಕ್ಕೆ ಸಾಥ್ ಕೊಡಬೇಕು. ಮುಂದೆ ಇತಿಹಾಸ ಬರೆಯುವಾಗ ಯಾರ‌್ಯಾರು ಅಡ್ಡಗಾಲು ಹಾಕಿದ್ದರು ಅವರ ಹೆಸರನ್ನೂ ಬರೆಯಲಾಗುತ್ತದೆ. ಸಾಥ್ ಕೊಟ್ಟವರ ಹೆಸರನ್ನೂ ಬರೆಯಲಾಗುತ್ತದೆ. ನೀವು ಯಾವ ಲಿಸ್ಟ್‌ನಲ್ಲಿ ಇರಬೇಕು ಎಂಬುದನ್ನು ನೀವೇ ನಿರ್ಧರಿಸಿ.

- ಬಸವರಾಜ ಬೊಮ್ಮಾಯಿ, ಸಂಸದ, ಮಾಜಿ ಸಿಎಂ