ಹಾವೇರಿ/ ರಾಣೆಬೆನ್ನೂರ: ಐದು ಸಾವಿರ ವರ್ಷಗಳಷ್ಟು ಹಳೆಯ ಸಂಸ್ಕೃತಿ, ಪರಂಪರೆ ನಮ್ಮದು. ಇಂತಹ ಐತಿಹಾಸಿಕ ಸಂಸ್ಕೃತಿಯನ್ನು ಉಳಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಪ್ರಾದೇಶಿಕತೆ ಮತ್ತು ರಾಷ್ಟ್ರೀಯತೆಯನ್ನು ಬೇರೆ ಬೇರೆಯಾಗಿ ನೋಡದೇ ಪ್ರಾದೇಶಿಕತೆಯ ಜತೆಗೆ ರಾಷ್ಟ್ರೀಯತೆಯನ್ನು ಮೈಗೂಡಿಸಿಕೊಳ್ಳಬೇಕಿದೆ ಎಂದು ಉಪ ರಾಷ್ಟ್ರಪತಿ ಜಗದೀಪ ಧನಕರ್ ಜನತೆಗೆ ಕರೆ ನೀಡಿದರು.
ರಾಣೆಬೆನ್ನೂರ ನಗರದ ಕೆಎಲ್‌ಇ ಸಂಸ್ಥೆಯ ರಾಜ-ರಾಜೇಶ್ವರಿ ಮಹಾವಿದ್ಯಾಲಯದ ಆವರಣದಲ್ಲಿ ಪ್ರಜ್ಞಾ ಪ್ರವಾಹದ ಅಂಗ ಸಂಸ್ಥೆ ಪರಿವರ್ತನ ವತಿಯಿಂದ ಹಮ್ಮಿಕೊಂಡಿರುವ ಮೂರು ದಿನಗಳ ‘ಕರ್ನಾಟಕ ವೈಭವ’ ವೈಚಾರಿಕ ಹಬ್ಬ ಸಮಾರಂಭವನ್ನು ಡೊಳ್ಳು ಭಾರಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ನಾವೆಲ್ಲರೂ ಭಾರತೀಯರು. ಭಾರತೀಯತೆ, ರಾಷ್ಟ್ರವಾದ ನಮ್ಮ ಉಸಿರು. ರಾಷ್ಟ್ರವಾದ ಗಂಗಾ ನದಿಯಷ್ಟೇ ಪವಿತ್ರವಾದದ್ದು. ರಾಷ್ಟ್ರವಾದದಲ್ಲಿ ಎಲ್ಲ ಸಮಾಜಗಳು ಇವೆ. ನೂರಾರು ವರ್ಷಗಳಿಂದ ಭಾರತದ ಮೇಲೆ ಲಕ್ಷಾಂತರ ದಾಳಿಗಳಾದರೂ ನಮ್ಮ ಸಂಸ್ಕೃತಿ ನಾಶವಾಗಲಿಲ್ಲ. ವಿವಿಧತೆಯಲ್ಲಿ ಏಕತೆ ಎಂಬ ತತ್ವದ ಅಡಿಯಲ್ಲಿ ಭಾರತವನ್ನು ನಮ್ಮ ಮಹನೀಯರು ಕಟ್ಟಿದ್ದಾರೆ ಎಂದರು.
140 ಕೋಟಿ ಜನಸಂಖ್ಯೆ ಹೊಂದಿರುವ ಭಾರತ ಹೇಗೆ ಮುಂದುವರಿಯುತ್ತದೆ ಎಂದು ಜಗತ್ತಿನ ಬಹುತೇಕ ರಾಷ್ಟ್ರಗಳು ಭಾರತದ ಬಗ್ಗೆ ಅಸಡ್ಡೆಯ ಮಾತುಗಳನ್ನು ಆಡುತ್ತಿದ್ದವು. ಹತ್ತು ವರ್ಷಗಳ ಹಿಂದೆ ಇದ್ದ ಭಾರತ ಈಗಿಲ್ಲ. ಜಗತ್ತು ಭಾರತದ ಕಡೆಗೆ ನಿಬ್ಬೆರಗಾಗಿ ನೋಡುತ್ತಿದೆ. ಜಗತ್ತಿನಲ್ಲಿ ಹೂಡಿಕೆ ಮತ್ತು ಅವಕಾಶಗಳಿಗೆ ಭಾರತ ಅತ್ಯುತ್ತಮವಾದ ಆಯ್ಕೆಯಾಗಿದೆ. ಕಾಶ್ಮೀರದಲ್ಲಿ ವಿಕಾಸ ಕಾಣಿಸುತ್ತಿದೆ. ಪ್ರತಿ ವರ್ಷದ ಎರಡು ಕೋಟಿ ಪ್ರವಾಸಿಗರು ಅಲ್ಲಿಗೆ ಭೇಟಿ ನೀಡುತ್ತಿದ್ದಾರೆ. ದೇಶದ ಕೊಡುಗೆಯಲ್ಲಿ ಕಾಶ್ಮೀರದ ಪಾಲೂ ಸೇರಿಕೊಂಡಿದೆ. ಪ್ರಭಾವಿ ರಾಷ್ಟ್ರವಾಗಿ ಹೊರಹೊಮ್ಮುತ್ತಿದೆ ಎಂದರು.
ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಮಾತನಾಡಿ, ‘ಎಲ್ಲರಿಗೂ ನಮಸ್ಕಾರ ನಾನು ನಿಮ್ಮೆಲ್ಲರನ್ನು ಆತ್ಮೀಯವಾಗಿ ಸ್ವಾಗತಿಸುತ್ತೇನೆ’ ಎಂದು ಕನ್ನಡದಲ್ಲಿ ಮಾತು ಆರಂಭಿಸಿದರು. ಕರ್ನಾಟಕ ವೈಭವ ಇದೊಂದು ಬೌದ್ದಿಕ ಜ್ಞಾನದ ಮಹೋತ್ಸವ. ವಿಜಯನಗರದ ಗತ ಕಾಲದ ವೈಭವದ ಝಲಕ್ ಇಲ್ಲಿ ಕಾಣಿಸುತ್ತಿದೆ. ಕರ್ನಾಟಕದ ಸಂಸ್ಕೃತಿ, ಭಾಷೆ, ಪರಂಪರೆಯ ವೈಭವ ಅತ್ಯಂತ ಪುರಾತನ ಹಾಗೂ ವಿಶಿಷ್ಟವಾದದ್ದು. ರಾಜ್ಯದ ಸಂಸ್ಕೃತಿ, ಪರಂಪರೆಯ ಕುರಿತು ಚಿಂತನ ಮಂಥನ ನಡೆಯುತ್ತಿರುವುದು ಹೆಮ್ಮೆಯ ವಿಷಯ ಎಂದರು.
ಹಾವೇರಿಯ ವೈಶಿಷ್ಟ್ಯತೆ ಕುರಿತ ‘ವರದೆಯ ಶಾರದೆ’ ಪುಸ್ತಕವನ್ನು ಉಪ ರಾಷ್ಟ್ರಪತಿ ಬಿಡುಗಡೆಗೊಳಿಸಿದರು.
ಸಮಾರಂಭದಲ್ಲಿ ಉಪ ರಾಷ್ಟ್ರಪತಿಯವರ ಪತ್ನಿ ಡಾ.ಸುದೇಶ್ ಧನಕರ್, ರಾಜ್ಯ ಸರ್ಕಾರದ ಮೀನುಗಾರಿಕೆ ಮತ್ತು ಬಂದರು ಸಚಿವ ಮಂಕಾಳ ವೈದ್ಯ, ಹರಿಹರ ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ವಚನಾನಂದ ಸ್ವಾಮೀಜಿ, ಕರ್ನಾಟಕ ವೈಭವ ಸ್ವಾಗತ ಸಮಿತಿ ಅಧ್ಯಕ್ಷ ಹಾಗೂ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಸ್.ವಿ ಹಲಸೆ, ಪ್ರಜ್ಞಾ ಪ್ರವಾಹ ಅಖಿಲ ಭಾರತ ಸಹ ಸಂಯೋಜಕ ರಘುನಂದನ, ಕರ್ನಾಟಕ ವೈಭವ ಸಂಯೋಜಕ ಕೆ.ಎನ್.ಪಾಟೀಲ, ಇತರರು ಪಾಲ್ಗೊಂಡಿದ್ದರು.