ಜಿಲ್ಲೆ

ಉಪರಾಷ್ಟ್ರಪತಿಗಳಿಂದ ಕರ್ನಾಟಕ ವೈಭವ ಉದ್ಘಾಟನೆ; ರಾಣೆಬೆನ್ನೂರಲ್ಲಿ ಫೆ.7ರಿಂದ 9ರವರೆಗೆ ಆಯೋಜನೆ; ಕರ್ನಾಟಕ ಮುಕ್ತ ವಿವಿ ಕುಲಪತಿ ಶರಣಪ್ಪ ಹಲಸೆ ಮಾಹಿತಿ

ಹಾವೇರಿ: ರಾಣೆಬೆನ್ನೂರ ನಗರದ ಕೆಎಲ್‌ಇ ಸಂಸ್ಥೆಯ ರಾಜ- ರಾಜೇಶ್ವರಿ ಮಹಾವಿದ್ಯಾಲಯದಲ್ಲಿ ಫೆ.7, 8 ಮತ್ತು 9ರಂದು ಮೂರು ದಿನಗಳ ಕಾಲ ‘ಕರ್ನಾಟಕ ವೈಭವ ವೈಚಾರಿಕ ಹಬ್ಬ’ ಆಯೋಜಿಸಲಾಗಿದ್ದು, ಸಮಾರಂಭವನ್ನು ಉಪರಾಷ್ಟ್ರಪತಿ ಜಗದೀಪ ಧನಕರ ಉದ್ಘಾಟಿಸಲಿದ್ದಾರೆ ಎಂದು ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದ ಕುಲಪತಿ ಹಾಗೂ ಕರ್ನಾಟಕ ವೈಭವ ಸ್ವಾಗತ ಸಮಿತಿ ಅಧ್ಯಕ್ಷ ಪ್ರೊ.ಎಸ್.ವಿ ಹಲಸೆ ಹೇಳಿದರು.

ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಫೆ.7ರಂದು ಬೆಳಗ್ಗೆ 11 ಗಂಟೆಗೆ ಉಪರಾಷ್ಟ್ರಪತಿ ಜಗದೀಪ ಧನಕರ ಸಮಾರಂಭ ಉದ್ಘಾಟಿಸುವರು. ಹರಿಹರ ಪಂಚಮಸಾಲಿ ಗುರುಪೀಠದ ವಚನಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಅತಿಥಿಗಳಾಗಿ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್, ಬಿಜೆಪಿಯ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ, ಕರ್ನಾಟಕ ಮುಕ್ತ ವಿವಿ ಕುಲಪತಿ ಪ್ರೊ.ಎಸ್.ವಿ ಹಲಸೆ, ಪ್ರಜ್ಞಾಪ್ರವಾಹ ಸಂಯೋಜಕ ರಘುನಂದನ ಭಾಗವಹಿಸುವರು ಎಂದರು.

ಫೆ.7ರಂದು ಬೆಳಗ್ಗೆ 10 ಗಂಟೆಗೆ ಹಂಪಿ ವಿವಿ ಕುಲಪತಿ ಡಿ.ವಿ.ಪರಶಿವಮೂರ್ತಿ ಪ್ರದರ್ಶನಿ ಉದ್ಘಾಟಿಸುವರು. ಮಧ್ಯಾಹ್ನ 2 ಗಂಟೆಗೆ ಚಿಣ್ಣರ ಗೋಷ್ಠಿ, 6 ಗಂಟೆಗೆ ನಮ್ಮ ಸಂವಿಧಾನ ನಮ್ಮ ಹೆಮ್ಮೆ ಸಾರ್ವಜನಿಕ ಕಾರ್ಯಕ್ರಮ, ನಂತರ ಗಂಗಾವತಿಯ ಪ್ರಾಣೇಶ ಅವರಿಂದ ಹಾಸ್ಯ ಸಂಜೆ ಮತ್ತು ಕಲಾ ಪ್ರದರ್ಶನ ನಡೆಯಲಿದೆ. ಫೆ.8ರಂದು ಬೆಳಗ್ಗೆ 11ಕ್ಕೆ ಯುವ ಗೋಷ್ಠಿಯಲ್ಲಿ ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ, ಚಕ್ರವರ್ತಿ ಸೂಲಿಬೆಲೆ, ಮತ್ತಿತರರು ಭಾಗವಹಿಸುವರು. ಮದ್ಯಾಹ್ನ 3ಕ್ಕೆ ಮಹಿಳಾ ಗೋಷ್ಠಿಯಲ್ಲಿ ಆರ್‌ಎಸ್‌ಎಸ್ ಸರಕಾರ್ಯವಾಹಿಕಾ ಅಲ್ಕಾತಾಯಿ ಇನಾಂದಾರ, ಅದಮ್ಯ ಚೇತನ ಸಂಸ್ಥೆಯ ಮುಖ್ಯಸ್ಥೆ ತೇಜಸ್ವಿನಿ ಅನಂತಕುಮಾರ, ಓಂ ಶಿಕ್ಷಣ ಸಂಸ್ಥೆಯ ಅಧ್ಯಕ್ಷೆ ರುಕ್ಷ್ಮಿಣಿ ಸಾವಕಾರ, ಮತ್ತಿತರರು ಭಾಗವಹಿಸುವರು ಎಂದರು.

ಸಂಜೆ 6ಕ್ಕೆ ‘ಸ್ವಾತಂತ್ರ್ಯ ಹೋರಾಟದಲ್ಲಿ ಕರ್ನಾಟಕದ ವೀರ ವನಿತೆಯರು’ ವಿಷಯ ಕುರಿತ ಸಾರ್ವಜನಿಕ ಕಾರ್ಯಕ್ರಮದಲ್ಲಿ ವಾಗ್ಮಿ ಚಕ್ರವರ್ತಿ ಸೂಲಿಬೆಲೆ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಕಾಕಿ ಜನಸೇವಾ ಸಂಸ್ಥೆಯ ಅಧ್ಯಕ್ಷ ಶ್ರೀನಿವಾಸ ಕಾಕಿ, ಮತ್ತಿತರರು ಪಾಲ್ಗೊಳ್ಳುವರು ಎಂದರು.

ಫೆ.9ಕ್ಕೆ ಬೆಳಗ್ಗೆ 11ಕ್ಕೆ ಕೃಷಿ ಪದವೀಧರ ಸಂಘದ ಸಹಯೋಗದಲ್ಲಿ ‘ಹೊನ್ನ ಬಿತ್ತೆವು ಜಗಕೆಲ್ಲ’ ರೈತಗೋಷ್ಠಿ ನಡೆಯಲಿದೆ. ಕಲಬುರ್ಗಿಯ ವಿಕಾಸ ಅಕೆಡಮಿಯ ಅಧ್ಯಕ್ಷ ಬಸವರಾಜ ಪಾಟೀಲ ಸೇಡಂ, ರಾಯಚೂರ ಕೃಷಿ ವಿಜ್ಞಾನ ವಿವಿ ಕುಲಪತಿ ಎಂ.ಹನುಮಂತಪ್ಪ, ಇತರರು ಭಾಗವಹಿಸುವರು. ಸಂಜೆ 6ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ. ಶ್ರೀ ವಚನಾನಂದ ಸ್ವಾಮೀಜಿ, ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ, ಸಂಸದ ಬಸವರಾಜ ಬೊಮ್ಮಾಯಿ, ಪದ್ಮಶ್ರೀ ಮಂಜಮ್ಮ ಜೋಗತಿ, ಕೆಎಲ್‌ಇ ಸಂಸ್ಥೆಯ ರಾಜ-ರಾಜೇಶ್ವರಿ ಮಹಾವಿದ್ಯಾಲಯದ ಸ್ಥಾನಿಕ ಆಡಳಿತ ಮಂಡಳಿಯ ಅಧ್ಯಕ್ಷ ವಿ.ಪಿ ಲಿಂಗನಗೌಡ್ರ, ಇತರರು ಆಗಮಿಸುವರು. ಸಂಗೀತ ಕಲಾವಿದೆ ಸಂಗೀತಾ ಕಟ್ಟಿಯವರಿಗೆ ‘ಸರ್ವಜ್ಞ ಪ್ರಶಸ್ತಿ’ ಪ್ರಧಾನ ಮಾಡಲಾಗುವುದು ಎಂದರು.

ಸುದ್ದಿಗೋಷ್ಠಿಯಲ್ಲಿ ಪರಿವರ್ತನ ಸಂಯೋಜಕ ಡಾ.ನಾರಾಯಣ ಪವಾರ, ಕರ್ನಾಟಕ ವೈಭವ ಸ್ವಾಗತ ಸಮಿತಿ ಕಾರ್ಯದರ್ಶಿ ಬಸವರಾಜ ಪಾಟೀಲ, ಸಂಯೋಜಕ ಕೆ.ಎನ್.ಪಾಟೀಲ, ನಿರಂಜನ ಪೂಜಾರ, ಸಿದ್ದರಾಜ ಕಲಕೋಟಿ, ಡಾ.ಶಿವಾನಂದ ಕೆಂಬಾವಿ, ಶ್ರೀಕಾಂತ ಅಯ್ಯಂಗಾರ, ಕಿರಣಕುಮಾರ ಕೋಣನವರ, ಇತರರಿದ್ದರು.