ರಾಣೆಬೆನ್ನೂರ: ದೇಶದ ಜನರಿಗೆ ನಾವು ಅರಿವು, ಪ್ರಜ್ಞೆ ಮೂಡಿಸುವ ಕೆಲಸ ಹೆಚ್ಚಾಗಬೇಕಿದೆ. ಅದಕ್ಕೆ ನಾವು, ನೀವು ಎಲ್ಲರೂ ಸೇರಿ ಇಂತಹ ವಿನೂತನ ಕಾರ್ಯಕ್ರಮಗಳ ಮೂಲಕ ನಾಡಿನ ಜನರಲ್ಲಿ ರಾಷ್ಟ್ರ ಪ್ರಜ್ಞೆ ಮೂಡಿಸುವ ಕೆಲಸ ಮಾಡೋಣ ಎಂದು ನಗರದ ಶ್ರೀ ರಾಮಕೃಷ್ಣ ವಿವೇಕಾನಂದ ಆಶ್ರಮದ ಸ್ವಾಮಿ ಶ್ರೀ ಪ್ರಕಾಶನಂದ ಮಹಾರಾಜರು ಸಲಹೆ ನೀಡಿದರು.
ನಗರದ ನಗರಸಭಾ ಕ್ರೀಡಾಂಗಣದಲ್ಲಿ ಪ್ರತಿಷ್ಠಾಪನೆ ಮಾಡಿರುವ ‘ರಾಣೆಬೆನ್ನೂರ ಕಾ ರಾಜಾ’ ಹಾಗೂ ‘ನವದುರ್ಗೆಯರ ವೈಭವ’ ಗಣೇಶ ಮಂಟಪದಲ್ಲಿ ಭಾನುವಾರ ಜಿಲ್ಲೆಯ 13 ಸಾಧಕ ಮಹಿಳೆಯರ ಕುರಿತು ಉಪನ್ಯಾಸಕ ಪ್ರಮೋದ ನಲವಾಗಿಲು ರಚಿಸಿರುವ ‘ಪ್ರಾತಃ ಸ್ಮರಾಮಿ’ ಗ್ರಂಥ ಬಿಡುಗಡೆ ಮಾಡಿ ಅವರು ಮಾತನಾಡಿದರು.
ಸದ್ಯ ದೇಶ ಹಾಗೂ ರಾಜ್ಯದಲ್ಲಿ ಗಣೇಶ ಉತ್ಸವ ಬಗೆ ಬಗೆಯ ಹಾಡುಗಳು, ನೃತ್ಯದ ಮೂಲಕ ಅಂತ್ಯವಾಗುತ್ತಿದೆ. ಆದರೆ, ಗಣೇಶ ಹಬ್ಬವನ್ನು ಸಾಂಸ್ಕೃತಿಕವಾಗಿ, ಧಾರ್ಮಿಕವಾಗಿ, ಸಾಹಿತ್ಯಿಕವಾಗಿ ಮಾರ್ಪಡಿಸಿ ಅದನ್ನು ಹಬ್ಬವನ್ನಾಗಿ ಜನರಿಗೆ ತೋರಿಸಿದ ಕೀರ್ತಿ ವಂದೇ ಮಾತರಂ ಸ್ವಯಂ ಸೇವಾ ಸಂಸ್ಥೆಗೆ ಸಲ್ಲುತ್ತದೆ. ಇಂತಹ ಸಂಸ್ಥೆ ಪ್ರತಿ ವರ್ಷವೂ ವಿಶೇಷವಾಗಿ, ವಿಭಿನ್ನವಾಗಿ ಜನರಿಗೆ ಅರಿವು ಮೂಡಿಸುವ ಕೆಲಸ ಮಾಡುತ್ತಿದೆ. ಇದಕ್ಕೆ ಎಲ್ಲರ ಬೆಂಬಲ ಹೀಗೆ ಮುಂದುವರಿಯಲಿ ಎಂದರು.
ಬೆಂಗಳೂರಿನ ಪತ್ರಕರ್ತ ಎಂ.ಎಸ್.ರಾಘವೇಂದ್ರ ಮಾತನಾಡಿ, ಕರ್ನಾಟಕದಲ್ಲಿ ಗಣೇಶ ಉತ್ಸವ ಪ್ರಾರಂಭವಾಗಿದ್ದು, ಉತ್ತರ ಕರ್ನಾಟಕದ ಹೆಬ್ಬಾಗಿಲು ರಾಣೆಬೆನ್ನೂರ ನಗರದಿಂದ ಎಂಬುದು ವಿಶೇಷ. ನಗರದಲ್ಲಿ 1925-31ರಲ್ಲಿ ನಗರದ ಮಾರ್ಕೆಟ್ ಗಲ್ಲಿಯಲ್ಲಿ ಮುದವೀಡು ಕೃಷ್ಣರಾಯರು ಗಣೇಶ ಪ್ರತಿಷ್ಠಾಪನೆ ಮಾಡಿದರು. 16 ವರ್ಷಗಳಿಂದ ನಗರದಲ್ಲಿ ವಂದೇ ಮಾತರಂ ಸ್ವಯಂಸೇವಾ ಸಂಸ್ಥೆ ಪ್ರತಿ ವರ್ಷವೂ ವಿನೂತನ ಮಾದರಿಯ ಗಣೇಶ ಪ್ರತಿಷ್ಠಾಪನೆ ಮಾಡುವ ಮೂಲಕ ರಾಜ್ಯದಲ್ಲಿ ಹೆಸರು ಮಾಡಿದೆ ಎಂದರು.
ಸಮಾರಂಭದಲ್ಲಿ ವಂದೇ ಮಾತರಂ ಸ್ವಯಂಸೇವಾ ಸಂಸ್ಥೆಯ ಅಧ್ಯಕ್ಷ ಪ್ರಕಾಶ ಬುರಡಿಕಟ್ಟಿ, ಲೇಖಕ ಪ್ರಮೋದ ನಲವಾಗಲ, ನಗರಸಭೆ ಸದಸ್ಯರಾದ ರೂಪಾ ಚಿನ್ನಿಕಟ್ಟಿ, ಕವಿತಾ ಹೆದ್ದೇರಿ, ಪ್ರೇಮಕುಮಾರ ಬಿದರಕಟ್ಟಿ, ಅಜಯ ಮಠದ, ಸೇರಿದಂತೆ, ಹಲವರು ಉಪಸ್ಥಿತರಿದ್ದರು.
ನವದುರ್ಗೆಯರ ವೈಭವ
ಈ ಬಾರಿ ರಾಣೆಬೆನ್ನೂರ ನಗರದಲ್ಲಿ ವಿಶೇಷವಾಗಿ ‘ಪ್ರಾತಃ ಸ್ಮರಾಮಿ’ ಎಂಬ ಗ್ರಂಥದ ಮೂಲಕ ಮಹಿಳೆಯರ ಸಾಧನೆ ಬಗ್ಗೆ ವಿವರಿಸಿರುವುದು ವಿಶೇಷ. ಮಹಿಳೆಯರ ಮೇಲೆ ನಿತ್ಯ ಅತ್ಯಾಚಾರ, ಶೋಷಣೆ ನಡೆಯುತ್ತಿರುವದು ನೋಡಿದರೆ ಸಮಾಜದಲ್ಲಿ ತೆಲೆ ತಗ್ಗಿಸುವ ಕೆಲಸವಾಗಿದೆ. ಇಂತಹ ಸಮಯದಲ್ಲಿ ಮಹಿಳೆಯರಿಗೆ ಧೈರ್ಯ, ಸ್ಥೈರ್ಯ ತುಂಬಬೇಕು ಎಂಬ ಉದ್ದೇಶದಿಂದ ನವದುರ್ಗೆಯರ ವೈಭವ ಪ್ರದರ್ಶನದ ಮೂಲಕ ಮಹಿಳೆಯರ ಸಬಲತೆ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡಲಾಗುತ್ತಿದೆ ಎಂದು ಪತ್ರಕರ್ತ ಎಂ.ಎಸ್.ರಾಘವೇಂದ್ರ ತಿಳಿಸಿದರು.