ಜಿಲ್ಲೆ

ಎಸ್.ಎಲ್.ಭೈರಪ್ಪಗೆ ಆಶ್ರಯ ನೀಡಿದ್ದ ಹಾವೇರಿ ಜಿಲ್ಲೆ; ರಾಣೆಬೆನ್ನೂರ, ಬ್ಯಾಡಗಿಯಲ್ಲಿ ಕೆಲ ದಿನ ವಾಸವಾಗಿದ್ದ ಸರಸ್ವತಿ ಪುತ್ರ

ಹಾವೇರಿ: ಹಿರಿಯ ವಿದ್ವಾಂಸ, ಸರಸ್ವತಿ ಪುತ್ರ ಎಸ್.ಎಲ್. ಭೈರಪ್ಪನವರು ತಮ್ಮ ಯೌವನದ ದಿನಗಳಲ್ಲಿ ಕೋಟ್ಯಾಧೀಶನಾಗಲು ಮುಂಬೈಗೆ ಹೊರಟಿದ್ದ ಸಂದರ್ಭದಲ್ಲಿ ರೈಲು ಟಿಕೆಟ್‌ಗೂ ಹಣವಿಲ್ಲದೇ ಸಂಕಷ್ಟಕ್ಕೆ ಸಿಲುಕಿದ್ದಾಗ ರಾಣೆಬೆನ್ನೂರ ಹಾಗೂ ಬ್ಯಾಡಗಿ ಆಶ್ರಯ ನೀಡಿತ್ತು.

ಭೈರಪ್ಪನವರು ತಮ್ಮ ವಿದ್ಯಾರ್ಥಿ ದಿನಗಳಲ್ಲಿ ಅತಿ ಸಂಕಷ್ಟದ ಬದುಕು ಸವೆಸಿದ್ದರು. ಬಾಲ್ಯದಿಂದಲೂ ಅದು ಅಭ್ಯಾಸವಾಗಿತ್ತು. ಅದನ್ನು ಅವರು ಆ ದಿನಗಳಲ್ಲೇ ಅರಗಿಸಿಕೊಳ್ಳುವ ಕಲೆ ಕರಗತ ಮಾಡಿಕೊಂಡಿದ್ದರು. ಹೀಗಿರುವಾಗ ‘ಕೋಟ್ಯಾಧೀಶನಾಗಲು ಮುಂಬೈಗೆ ಹೋಗಬೇಕು’ ಎಂದು ಆಪ್ತರೊಬ್ಬರು ಸಲಹೆ ನೀಡಿದ್ದರು. ಈ ಬಗ್ಗೆ ಹಿಂದೆ ಮುಂದೆ ಯೋಚನೆ ಮಾಡದೇ ಭೈರಪ್ಪನವರು ನೇರವಾಗಿ ಮೈಸೂರಿನಿಂದ ಮುಂಬೈ ರೈಲು ಏರಿದ್ದರು.

ಹಸಿದ ಹೊಟ್ಟೆ, ಖಾಲಿ ಕಿಸೆಯಲ್ಲಿ ಸಾಗುತ್ತಿದ್ದ ಇವರಿಗೆ ರೈಲು ಟಿಕೆಟ್ ಖರೀದಿಸಲು ಸಾಧ್ಯವಾಗಿರಲಿಲ್ಲ. ಹೀಗಾಗಿ, ರಾಣೆಬೆನ್ನೂರ ರೈಲು ನಿಲ್ದಾಣದ ಬಳಿ ಬಂದಾಗ ರೈಲ್ವೆ ಟಿಕೆಟ್ ತಪಾಸಣಾಧಿಕಾರಿ ರೈಲಿನಿಂದ ಕೆಳಗೆ ಇಳಿಸಿದ್ದರು. ಅವಮಾನದಿಂದ ಹಿಂಜರಿಯದೇ ಆಕ್ರೋಶದಿಂದ ನಡೆದುಕೊಂಡೇ ಮುಂಬೈಗೆ ಹೋಗುತ್ತೇನೆ ಎಂದು ಹೊರಟಿದ್ದರು.

ಈ ವೇಳೆ ಭೈರಪ್ಪನವರನ್ನು ಯಾರೋ ಕರೆದೊಯ್ದು ಹೋಟೆಲ್ ಒಂದರಲ್ಲಿ ಕೆಲಸ ಕೊಡಿಸಿದ್ದರು. ದಿನಕ್ಕೆ ಐದು ರೂಪಾಯಿ ಕೂಲಿ. ಬೆಳಗ್ಗೆ 8ರಿಂದ ರಾತ್ರಿವರೆಗೂ ಕೆಲಸ ಮಾಡುವುದು ದುಸ್ತರವೆನಿಸಿ ಕೆಲದಿನಗಳಲ್ಲೇ ಅಲ್ಲಿಂದ ಹೊರ ಬಂದರು.

ಬಳಿಕ ಬ್ಯಾಡಗಿಯಲ್ಲಿ ರಂಗಭೂಮಿ ಹಿನ್ನೆಲೆಯ ನಾಟಕ ಕಂಪನಿಗೆ ಸೇರಿದರು. ಚುರುಕು ಬುದ್ಧಿಯ ಹುಡುಗನಾಗಿದ್ದರಿಂದ ಕೆಲಸವೇನೋ ಸಿಕ್ಕಿತು. ಲೆಕ್ಕ ಬರೆಯವುದರಲ್ಲಿ ಮತ್ತು ಜಾಹೀರಾತು ಮಾಡುವುದರಲ್ಲಿ ಇವರು ಕೆಲಸಕ್ಕೆ ಸೇರಿದ ಒಂದೂವರೆ ತಿಂಗಳಲ್ಲಿ ಕಂಪನಿ ಮುಚ್ಚಿತು. ನಂತರ ಸ್ವಗ್ರಾಮಕ್ಕೆ ಹೊರಟಿದ್ದರು.

ಸಾಹಿತ್ಯ ಅಕಾಡೆಮಿಯಿಂದ ಪಿ.ಶೇಷಾದ್ರಿ ಅವರ ನಿರ್ದೇಶನದಲ್ಲಿ ನಿರ್ಮಿಸಿದ್ದ ಸಾಕ್ಷೃಚಿತ್ರದಲ್ಲಿ ಭೈರಪ್ಪನವರು ತಮ್ಮ ವಿದ್ಯಾರ್ಥಿ ದಿನಗಳಲ್ಲಿನ ನೆನಪುಗಳನ್ನು ಸ್ವತಃ ತಾವೇ ಬಿಚ್ಚಿಟ್ಟಿದ್ದರು. ಈ ಮೂಲಕ ಭೈರಪ್ಪನವರು ಹಾವೇರಿ ಜಿಲ್ಲೆಯ ನಂಟು ಹೊಂದಿದ್ದರು.