ಹಾವೇರಿ: ರಾಜ್ಯ ಸರ್ಕಾರದ ಬಜೆಟ್‌ನಲ್ಲಿ ನೀರಾವರಿ ಯೋಜನೆಗಳಿಗೆ ಹಣಕಾಸು ಮೀಸಲು ಇಡಬೇಕು. ಕೇಂದ್ರ ಸರ್ಕಾರ ವಾಪಸ್ ಪಡೆದಿರುವ ಮೂರು ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಅಧ್ಯಕ್ಷ ವಾಸುದೇವ ಮೇಟಿ ಆಗ್ರಹಿಸಿದರು.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ವಾಪಸ್ ಪಡೆದಿರುವ ಮೂರು ಕೃಷಿ ಕಾಯ್ದೆಗಳಿಗೆ ಆರಂಭದಲ್ಲಿ ವಿರೋಧಿಸಿದ್ದ ರಾಜ್ಯ ಸರ್ಕಾರ ಅಧಿಕಾರಕ್ಕೇರಿದ ನಂತರ ಮರೆತಿದೆ. ಈ ಬಗ್ಗೆ ಸಿಎಂ, ಡಿಸಿಎಂ ಚಕಾರ ಎತ್ತುತ್ತಿಲ್ಲ. ಬೆಳಗಾವಿ ಅಧಿವೇಶನದಲ್ಲೂ ಮಾತನಾಡಲಿಲ್ಲ. ಬಜೆಟ್ ಪೂರ್ವದಲ್ಲಿ ಇದನ್ನು ರದ್ದುಗೊಳಿಸಬೇಕು ಎಂದರು.
ರಾಜ್ಯದಲ್ಲಿ ಎಲ್ಲ ವಸ್ತುಗಳ ದರ ಏರುತ್ತಲಿದೆ. ಬಸ್ ದರ ಶೇ.15ರಷ್ಟು ಹೆಚ್ಚಿಸಿದ್ದು ಖಂಡನೀಯ. ದುಡಿಯುವ ವರ್ಗಕ್ಕೆ ಈ ಮೂಲಕ ಭಾರ ಹೇರಲಾಗುತ್ತಿದೆ. 100 ರೂ. ಸ್ಟಾಂಪ್ ಡ್ಯೂಟಿ ಇದ್ದದ್ದು 500 ರೂ.ಗೆ ಏರಿಸಲಾಗಿದೆ. ದರ ಏರಿಕೆ ಮೂಲಕ ರೈತರ ಮೇಲೆ ಬರೆ ಎಳೆಯುವ ಕೆಲಸ ಸರ್ಕಾರದಿಂದ ಆಗುತ್ತಿದೆ. ನೀರಾವರಿ ಪಂಪಸೆಟ್‌ಗಳಿಗೆ ವಿದ್ಯುತ್ ಸಂಪರ್ಕ ಕೊಡಿಸುತ್ತಿಲ್ಲ ಎಂದರು.
ಸುದ್ದಿಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಸಂಗಣ್ಣ ಬಾಗೇವಾಡಿ, ಕಾರ್ಯದರ್ಶಿ ಪಕ್ಕೀರಪ್ಪ ಪೂಜಾರ, ಜಿಲ್ಲಾಧ್ಯಕ್ಷ ಎಂ.ಡಿ.ಕಾಲೇಭಾಗ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಮಂಜುಳಾ ಕರಬಸಮ್ಮನವರ, ಹನುಮಂತಪ್ಪ ದೊಡ್ಡಮನಿ, ಪ್ರೇಮಾ ಲೋಕೇಶ, ಭೀಮಣ್ಣ ಹುಲ್ಮನಿ, ಇತರರಿದ್ದರು.
ಸಚಿವ ಜಾರ್ಜ್ ರಾಜೀನಾಮೆ ಕೊಡಲಿ
ಇಂಧನ ಸಚಿವ ಕೆ.ಜೆ.ಜಾರ್ಜ್ ಸಂಪೂರ್ಣ ನಿಷ್ಕ್ರಿಯರಾಗಿದ್ದು, ಈವರೆಗೆ ಒಂದೂ ಸುದ್ದಿಗೋಷ್ಠಿ ಮಾಡಲಿಲ್ಲ. ರಾಜ್ಯದಲ್ಲಿ ಇಂಧನ ಸಚಿವರು ಇದ್ದಾರೋ ಇಲ್ಲವೋ ಎಂದು ಅನಿಸುತ್ತಿದೆ. ಕೃಷಿ ಸಚಿವ ಕೃಷ್ಣ ಭೈರೇಗೌಡರು ಜಿಲ್ಲಾ ಪ್ರವಾಸ ಮಾಡುತ್ತಿಲ್ಲ. ತೋಟಗಾರಿಕೆ ಇಲಾಖೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಯಾವ ಜಿಲ್ಲೆಗೂ ಬರುತ್ತಿಲ್ಲ. ರೈತರ ಸಂಕಷ್ಟ ಆಲಿಸುತ್ತಿಲ್ಲ. ಇಂಥವರನ್ನು ಸಂಪುಟದಿಂದ ಕೈಬಿಡಬೇಕು ಎಂದು ಮೇಟಿ ಆಗ್ರಹಿಸಿದರು.