ಜಿಲ್ಲೆ

ರೈತರ ಹುತಾತ್ಮ ದಿನದಂದು ಪ್ರತಿಭಟನೆ; ರೈತ ಸಂಘದ ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚಳ್ಳೇರ ಹೇಳಿಕೆ

ಹಾವೇರಿ: ನಗರದಲ್ಲಿ 2008ರಲ್ಲಿ ರಸಗೊಬ್ಬರಕ್ಕಾಗಿ ನಡೆದ ಗೋಲಿಬಾರ್‌ನಲ್ಲಿ ಪೊಲೀಸರ ಗುಂಡೇಟಿಗೆ ಬಲಿಯಾದ ಹುತಾತ್ಮ ರೈತರ ಸ್ಮರಣಾರ್ಥವಾಗಿ ಜೂ.10ರಂದು ರೈತ ಹುತಾತ್ಮ ದಿನವನ್ನು ಹೋರಾಟದ ದಿನವನ್ನಾಗಿ ಆಚರಿಸಲಾಗುವುದು. ಅಂದು ನಗರದ ಹೊಸಮನಿ ಸಿದ್ದಪ್ಪ ವೃತ್ತದ ಬಳಿ ಇರುವ ಹುತಾತ್ಮ ರೈತರ ವೀರಗಲ್ಲು ಬಳಿ ರೈತರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಲಾಗುವುದು ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚಳ್ಳೇರ ಹೇಳಿದರು.

ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿತ್ತನೆ ಬೀಜ, ರಸಗೊಬ್ಬರಕ್ಕಾಗಿ ಜಿಲ್ಲೆಯಲ್ಲಿ ಗೋಲಿಬಾರ್‌ನಂತಹ ಕರಾಳ ಘಟನೆ ನಡೆದು ಇದೇ ಜೂನ್ 10ಕ್ಕೆ 17ವರ್ಷ ಕಳೆದು 18ನೇ ವರ್ಷಕ್ಕೆ ಪದಾರ್ಪಣೆ ಮಾಡುತ್ತಿರುವುದು ವಿಷಾಧದ ಸಂಗತಿ. ಈ ನಡುವೆ ಅತಿವೃಷ್ಠಿ, ಅನಾವೃಷ್ಠಿಯಿಂದಾಗಿ ಸಂಭವಿಸುವ ಪ್ರಕೃತಿ ವಿಕೋಪಗಳಲ್ಲಿ ರೈತರು ಬೆಳೆದ ಅಲ್ಪಸ್ವಲ್ಪ ಬೆಳೆಗಳಿಗೆ ಸರಿಯಾದ ಬೆಲೆ ಸಿಗುತ್ತಿಲ್ಲ. ಅತಿಯಾದ ಮಳೆಯಿಂದಾಗಿ ಬೆಳೆ ನಾಶವಾಗಿ ರೈತರ ಬದುಕು ಅತಂತ್ರ ಸ್ಥಿತಿಯಲ್ಲಿದೆ. ರೈತರ ನೆರವಿಗೆ ಬರಬೇಕಾದ ಆಳುವ ಸರ್ಕಾರಗಳು ಕಣ್ಮುಚ್ಚಿ ಕುಳಿತಿದ್ದು, ಅನ್ನದಾತರ ಬದುಕು ಸಂಕಷ್ಟಕ್ಕೆ ಸಿಲುಕಿಸಿದೆ. ಈ ಹಿನ್ನೆಲೆಯಲ್ಲಿ ರೈತರು ಎದುರಿಸುತ್ತಿರುವ ಅನೇಕ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಜೂ.10ರಂದು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ರೈತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಮನವಿ ಮಾಡಿದರು.

ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಮಾತನಾಡಿ, ಜಿಲ್ಲೆಯಲ್ಲಿ ಡಿಎಪಿ ರಸಗೊಬ್ಬರದ ಅಭಾವ ಹೆಚ್ಚಾಗಿದೆ. ಅಧಿಕಾರಿಗಳು ನೀಡುವ ಅಂಕಿ- ಅಂಶಗಳು ಹಾಗೂ ರಸಗೊಬ್ಬರ ವಿತರಣಾ ಕೇಂದ್ರದಲ್ಲಿ ಲಭ್ಯವಿರುವ ಅಂಕಿ-ಅಂಶಗಳಿಗೂ ಬಹಳಷ್ಟು ವ್ಯತ್ಯಾಸವಿದೆ. ಕಾಂಪ್ಲೆಕ್ಸ್ ಬಳಕೆ ಮಾಡುವಂತೆ ಅಧಿಕಾರಿಗಳು ಸೂಚಿಸುತ್ತಿರುವುದು ರೈತರನ್ನು ಗೊಂದಲಕ್ಕೆ ಈಡಾಗುವಂತೆ ಮಾಡಿದೆ. ಈ ನಡುವೆ ಕೆಲ ಕಂಪನಿಯವರು 4 ಕೆಜಿ ಇರುವ ಮೆಕ್ಕೆಜೋಳ ಬಿತ್ತನೆ ಬೀಜದ ಪ್ಯಾಕೇಟ್‌ಗೆ ಕನಿಷ್ಠ 600 ರೂ. ಇಂದ 2,400ರೂ.ವರೆಗೆ ದರ ನಿಗದಿ ಮಾಡಿದ್ದಾರೆ. ಸರ್ಕಾರ ಹಾಗೂ ಜಿಲ್ಲಾಡಳಿತ ಬೆಲೆ ನಿಯಂತ್ರಿಸುವಲ್ಲಿ ವಿಫಲವಾಗಿವೆ. ಖಾಸಗಿ ಕಂಪನಿಗಳು ಮನಬಂದಂತೆ ದರವಿಸುತ್ತಿದ್ದರೂ ಸರ್ಕಾರ ಕಡಿವಾಣ ಹಾಕುತ್ತಿಲ್ಲ. ಈ ಕೂಡಲೇ ಮಧ್ಯಪ್ರವೇಶಿಸಿ ಮೆಕ್ಕೆಜೋಳ ಪ್ಯಾಕೆಟ್‌ಗೆ ಒಂದೇ ದರ ನಿಗದಿ ಮಾಡಬೇಕು. ಜತೆಗೆ ಯುಟಿಪಿ ಕಾಲುವೆಗೆ ಜಮೀನು ಹೋಗಿದ್ದನ್ನು ಎಸ್‌ಎಲ್‌ಓ ಅಧಿಕಾರಿಯನ್ನು ನೇಮಿಸಿ ರೈತರಿಗೆ ಉಚಿತವಾಗಿ ಪೋಡಿ ಮಾಡಿಸಿಕೊಡಬೇಕೆಂದು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಶಂಕರಣ್ಣ ಶಿರಗಂಬಿ, ಸುರೇಶ ಚಲವಾದಿ, ಶಿವಯೋಗಿ ಹೊಸಗೌಡ್ರ, ಮುತ್ತಣ್ಣ ಗುಡಗೇರಿ, ಚನ್ನಪ್ಪ ಮರಡೂರ, ಅಬ್ಧುಲ್ ಬುಡಂದಿ, ಫಯಾಜ್ ದೊಡ್ಡಮನಿ, ಮಂಜನಗೌಡ ಸಣ್ಣಗೌಡ್ರ, ಎ.ಆರ್ ಮಣಕೂರ, ಮಲ್ಲನಗೌಡ ಮಾಳಗಿ, ಇತರರು ಇದ್ದರು.