ಹಾವೇರಿ: ನಗರದಲ್ಲಿ ಗೋಲಿಬಾರ್ ನಡೆದು ಇಬ್ಬರು ಹುತಾತ್ಮರಾದ ಘಟನೆ ನಡೆದು 17 ವರ್ಷ ಕಳೆದ ಹಿನ್ನೆಲೆಯಲ್ಲಿ ಇಲ್ಲಿನ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಜೂ.10ರಂದು ಬೆಳಗ್ಗೆ 10 ಗಂಟೆಗೆ ರೈತರ ಹುತಾತ್ಮ ದಿನಾಚರಣೆಯನ್ನು ‘ರೈತರ ಹೋರಾಟದ ದಿನವನ್ನಾಗಿ’ ಆಚರಿಸಲಾಗುವುದು. ಅಂದು ಜಿಲ್ಲೆಯ ಶಾಸಕರು, ಸಂಸದರು, ಮಾಜಿ ಶಾಸಕರು ಪಾಲ್ಗೊಳ್ಳುವಂತೆ ಮುಕ್ತವಾಗಿ ಆಹ್ವಾನ ನೀಡಲಾಗುವುದು ಎಂದು ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಹೇಳಿದರು.
ಇಲ್ಲಿನ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದಿನ ಹೋರಾಟದಂದು ಆಢಳಿತಾರೂಢ ಪಕ್ಷದ ಶಾಸಕರು, ನೂತನ ಸಂಸದರು, ವಿಪಕ್ಷಗಳ ಮಾಜಿ ಶಾಸಕರು ಪಾಲ್ಗೊಂಡು ರೈತರ ಸಮಸ್ಯೆಗಳನ್ನು ಆಲಿಸಿ, ಬಗೆಹರಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಈ ನಿಟ್ಟಿನಲ್ಲಿ ಜನಪ್ರತಿನಿಧಿಗಳಂತೂ ವೇದಿಕೆ ಕಲ್ಪಿಸಲಿಲ್ಲ. ಹೀಗಾಗಿ, ನಾವೇ ವೇದಿಕೆ ಸಿದ್ಧಪಡಿಸಿ ಅವರಿಗೆ ಆಹ್ವಾನ ನೀಡುತ್ತಿದ್ದೇವೆ. ವೇದಿಕೆಗೆ ಬಂದು ನಮ್ಮ ಸಮಸ್ಯೆಗಳಿಗೆ ಸ್ಪಂದಿಸದಿದ್ದರೆ ಎಲ್ಲ ಸರ್ಕಾರಿ ಕಾರ್ಯಕ್ರಮಗಳಿಗೆ ಬಹಿಷ್ಕಾರ ಹಾಕಲಾಗುವುದು ಎಂದು ಎಚ್ಚರಿಕೆ ನೀಡಿದರು.
ರೈತರಿಗೆ ಸರಿಯಾಗಿ ಬರ ಪರಿಹಾರ ಕೊಟ್ಟಿಲ್ಲ. ಕೇಂದ್ರದಿಂದ ಬಂದಿರುವ ಬರ ಪರಿಹಾರದ ಹಣದಲ್ಲೇ ರಾಜ್ಯ ಸರ್ಕಾರ ಎರಡು ಸಾವಿರ ರೂ. ಕಡಿತಗೊಳಿಸಿರುವುದು ಸರಿಯಲ್ಲ. ರಾಜ್ಯ ಸರ್ಕಾರವೂ ಕೇಂದ್ರದಷ್ಟೇ ಬರ ಪರಿಹಾರ ಬಿಡುಗಡೆ ಮಾಡಬೇಕು ಎಂದರು.
ಹಾನಗಲ್ಲ ತಾಲೂಕು ಘಟಕದ ಅಧ್ಯಕ್ಷ ಮರಿಗೌಡ ಪಾಟೀಲ ಮಾತನಾಡಿ, ಅಧಿಕಾರಿಗಳು ಜಿಲ್ಲೆಯಲ್ಲಿ ಗೊಬ್ಬರದ ಸಮಸ್ಯೆ ಇಲ್ಲ ಎನ್ನುತ್ತಿದ್ದಾರೆ. ಆದರೆ, ಎಲ್ಲಿಯೂ ರೈತರಿಗೆ ಸರಿಯಾಗಿ ಗೊಬ್ಬರ ಸಿಗುತ್ತಿಲ್ಲ, ಡಿಎಪಿ ಜತೆಗೆ ಬೇರೆ ಬೇರೆ ಗೊಬ್ಬರ ಲಿಂಕ್ ಮಾಡಿ ಕೊಡುತ್ತಿದ್ದಾರೆ. ಮೇಲಿಂದಲೇ ಸೊಸೈಟಿಗಳಿಗೆ, ಗೊಬ್ಬರದ ಅಂಗಡಿಗಳಿಗೆ ಲಿಂಕ್ ಆಗಿಯೇ ಬರುತ್ತಿರುವುದರಿಂದ ಅವರೂ ರೈತರಿಗೆ ಲಿಂಕ್ ಆಗಿಯೇ ಖರೀದಿಸುವಂತೆ ಒತ್ತಡ ಹಾಕುತ್ತಿದ್ದಾರೆ. ಡಿಎಪಿ ಅಷ್ಟೇ ಬೇಕು ಲಿಂಕ್ ಬೇಡ ಎಂದರೆ ದರ ಹೆಚ್ಚಿಸಿ ಮಾರಾಟ ಮಾಡುತ್ತಿದ್ದಾರೆ. ಸರ್ಕಾರ ಗೊಬ್ಬರ ಸರಬರಾಜು ಮಾಡುವಾಗಲೇ ಡಿಎಪಿ, ಯೂರಿಯಾ ಗೊಬ್ಬರದ ಜತೆ ಬೇರೆ ಗೊಬ್ಬರ ಲಿಂಕ್ ಮಾಡದಂತೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘಟನೆಯ ಪ್ರಮುಖರಾದ ಗಂಗಣ್ಣ ಎಲಿ, ಸುರೇಶ ಚಲವಾದಿ, ರಾಜು ತರ್ಲಗಟ್ಟ, ರಾಮಣ್ಣ ಕೋಟಿ, ಜಿ.ಎನ್.ಪ್ಯಾಟಿಗೌಡ್ರ, ಈರಣ್ಣ ಚಕ್ರಸಾಲಿ, ಸೋಮಣ್ಣ ಜಡೆಗೊಂಡ್ರ, ಎಂ.ಎಂ.ಬಡಿಗೇರ, ಇತರರಿದ್ದರು.
380 ಕೋಟಿ ರೂ. ಬೆಳೆ ವಿಮೆ ಬಾಕಿ
ಬೆಳೆವಿಮೆ ಸಾಕಷ್ಟು ಗೊಂದಲದ ಗೂಡಾಗಿದೆ. ಕಳೆದ ಮುಂಗಾರು ಹಂಗಾಮಿನಲ್ಲಿ ಬೆಳೆನಷ್ಟವಾದ ಹಿನ್ನೆಲೆಯಲ್ಲಿ ಶೇ.25ರಷ್ಟು ಮದ್ಯಂತರ ಪರಿಹಾರವಾಗಿ 127 ಕೋಟಿ ರೂ., ಬಿಡುಗಡೆ ಮಾಡಲಾಗಿತ್ತು. ಆದರೆ, ಉಳಿದ ಶೇ.75ರಷ್ಟು ಪರಿಹಾರವನ್ನೂ ಇನ್ನೂ ಕೊಟ್ಟಿಲ್ಲ. ರಾಜ್ಯದ ಇತರೆ ಜಿಲ್ಲೆಗಳಲ್ಲಿ ಬೆಳೆವಿಮೆ ಕೊಟ್ಟಿದ್ದರೂ ಇಲ್ಲಿ ಇನ್ನೂ ಕೊಟ್ಟಿಲ್ಲ. ವಿಮಾ ಕಂಪನಿಯವರು ಬೆಳೆ ಸಮೀಕ್ಷೆ ತಪ್ಪಾಗಿದೆ ಎಂದು ಜಿಲ್ಲಾಡಳಿತಕ್ಕೆ ಪತ್ರ ಬರೆದಿದ್ದರು. ಆದರೆ, ಜಿಲ್ಲಾಡಳಿತ ಬೆಳೆ ಸಮೀಕ್ಷೆ ಸರಿಯಾಗಿದೆ. ಬೆಳೆವಿಮಾ ಪರಿಹಾರ ನೀಡುವಂತೆ ಸೂಚಿಸಿದರೂ ವಿಮಾ ಕಂಪನಿಯರು ಕೇಂದ್ರ ಸರ್ಕಾರದ ಮೊರೆ ಹೋಗಿದ್ದು, ರೈತರು ಅಡಕತ್ತರಿಯಲ್ಲಿ ಸಿಲುಕಿದಂತಾಗಿದೆ ಎಂದು ಮಲ್ಲಿಕಾರ್ಜುನ ಬಳ್ಳಾರಿ ಆರೋಪಿಸಿದರು.
ಈಗ ಮುಂಗಾರು ಬಿತ್ತನೆ ಶುರುವಾಗುತ್ತಿದ್ದಂತೆ ಸರ್ಕಾರ, ಅಧಿಕಾರಿಗಳು ವಿಮಾ ಕಂಪನಿಯವರ ಏಜೆಂಟರಂತೆ ವರ್ತಿಸಿ ವಿಮೆ ಮಾಡಿಸಲು ಪ್ರಚಾರ ಮಾಡುತ್ತಿದ್ದಾರೆ. ರೈತರಿಂದ ವಿಮಾ ಕಂಪನಿಗಳು ಉದ್ದಾರ ಆಗುತ್ತಿವೆ ವಿನಃ ಅವುಗಳಿಂದ ರೈತರಿಗೆ ಏನೂ ಲಾಭವಾಗುತ್ತಿಲ್ಲ. ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ನೂತನ ಸಂಸದರಾಗಿ ಆಯ್ಕೆಯಾಗಿದ್ದು, ಬೆಳೆ ವಿಮೆ ಸಮಸ್ಯೆ ಬಗೆಹರಿಸಿ, ಜಿಲ್ಲೆಯ ಬಹುದಿನದ ಬೇಡಿಕೆಯಾದ ಡಿಸಿಸಿ ಬ್ಯಾಂಕ್ ಸ್ಥಾಪಿಸಲು ಮುಂದಾಗಬೇಕು ಎಂದು ಒತ್ತಾಯಿಸಿದರು.