ಜಿಲ್ಲೆ

ರೈತರ ಬೇಡಿಕೆಗಳ ಈಡೇರಿಕೆಗೆ ಫೆಬ್ರವರಿ 1ರ ಗಡವು; 12ನೇ ದಿನಕ್ಕೆ ಅಹೋರಾತ್ರಿ ಧರಣಿ ತಾತ್ಕಾಲಿಕವಾಗಿ ಅಂತ್ಯ

ಕೇಶವಮೂರ್ತಿ ಬೇಲೂರಪ್ಪನವರ

ಹಾವೇರಿ: ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತದ ಭರವಸೆ ಹಿನ್ನೆಲೆಯಲ್ಲಿ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಹಮ್ಮಿಕೊಂಡಿದ್ದ ಅಹೋರಾತ್ರಿ ಧರಣಿ ಸತ್ಯಾಗ್ರಹ 12ನೇ ದಿನಕ್ಕೆ ಬುಧವಾರ ತಾತ್ಕಾಲಿಕವಾಗಿ ಅಂತ್ಯಗೊಂಡಿದೆ. ಜನವರಿ 31ರೊಳಗಾಗಿ ರೈತರ ಎಲ್ಲ ಬೇಡಿಕೆಗಳನ್ನು ಈಡೇರಿಸದಿದ್ದಲ್ಲಿ ಫೆಬ್ರವರಿ 1ರಿಂದ ಮತ್ತೆ ದೊಡ್ಡ ಮಟ್ಟದ ಪ್ರತಿಭಟನೆ ಆರಂಭಿಸಲಾಗುವುದು ಎಂದು ರೈತ ಸಂಘ ಗಡವು ನೀಡಿದೆ.

ಬೇಡ್ತಿ ಹಾಗೂ ವರದಾ ನದಿ ಜೋಡಣೆ, ಪ್ರತ್ಯೇಕ ಡಿಸಿಸಿ ಬ್ಯಾಂಕ್ ಸ್ಥಾಪನೆ, ವಿದ್ಯುತ್ ಸಮಸ್ಯೆ ಪರಿಹಾರ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತ ಸಂಘದಿಂದ ಪ್ರತಿಭಟನೆ ಆರಂಭಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಬೆಳಗಾವಿಯ ಸುವರ್ಣಸೌಧದಲ್ಲಿ ಮಂಗಳವಾರ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಹಾಗೂ ಜಿಲ್ಲೆಯ ಶಾಸಕರು ರೈತ ನಾಯಕರೊಂದಿಗೆ ಸಭೆ ನಡೆಸಿ, ರೈತರ ಸಮಸ್ಯೆಗಳ ಕುರಿತು ಚರ್ಚಿಸಿ, ಧರಣಿ ಕೈಬಿಡುವಂತೆ ಮನವಿ ಮಾಡಿದ್ದರು. ಇಲ್ಲಿನ ಡಿಸಿ ಕಚೇರಿ ಎದುರು ಬುಧವಾರ ಪ್ರತಿಭಟನಾ ಸ್ಥಳದಲ್ಲಿ ರೈತರೊಂದಿಗೆ ಚರ್ಚಿಸಿದ ನಂತರ ತಾತ್ಕಾಲಿಕವಾಗಿ ಧರಣಿ ಅಂತ್ಯಗೊಳಿಸಿರುವುದಾಗಿ ಘೋಷಿಸಿದರು.

ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಮಾತನಾಡಿ, ಸುಮಾರು ಒಂದೂವರೆ ತಿಂಗಳ ಕಾಲಾವಕಾಶ ನೀಡಲಾಗವುದು. ಜನವರಿ ತಿಂಗಳಾಂತ್ಯದಲ್ಲಿ ರೈತರ ಎಲ್ಲ ಸಮಸ್ಯೆ ಬಗೆಹರಿಸಬೇಕು. ಜನವರಿಯಲ್ಲಿ ಡಿಸಿಸಿ ಪ್ರಾದೇಶಿಕ ಕಚೇರಿ ಆರಂಭಿಸಬೇಕು. ಎಲ್ಲ ಬೇಡಿಕೆ ಈಡೇರದಿದ್ದಲ್ಲಿ ಫೆಬ್ರವರಿ 1ರಿಂದ ಮತ್ತೆ ಪ್ರತಿಭಟನೆ ಆರಂಭಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ರೈತ ಸಂಘದ ಅಧ್ಯಕ್ಷ ರಾಮಣ್ಣ ಕೆಂಚಳ್ಳೇರ ಮಾತನಾಡಿ, ಎಂಟು ತಾಲೂಕುಗಳ ರೈತರು ವಿಪರೀತ ಚಳಿಯಲ್ಲೂ ಹಗಲು ರಾತ್ರಿ ಲೆಕ್ಕಿಸದೇ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ. ಬೆಳೆವಿಮೆಯಲ್ಲಿ ಸಾಕಷ್ಟು ತಾಂತ್ರಿಕ ದೋಷಗಳಿವೆ. ಫಸಲ್ ಭಿಮಾ ಯೋಜನೆ ರೈತರಿಗೆ ಪೂರಕ ಆಗದೇ ಮಾರಕವಾಗಿದೆ. ಅನೇಕ ಸಲ ಕಂಪನಿಯವರ ಕಿವಿ ಹಿಂಡಿ ರೈತರಿಗೆ ಪರಿಹಾರ ಕೊಡಿಸಿದ್ದೇವೆ. ಕಳೆದ ವರ್ಷ ಬೆಳೆ ಹಾನಿಯಾಗಿದ್ದ 33 ಪ್ರಕರಣಗಳನ್ನು ಬಾಕಿ ಉಳಿಸಿಕೊಂಡಿದ್ದಾರೆ. ಬೇಡ್ತಿ- ವರದಾ ನದಿ ಜೋಡಣೆ ಯೋಜನೆ ಜಾರಿಗೊಳಿಸುವ ಕುರಿತು ಸಚಿವರು ಭರವಸೆ ನೀಡಿದ್ದಾರೆ. ಅವರಿಗೆ ಅವಕಾಶ ಕೊಡೋಣ ಎಂದರು.

ಸ್ಥಳಕ್ಕಾಗಮಿಸಿ ರೈತರ ಅಹವಾಲು ಕೇಳಿದ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಮಾತನಾಡಿ, ನಮ್ಮ ಪ್ರಯತ್ನ ಮೀರಿ ರೈತರ ಸಮಸ್ಯೆಗಳ ಬಗೆಹರಿಸಲು ಯತ್ನಿಸಲಾಗುತ್ತಿದೆ. ಬೆಳೆಹಾನಿ ಪರಿಹಾರ 33 ಬಾಕಿ ಪ್ರಕರಣ ಬಗೆಹರಿಸಲು ಸರ್ಕಾರದಿಂದ ಪ್ರಯತ್ನ ನಡೆದಿದೆ. ಅಕ್ಟೋಬರ್‌ನಲ್ಲಿ ಮಳೆಯಿಂದ ಹಾನಿಗೀಡಾದ ಕುರಿತು 84 ಸಾವಿರ ಅರ್ಜಿ ಸಲ್ಲಿಕೆಯಾಗಿದ್ದು, ಇದರ ಪರಿಶೀಲನೆ ನಡೆದಿದೆ. ಕೃಷಿ ಆಯುಕ್ತರು ಹತ್ತು ದಿನದಲ್ಲಿ ಪರಿಹಾರದ ಭರವಸೆ ಕೊಟ್ಟಿದ್ದಾರೆ. ಕೈಬಿಟ್ಟು ಹೋಗಿರುವ ಹಳ್ಳಿಗಳ ಕುರಿತು ಪರಿಶೀಲನೆ ನಡೆಸಲಾಗುವುದು ಎಂದರು.

ಕೋಡಿಯಾಲ ಹೊಸಪೇಟೆಯ ಪುಣ್ಯಕೋಟಿ ಶ್ರೀಗಳು ಹೋರಾಟಕ್ಕೆ ಬೆಂಬಲಿಸಿದರು. ಕೃಷಿ ಇಲಾಖೆ ಜೆಡಿ ಮಲ್ಲಿಕಾರ್ಜುನ, ಪಶು ಇಲಾಖೆ ಡಿಡಿ ಡಾ.ಸತೀಶ ಸಂತಿ, ಎಚ್.ಎಚ್.ಮುಲ್ಲಾ, ಶಿವಯೋಗಿ ಚ ಹೊಸಗೌಡ್ರ, ಮಾಲತೇಶ ಪೂಜಾರ, ಅಡಿವೆಪ್ಪ ಆಲದಕಟ್ಟಿ, ಗಂಗಣ್ಣ ಎಲಿ, ಶಿವಬಸಪ್ಪ ಗೋವಿ. ಮಹಮ್ಮದ್ ಗೌಸ್ ಪಾಟೀಲ, ಮರಿಗೌಡ ಪಾಟೀಲ, ರುದ್ರಗೌಡ ಕಾಡನಗೌಡ್ರ, ಶಂಕ್ರಣ್ಣ ಶಿರಗುಂಬಿ, ಚನ್ನಪ್ಪ ಮರಡೂರ, ಪ್ರಭುಗೌಡ ಪ್ಯಾಟಿ, ಮಲ್ಲೇಶಪ್ಪ ಪರಪ್ಪನವರ, ಮುತ್ತಪ್ಪ ಗುಡಗೇರಿ, ಇತರರಿದ್ದರು.