ಜಿಲ್ಲೆ

ಒಂದೇ ಮಳೆಗೆ 47 ಮನೆಗಳಿಗೆ ಹಾನಿ

ಕೇಶವಮೂರ್ತಿ ಬೇಲೂರಪ್ಪನವರ

ಹಾವೇರಿ: ಜಿಲ್ಲೆಯಲ್ಲಿ ಬುಧವಾರ ರಾತ್ರಿ ಸುರಿದ ಭಾರಿ ಮಳೆಗೆ ಹಲವು ಅನಾಹುತ ಸಂಭವಿಸಿದ್ದು, 47 ಮನೆಗಳು ಕುಸಿದು ಬಿದ್ದಿವೆ.
ವಾಡಿಕೆಗಿಂತ ಹೆಚ್ಚಿನ ಮಳೆ ಸುರಿದ ಪರಿಣಾಮ ಹಲವೆಡೆ ಮನೆಗಳು ಹಾಗೂ ಗೋಡೆಗಳು ಧಾರಾಶಾಹಿಯಾಗಿವೆ. ಸವಣೂರ ತಾಲೂಕಿನಲ್ಲಿ 19, ಹಾನಗಲ್ಲ ತಾಲೂಕಿನಲ್ಲಿ 17, ಹಿರೇಕೆರೂರ ತಾಲೂಕಿನಲ್ಲಿ 6, ಬ್ಯಾಡಗಿ 3, ರಟ್ಟಿಹಳ್ಳಿ 1, ಶಿಗ್ಗಾಂವಿ ತಾಲೂಕಿನಲ್ಲಿ 1 ಮನೆ ಕುಸಿದು ಬಿದ್ದಿವೆ. ಸವಣೂರಲ್ಲಿ ಒಂದು ದನದ ಕೊಟ್ಟಿಗೆ ಹಾಳಾಗಿದೆ.
ಅ.1ರಿಂದ 9ರವರೆಗೆ ವಾಡಿಕೆಯಂತೆ 46 ಮಿಮೀ ಮಳೆ ಆಗಬೇಕಿತ್ತು. ಆದರೆ, 49 ಮಿಮೀ ಮಳೆ ಸುರಿದಿದೆ. ನಾಗೇಂದ್ರನಮಟ್ಟಿ ರೈಲ್ವೆ ಕೆಳಸೇತುವೆಯ ನೀರನಲ್ಲಿ ಸಿಲುಕಿದ್ದ ಆಟೋವನ್ನು ಗುರುವಾರ ಬೆಳಗ್ಗೆ ಹೊರತೆಗೆಯಲಾಗಿದೆ. ಅದೃಷ್ಟವಶಾತ್ ಯಾವುದೇ ಜೀವಹಾನಿಯಾಗಿಲ್ಲ. ಅದೃಷ್ಟವಶಾತ್ ಯಾವುದೇ ಜೀವಹಾನಿಯಾಗಿಲ್ಲ ಎಂದು ಅಪರ ಜಿಲ್ಲಾಧಿಕಾರಿ ಡಾ.ನಾಗರಾಜ ಎಲ್. ‘ವಿಜಯವಾಣಿ’ಗೆ ತಿಳಿಸಿದರು.

ನೀರಲ್ಲಿ ಸಿಲುಕಿದ ಎಂಎಲ್ಸಿ ಕಾರು, ಅಪಾಯದಿಂದ ಪಾರು
ಹಾವೇರಿ: ನಗರದಲ್ಲಿ ಬುಧವಾರ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಇಲ್ಲಿನ ತಹಸೀಲ್ದಾರ್ ಕಚೇರಿಯ ಮುಂಭಾಗದಲ್ಲಿ ತಗ್ಗು ಪ್ರದೇಶದಲ್ಲಿ ವಿಧಾನ ಪರಿಷತ್ ಸದಸ್ಯ ಡಾ.ಧನಂಜಯ ಸರ್ಜಿ ಅವರಿದ್ದ ಕಾರು ಮಳೆ ನೀರಿನಲ್ಲಿ ಸಿಲುಕಿತ್ತು.
ಇದರಿಂದಾಗಿ ಡಾ.ಸರ್ಜಿ ಕಾರಿನಿಂದ ಹೊರಬರಲು ಪರದಾಡಿದರು. ನಂತರ ಸ್ಥಳೀಯರ ಸಹಾಯದಿಂದ ಡಾ.ಸರ್ಜಿ ಸುರಕ್ಷಿತವಾಗಿ ಹೊರಬಂದರು.
ಇಲ್ಲಿ ಎಜಿಪಿ ಗ್ಯಾಸ್ ಕಂಪನಿಯವರು ಪೈಪ್‌ಲೈನ್ ಅಳವಡಿಕೆಗಾಗಿ ರಸ್ತೆಬದಿ ಗುಂಡಿ ಅಗೆದಿದ್ದರಿಂದ ಇಲ್ಲಿ ಹೆಚ್ಚಿನ ಪ್ರಮಾಣದ ನೀರು ಸಂಗ್ರಹವಾಗಿತ್ತು. ಇದರಿಂದ ಕೆಲಕಾಲ ಹಲವು ವಾಹನಗಳು ಸಿಲುಕಿದ್ದವು.
ಸ್ಥಳಕ್ಕೆ ಜಿಲ್ಲಾಧಿಕಾರಿ ಡಾ.ವಿಜಯ ಮಹಾಂತೇಶ ದಾನಮ್ಮನವರ ಭೇಟಿ ನೀಡಿ ಪರಿಶೀಲಿಸಿದರು. ಗುಂಡಿ ಮುಚ್ಚುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಗುರುವಾರ ಬೆಳಗ್ಗೆ ನೀರು ತೆರವುಗೊಳಿಸಿ ಸ್ಥಳದಲ್ಲಿ ಬ್ಯಾರಿಕೇಡ್ ಅಳವಡಿಸಲಾಯಿತು.