ಜಿಲ್ಲೆ

ಲೂಟಿಕೋರರಿಗೆ ಸಿದ್ದರಾಮಯ್ಯ ಗಾಡ್‌ಫಾದರ್; ಸಿಎಂಗೆ ಧಮ್ ಇದ್ದರೆ ಬಿ.ಆರ್ ಪಾಟೀಲ ಅಮಾನತು ಮಾಡಲಿ; ವಿಪಕ್ಷ ನಾಯಕ ಆರ್.ಅಶೋಕ ಸವಾಲು

ಕೇಶವಮೂರ್ತಿ ಬೇಲೂರಪ್ಪನವರ

ಹಾವೇರಿ: ವಸತಿ ಸಚಿವ ಜಮೀರ್ ಅಹ್ಮದ್ ಖಾತೆಯಲ್ಲಿ ಕೋಟ್ಯಂತರ ರೂಪಾಯಿ ಲೂಟಿ ಆಗುತ್ತಿದೆ ಎಂದು ಕಾಂಗ್ರೆಸ್ ಶಾಸಕ ಬಿ.ಆರ್ ಪಾಟೀಲರೇ ಹೇಳಿದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಕ್ರಮ ಜರುಗಿಸದೇ ಲೂಟಿ ಮಾಡುವವರ ಗಾಡ್ ಫಾದರ್ ಎಂಬುದನ್ನು ಒಪ್ಪಿಕೊಂಡಿದ್ದಾರೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ ಆರೋಪಿಸಿದರು. ನಗರದಲ್ಲಿ ಸೋಮವಾರ ಬಿಜೆಪಿ ನೂತನ ಜಿಲ್ಲಾಧ್ಯಕ್ಷರ ಪದಗ್ರಹಣ ಸಮಾರಂಭಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಇಷ್ಟು ದಿನ ನಿದ್ದೆರಾಮಯ್ಯ ಆಗಿದ್ದರು. ಈಗ ಮೂಖರಾಮಯ್ಯ ಆಗಿದ್ದಾರೆ. ವಿಪಕ್ಷದವರು ಆರೋಪಿಸಿದ್ದರೆ, ಅವರಿಗೆ ಮಾನ, ಮರ್ಯಾದೆ ಇಲ್ಲ ಎನ್ನುತ್ತಾರೆ. ಈಗ ಅವರ ಶಾಸಕರೇ ಆರೋಪಿಸಿದ್ದಾರೆ. ಹೌಸಿಂಗ್ ಬೋರ್ಡ್ ಹಗರಣದಲ್ಲಿ ಸಿಎಂರಿಂದ ಹಿಡಿದು ಎಲ್ಲರ ಪಾಲು ಇದೆ. ಮುಸ್ಲಿಮರಿಗೆ ಶೇ.15ರಷ್ಟು ಹಿಂದುಗಳಿಗೆ ಶೇ.60ರಷ್ಟು ಲಂಚ ಪಡೆಯಲಾಗುತ್ತಿದೆ. ವಸತಿ ಯೋಜನೆಯಡಿ ಮನೆ ಕಟ್ಟಲು ಅರ್ಜಿ ಬೇಡ. ಸಿಎಂ ಮರ್ಜಿ ಇದ್ದರೆ ಸಾಕು. ಮಿನಿಸ್ಟರ್ ಆಫೀಸ್‌ಗೆ ಶೇ.13 ಕೊಡಬೇಕು. ಇಂಜಿನಿಯರ್‌ಗಳಿಗೆ ಶೇ.10ರಷ್ಟು ಸೇರಿ ಒಟ್ಟು ಶೇ.36ರಷ್ಟು ಕಮಿಷನ್ ಕೊಡಬೇಕು ಎಂದರು.

ಕಾಸು ಇದ್ದವರಿಗೆ ಮನೆ ಎಂದು ಹೌಸಿಂಗ್ ಬೋರ್ಡ್ ಸ್ಲೋಗನ್ ಬದಲಾಗಿದೆ. ಪ್ರತಿ ಮನೆಯಿಂದ ಶೇ.36ರಷ್ಟು ಕಮಿಷನ್ ಲೂಟಿ ಹೊಡೆದಿದ್ದಾರೆ. 2,100 ರೂ. ಕೊಳ್ಳೆ ಹೊಡೆದಿದ್ದಾರೆ. ಇದನ್ನು ಬಿ.ಆರ್ ಪಾಟೀಲರು ಸ್ಪಷ್ಟವಾಗಿ ಹೇಳಿದ್ದಾರೆ. ನಂದೇ ಧ್ವನಿ ಏನು ಬೇಕಾದರೂ ಮಾಡಿಕೊಳ್ಳಿ ಎಂದಿದ್ದಾರೆ. ಸಿಎಂಗೆ ಮಾನ, ಮರ್ಯಾದೆ ಇದ್ದರೆ ಧಮ್ ಇದ್ದರೆ ಬಿ.ಆರ್ ಪಾಟೀಲರನ್ನು ಅಮಾನತು ಮಾಡಬೇಕು ಎಂದು ಆಗ್ರಹಿಸಿದರು.

25 ಕೋಟಿ ಕೊಟ್ಟರೆ ಮಂತ್ರಿ ಸ್ಥಾನ ಸೇಫ್ ?

ಇನ್ನು 6 ತಿಂಗಳಲ್ಲಿ ಸಿಎಂ ಸ್ಥಾನ ಬೇರೆಯವರಿಗೆ ಬಿಟ್ಟು ಕೊಡಬೇಕು. ಅದಕ್ಕೆ ಕಾಸು ಮಾಡುವವರಿಗೆ ಸಿದ್ದರಾಮಯ್ಯ ರಕ್ಷಣೆ ನೀಡುತ್ತಿದ್ದಾರೆ. ಬಿಹಾರ ಚುನಾವಣೆಗಾಗಿ ಕಾಂಗ್ರೆಸ್ ಪಕ್ಷ ರಾಜ್ಯದಿಂದ ಹಣ ಸಂಗ್ರಹ ಮಾಡುತ್ತಿದೆ. ಎಲ್ಲ ಮಂತ್ರಿಗಳಿಗೂ ಹಣ ಫಿಕ್ಸ್ ಆಗಿದೆ. ಒಬ್ಬೊಬ್ಬ ಮಂತ್ರಿ 25 ಕೋಟಿ ಕೊಡಬೇಕು. 25 ಕೋಟಿ ಕೊಟ್ಟರೆ ಮಂತ್ರಿ ಸ್ಥಾನ ಸೇಫು. ಇಲ್ಲದಿದ್ದರೆ ಬದಲಾವಣೆ ಮಾಡುತ್ತೇವೆ ಎಂದು ಬೆದರಿಕೆ ಒಡ್ಡುತ್ತಿದ್ದಾರೆ. ಅಲ್ಲಿ ದುಡ್ಡು ಕೊಟ್ಟವರಿಗೆ ಮಂತ್ರಿಸ್ಥಾನ. ಇಲ್ಲಿ ದುಡ್ಡು ಕೊಟ್ಟವರಿಗೆ ಮನೆ. ಇದರ ವಿರುದ್ಧ ಬಿಜೆಪಿ ರಾಜ್ಯಾದ್ಯಂತ ಹೋರಾಟ ಮಾಡಲಿದೆ. ಹೌಸಿಂಗ್ ಬೋರ್ಡ್‌ಗೆ ಮುತ್ತಿಗೆ ಹಾಕಲಿದೆ ಎಂದು ಆರ್.ಅಶೋಕ ಹೇಳಿದರು.