ಹಾವೇರಿ: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ವತಿಯಿಂದ 2023ರಲ್ಲಿ ಮತ್ತೊಮ್ಮೆ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ನಡೆಸಲಾಗುವುದು. 2022-23ನೇ ಸಾಲಿನಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಹಾಗೂ ಅದಕ್ಕಿಂತ ಹಿಂದಿನ ವರ್ಷಗಳಲ್ಲಿ ಅನುತ್ತೀರ್ಣರಾದ ಅಭ್ಯರ್ಥಿಗಳಿಗೆ ಈ ಪರೀಕ್ಷೆಗೆ ನೋಂದಾಯಿಸಲು ಅವಕಾಶ ಕಲ್ಪಿಸಲಾಗಿದೆ.
ಮಾರ್ಚ್ 2023ರ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಹಾಗೂ ಮೇ 2023ರ ಪೂರಕ ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿರುವ ವಿದ್ಯಾರ್ಥಿಗಳಿಗೆ ಅನುತ್ತೀರ್ಣ ಅಂಕಪಟ್ಟಿ ಅರ್ಜಿಗಳನ್ನು ಮಂಡಳಿಯಿಂದ ನೀಡಲಾಗುವುದಿಲ್ಲ. ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಮಂಡಳಿಯಿಂದ ನೀಡಲಾಗುವ ಫಲಿತಾಂಶ ಪಟ್ಟಿಯ ಆಧಾರದ ಮೇಲೆ ಪೂರಕ ಪರೀಕ್ಷೆಗೆ ನೋಂದಾಯಿಸಿಕೊಂಡು ಪರೀಕ್ಷಾ ಶುಲ್ಕ ಸ್ವೀಕರಿಸಿ ಮಂಡಳಿಯ ಪಿಯು ಪರೀಕ್ಷೆ ಲಾಗಿನ್‌ನಲ್ಲಿ ವಿದ್ಯಾರ್ಥಿಯ ಮಾಹಿತಿ ಭರ್ತಿ ಮಾಡಬೇಕು.
2023ನೇ ಸಾಲಿಗಿಂತ ಹಿಂದಿನ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿರುವ ವಿದ್ಯಾರ್ಥಿಗಳಿಂದ ಮೂಲ ಅನುತ್ತೀರ್ಣ ಅಂಕಪಟ್ಟಿ/ಅರ್ಜಿ ಅಥವಾ ಹಿಂದಿನ ಎಂಸಿಎಗಳ ಆಧಾರದ ಮೇಲೆ ಪರೀಕ್ಷಾ ಶುಲ್ಕಗಳನ್ನು ಸ್ವೀಕರಿಸಿ ಮಂಡಲಿಯ ಪಿಯು ಪರೀಕ್ಷೆ ಲಾಗಿನ್‌ನಲ್ಲಿ ವಿದ್ಯಾರ್ಥಿಗಳ ಮಾಹಿತಿಯನ್ನು ಭರ್ತಿ ಮಾಡಲಾಗುವುದು.
2006ರಿಂದ ಹಿಂದಿನ ವರ್ಷಗಳಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಂದ ಮೂಲ ಅನುತ್ತೀರ್ಣ ಅಂಕಪಟ್ಟಿ/ಅರ್ಜಿ ಅಥವಾ ಹಿಂದಿನ ಎಂ.ಸಿ.ಎ.ಗಳ ಆಧಾರದ ಮೇಲೆ ಪರೀಕ್ಷಾ ಶುಲ್ಕಗಳನ್ನು ಸ್ವೀಕರಿಸಿ ಸಂಬಂಧಿಸಿದ ದಾಖಲೆಗಳನ್ನು ಪ್ರಾಂಶುಪಾಲರು ದೃಢೀಕರಿಸಿ ಮಂಡಳಿಗೆ ಸಲ್ಲಿಸಬೇಕು. ಫಲಿತಾಂಶ ತಿರಸ್ಕರಣೆಗೆ ಈ ಪರೀಕ್ಷೆಯಲ್ಲಿ ಅವಕಾಶವಿರುವುದಿಲ್ಲ.
ಪುನರಾವರ್ತಿತ ವಿದ್ಯಾರ್ಥಿಗಳ ಪರೀಕ್ಷಾ ಶುಲ್ಕ ಪಾವತಿಸಲು ಹಾಗೂ ಮಾಹಿತಿಯನ್ನು ಪ್ರಾಂಶುಪಾಲರು ಮಂಡಳಿಯ ಪಿಯು ಪರೀಕ್ಷೆ ಲಾಗಿನ್‌ನಲ್ಲಿ ನಮೂದಿಸಲು ಆಗಸ್ಟ್ 10 ಕೊನೆಯ ದಿನವಾಗಿದೆ. ಪ್ರಾಂಶುಪಾಲರು ಪರೀಕ್ಷಾ ಶುಲ್ಕವನ್ನು ಒಂದೇ ಕಂತಿನಲ್ಲಿ ಖಜಾನೆಗೆ ಆ.11ರೊಳಗೆ ಸಂದಾಯ ಮಾಡಬೇಕು. ಪ್ರಾಂಶುಪಾಲರು ಪರೀಕ್ಷಾ ಅರ್ಜಿಗಳನ್ನು ಮೂಲ ಚಲನ್ ಸಹಿತ ಜಿಲ್ಲಾ ಉಪನಿರ್ದೇಶಕರ ಕಚೇರಿಗೆ ಆ.12ರ ಒಳಗಾಗಿ ಸಲ್ಲಿಸಬೇಕು ಎಂದು ಡಿಡಿಪಿಯು ಡಾ.ಎಚ್.ಉಮೇಶಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪರೀಕ್ಷಾ ಶುಲ್ಕ:
ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ 2ಕ್ಕೆ ಪುನರಾವರ್ತಿತ ವಿದ್ಯಾರ್ಥಿಗಳು (ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಹಾಗೂ ಪ್ರವರ್ಗ-1ರ ವಿದ್ಯಾರ್ಥಿಗಳನ್ನು ಹೊರತುಪಡಿಸಿ) ಪರೀಕ್ಷಾ ಶುಲ್ಕ ಒಂದು ವಿಷಯಕ್ಕೆ 210 ರೂ., ಎರಡು ವಿಷಯಕ್ಕೆ 410 ರೂ. ಹಾಗೂ ಮೂರು ಅಥವಾ ಹೆಚ್ಚಿನ ವಿಷಯಗಳಿಗೆ 600 ರೂ. ಪಾವತಿಸಬೇಕು.