ಜಿಲ್ಲೆ

ಸೌಹಾರ್ದತೆಯ ಬೆಳವಣಿಗೆಗೆ ಕ್ರೀಡೆ ಸಹಕಾರಿ; ಪದವಿಪೂರ್ವ ಕಾಲೇಜು ಕ್ರೀಡಾಕೂಟದಲ್ಲಿ ಡಿಡಿಪಿಯು ಡಾ.ಉಮೇಶಪ್ಪ

ಹಾವೇರಿ: ನಮ್ಮ ಪರಂಪರೆಯಿಂದಾಗಿ ಮನುಷ್ಯನ ಬದುಕಿನಲ್ಲಿ ಕ್ರೀಡಾ ಚಟುವಟಿಕೆ ಅವಿಭಾಜ್ಯ ಅಂಗವಾಗಿ ಹಾಸುಹೊಕ್ಕಾಗಿದೆ. ಸೌಹಾರ್ದತೆ, ಮಾನಸಿಕ ಹಾಗೂ ದೈಹಿಕ ಚೈತನ್ಯಕ್ಕೆ ಕ್ರೀಡೆ ಸಹಕಾರಿಯಾಗಿದೆ ಎಂದು ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಡಾ.ಉಮೇಶಪ್ಪ ಎಚ್. ಹೇಳಿದರು.
ನಗರದ ಹೊಸಮನಿ ಸಿದ್ದಪ್ಪ ಜಿಲ್ಲಾ ಕ್ರೀಡಾಂಗಣದಲ್ಲಿ ಮಂಗಳವಾರ ಪದವಿಪೂರ್ವ ಶಿಕ್ಷಣ ಇಲಾಖೆ ಹಾಗೂ ಜಿಲ್ಲಾ ಮಟ್ಟದ ಶಾಲಾ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಪದವಿಪೂರ್ವ ಕಾಲೇಜುಗಳ ಇಲಾಖೆಯ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು.
ಮನುಷ್ಯನ ಅನೇಕ ಶ್ರಮದಾಯಕ ಕೆಲಸ- ಕಾರ್ಯಗಳ ನಡುವೆಯೂ, ಕ್ರೀಡೆ ವ್ಯಕ್ತಿಯ ಮನಸ್ಸು ಹಾಗೂ ದೇಹಕ್ಕೆ ಹಿತ ನೀಡುವಂತಹದ್ದು. ಇದು ಪರಂಪರೆಯಿಂದ ಬೆಳೆದು ಬಂದಿದೆ. ಹೀಗಾಗಿ ವಿದ್ಯಾರ್ಥಿಗಳು ಕ್ರೀಡೆಯನ್ನು ಲಘುವಾಗಿ ಪರಿಗಣಿಸದೇ ಉತ್ಸಾಹದಿಂದ ಪಾಲ್ಗೊಳ್ಳಬೇಕು. ಈ ಮೂಲಕ ದೇಶದ ಕ್ರೀಡಾ ಪರಂಪರೆಯನ್ನು ಉನ್ನತ ಮಟ್ಟಕ್ಕೆ ಬೆಳೆಸಬೇಕು ಎಂದರು.
ರಾಜ್ಯ ಮಟ್ಟದ ಫುಟ್‌ಬಾಲ್ ಕ್ರೀಡಾಪಟುಗಳಾದ ಸುಹಾನ್, ವಿಕಾಸ್, ಅಮಿತ್, ಕಾರ್ತಿಕ, ರೋಷನ್ ಕ್ರೀಡಾ ಜ್ಯೋತಿ ಬೆಳಗಿಸಿದರು. ಉಪನ್ಯಾಸಕ ಶಿವರಾಜ ಗುಂಡೆ ಕ್ರೀಡಾಪಟುಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಕ್ರೀಡಾಕೂಟದಲ್ಲಿ ಜಿಲ್ಲಾ ಮಟ್ಟದ ವಿವಿಧ ವಿದ್ಯಾರ್ಥಿ ಕ್ರೀಡಾ ತಂಡಗಳು ಭಾಗವಹಿಸಿದ್ದವು.
ಕಾರ್ಯಕ್ರಮದಲ್ಲಿ ದೈಹಿಕ ಉಪನ್ಯಾಸಕ ಸಂಘದ ಸದಸ್ಯರಾದ ಬಿ.ಎಂ.ಗುರುಮಠ, ಶಿವಯೋಗಿ ಎಂ.ಬಿ, ಬಿ.ಎಂ.ಗುರುಮಠ, ಭೀರಪ್ಪ ಲಮಾಣಿ, ಜೆ.ಎನ್.ಹಟ್ಟಿಯವರ, ದಿಲ್‌ದರ ಪಾಟಿ, ಶಿವಕುಮಾರ ಕೋಣನತಲಿ, ರಾಜಾ ನಾಯ್ಕ, ಮತ್ತಿತರರು ಉಪಸ್ಥಿತರಿದ್ದರು. ಉಪನ್ಯಾಸಕ ರಾಜೇಂದ್ರ ಕುಮಾರ ಸ್ವಾಗತಿಸಿದರು. ಶಿವಯೋಗಿ ಎಂ.ಬಿ ವಂದಿಸಿದರು. ಶಿವಾನಂದ ಕಾಕೋಳ ನಿರೂಪಿಸಿದರು.