ಹಾವೇರಿ: ಭಾರತೀಯ ರಿಸರ್ವ್ ಬ್ಯಾಂಕ್(ಆರ್‌ಬಿಐ)ನಿಂದ ಮಾನ್ಯತೆ ಪಡೆದ ಜಿಲ್ಲೆಯ ಏಕೈಕ ಮಹಿಳಾ ಸಹಕಾರಿ ಬ್ಯಾಂಕ್ ಪ್ರಿಯದರ್ಶಿನಿ ಮಹಿಳಾ ಅರ್ಬನ್ ಸಹಕಾರಿ ಬ್ಯಾಂಕ್‌ನ ಬೆಳ್ಳಿ ಉತ್ಸವ ಸಮಾರಂಭವನ್ನು ಅ.20ರಂದು ಬೆಳಗ್ಗೆ 11 ಗಂಟೆಗೆ ದಾನೇಶ್ವರಿ ನಗರದ ರಜನಿ ಸಭಾಭವನದಲ್ಲಿ ಆಯೋಜಿಸಲಾಗಿದೆ ಎಂದು ಬ್ಯಾಂಕ್‌ನ ಅಧ್ಯಕ್ಷೆ ದಾಕ್ಷಾಯಣಿ ಬಿ. ಗಾಣಿಗೇರ ತಿಳಿಸಿದರು.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು, ಸಣ್ಣಪುಟ್ಟ ಕಾರ್ಯಕ್ರಮ, ಪಾರ್ಟಿ ಎಂದು ಓಡಾಡಿಕೊಂಡಿದ್ದ ಮಹಿಳಾ ತಂಡಕ್ಕೆ ಏನಾದರೂ ಮಹತ್ಕಾರ್ಯ ಮಾಡಬೇಕು ಎಂಬ ಚಿಂತನೆ ಬಂದಾಗ ಆರಂಭವಾಗಿದ್ದೇ ಈ ಸಹಕಾರ ಬ್ಯಾಂಕ್. ಆರಂಭದಲ್ಲಿ ಕೇವಲ 7 ಲಕ್ಷ ರೂ. ಬಂಡವಾಳದೊಂದಿಗೆ ಆರಂಭವಾದ ಬ್ಯಾಂಕ್ ತನ್ನ ಕಾರ್ಯತತ್ಪರತೆಯಿಂದ ಪ್ರಸ್ತುತ 28 ಕೋಟಿ ರೂ. ದುಡಿಯುವ ಬಂಡವಾಳ ಹಾಗೂ 40 ಕೋಟಿ ರೂ. ವಹಿವಾಟು ಹೊಂದಿದೆ ಎಂದರು.
ಸಹಕಾರಿ ಬ್ಯಾಂಕ್‌ನಲ್ಲಿ ಸದ್ಯ 2,600 ಸದಸ್ಯರಿದ್ದಾರೆ. ಜಿಲ್ಲೆಯ ಎಲ್ಲ ತಾಲೂಕು ಕೇಂದ್ರಗಳಲ್ಲಿ ಮುಂಬರುವ ದಿನಗಳಲ್ಲಿ ಶಾಖೆಗಳನ್ನು ತೆರೆಯಲಾಗುವುದು. ಡಿಜಿಟಲ್ ಸೌಲಭ್ಯ, ಮೊಬೈಲ್ ಬ್ಯಾಂಕಿಂಗ್, ಎಟಿಎಂ, ಮತ್ತಿತರ ಅಗತ್ಯ ಸೌಲಭ್ಯಗಳನ್ನು ನೀಡಲು ನಿರ್ಧರಿಸಲಾಗಿದೆ ಎಂದರು.
ಸಮಾರಂಭವನ್ನು ಸಚಿವ ಎಚ್.ಕೆ.ಪಾಟೀಲ ಉದ್ಘಾಟಿಸಲಿದ್ದು, ಹುಕ್ಕೇರಿ ಮಠದ ಶ್ರೀ ಸದಾಶಿವ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಸಂಸದ ಬಸವರಾಜ ಬೊಮ್ಮಾಯಿ ಸ್ಮರಣ ಸಂಚಿಕೆ ಬಿಡುಗಡೆ ಮಾಡುವರು. ಬೆಂಗಳೂರು ಆರ್‌ಬಿಐನ ಪ್ರಧಾನ ವ್ಯವಸ್ಥಾಪಕಿ ಮೀನಾಕ್ಷಿ ಗಡ, ಶಾಸಕ ರುದ್ರಪ್ಪ ಲಮಾಣಿ, ಶಶಿಕಲಾ ಮಾಳಗಿ, ಪ್ರಿಯದರ್ಶಿನಿ ಬಸೇಗೆಣ್ಣಿ, ಡಾ.ಕಲ್ಪನಾ ಎಂ.ಎಸ್., ಪ್ರಗ್ಯಾ ಆನಂದ, ಇತರ ಗಣ್ಯರು ಭಾಗವಹಿಸುವರು ಎಂದು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಬ್ಯಾಂಕ್‌ನ ನಿರ್ದೇಶಕರಾದ ರತ್ನವ್ವ ಹೆರೂರ, ಯಶೋಧಾ ಮಾಸೂರ, ರತ್ನಾ ಅಂಗಡಿ, ಅಂಜನಾ ಕುಂಠೆ, ಲೀಲಾ ಗಡಾದ, ಸುಧಾ ಆನೂರಶೆಟ್ರು, ಪ್ರವೀಣಾ ಕೋರಿಶೆಟ್ಟರ, ಶೈಲಾ ಬಸೇಗೆಣ್ಣಿ, ಪಾರ್ವತಿ ಭಾವನೂರ, ಪೂಜಾ ಶೆಟ್ಟರ, ಇತರರಿದ್ದರು.