ಹಾವೇರಿ: ಗಾಂಜಾ ಸಾಗಾಟ ಮತ್ತು ಮಾರಾಟ ಮಾಡುತ್ತಿದ್ದ ನಾಲ್ಕು ಜನ ಆರೋಪಿಗಳನ್ನು ಬಂಧಿಸಿ 7.91 ಲಕ್ಷ ರೂ. ಮೌಲ್ಯದ 9 ಕೆಜಿಗೂ ಅಧಿಕ ಗಾಂಜಾ ವಶ ಪಡಿಸಿಕೊಳ್ಳಲಾಗಿದೆ ಎಂದು ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ. ಗೋಪಾಲ ತಿಳಿಸಿದರು.
ನಗರದ ಶಹರ ಪೊಲೀಸ್ ಠಾಣೆಯಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಾವೇರಿ ನಾಗೇಂದ್ರನಮಟ್ಟಿ 7ನೇ ಕ್ರಾಸ್‌ನ ದಿಳ್ಳೆಪ್ಪ ಮಲ್ಲಪ್ಪ ಅಳಲಗೇರಿ, ಸುಭಾಸ್ ಸರ್ಕಲ್‌ನ ಪಾರೂಕ್‌ಅಹ್ಮದ್ ಕುಂಚೂರು, ಇಸ್ಮಾಯಿಲ್ ಮದರಸಾಬ್ ನದಾಫ, ಸಾಹಿಲ್ ಸಲೀಂ ಕರ್ಜಗಿ ಬಂಧಿತ ಆರೋಪಿಗಳು ಎಂದು ತಿಳಿಸಿದರು.
ಆರೋಪಿ ದಿಳ್ಳೇಪ್ಪ ಅಳಲಗೇರಿ ಒರಿಸ್ಸಾ ರಾಜ್ಯದ ಸಿಲೇರೋ ಪಟ್ಟಣದಿಂದ ಸುಮಾರು 9900 ಗ್ರಾಂ ತೂಕದ ನಿಷೇಧಿತ ಹೂವು, ಮೊಗ್ಗು, ಬೀಜ ಮಿಶ್ರಿತ ಗಾಂಜಾವನ್ನು ರೈಲಿನಲ್ಲಿ ಸಾಗಾಟ ಮಾಡಿಕೊಂಡು ತಂದಿದ್ದ. ಜೂ. 6ರ ಸಂಜೆ ವೇಳೆಯಲ್ಲಿ ಹಾವೇರಿ ರೈಲ್ವೆ ನಿಲ್ದಾಣಕ್ಕೆ ತೆರಳುವ ಬ್ರೀಡ್ಜ್ ಕೆಳಗಡೆ ಆರೋಪಿತರೆಲ್ಲರೂ ಗುಂಪುಗೂಡಿ ಅಕ್ರಮವಾಗಿ ತಂದಿದ್ದ ಗಾಂಜಾವನ್ನು ಪ್ಯಾಕೇಟ್ ರೂಪದಲ್ಲಿ ಸಿದ್ದಪಡಿಸಿ ಸ್ಥಳೀಯವಾಗಿ ಮಾರಾಟ ಮಾಡಲು ಯತ್ನಿಸುತ್ತಿದ್ದಾಗ ಪೊಲೀಸರು ಸಂಶಯ ವ್ಯಕ್ತಪಡಿಸಿ ದಾಳಿ ನಡೆಸಿದ್ದಾರೆ. ದಾಳಿ ನಡೆಸಿದ ಕಾಲಕ್ಕೆ ಪ್ರಕರಣ ಬೆಳಕಿಗೆ ಬಂದಿದ್ದು, ನಾಲ್ಕು ಆರೋಪಿಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಆರೋಪಿತರು ಜಮೀನು ಕೆಲಸ, ಗ್ಯಾರೇಜ್ ಕೆಲಸ ಮಾಡಿಕೊಂಡಿದ್ದು, ಇದೇ ಮೊದಲ ಬಾರಿಗೆ ಯತ್ನಿಸಿರುವ ಮಾಹಿತಿ ಸಿಕ್ಕಿದೆ. ಹೆಚ್ಚಿನ ಮಾಹಿತಿ ತನಿಖೆಯ ನಂತರ ತಿಳಿಯಲಿದೆ. ಆರೋಪಿಗಳನ್ನು ಸದ್ಯ ನ್ಯಾಯಾಂಗ ಬಂಧಕ್ಕೆ ಒಪ್ಪಿಸಲಾಗಿದೆ ಎಂದರು.
ಹಾವೇರಿ ಶಹರ ಠಾಣೆಯ ತನಿಖಾಧಿಕಾರಿ ರಘು ಟಿ., ಸಿಬ್ಬಂದಿಯಾದ ಎಂ.ಜಿ. ಯರೇಶಿಮಿ, ಮುತ್ತು ಲಮಾಣಿ, ಕೆ.ಬಿ. ಮುದಿಯಮ್ಮನವರ, ಚನ್ನಬಸಪ್ಪ ಆರ್.ಬಿ., ನೀಲಕಂಠ ಲಿಂಗರಾಜು, ಎಂ.ಎಸ್. ಮೆಣಸಕ್ಕನವರ, ಚಂದ್ರಕಾಂತ ಎಲ್.ಆರ್., ಮಾಲತೇಶ ಕಬ್ಬೂರ, ಮಾರುತಿ ಹಾಲಭಾವಿ, ಸತೀಶ ಮಾರಕಟ್ಟೆ ಕಾರ್ಯಾಚರಣೆ ತಂಡದಲ್ಲಿದ್ದರು ಎಂದು ತಿಳಿಸಿದರು.
ಹಾವೇರಿ ಉಪ ವಿಭಾಗದ ಡಿವೈಎಸ್ಪಿ ಗಣೇಶ ಕೆ.ಎಲ್., ಶಹರ ಪೊಲೀಸ್ ಠಾಣೆ ಸಿಪಿಐ ಮೋತಿಲಾಲ್ ಪವಾರ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.